ಬ್ರಾಹ್ಮಣವಾದದ ವಿರುದ್ಧ ಫೇಸ್ ಬುಕ್ ಪೋಸ್ಟ್: ವ್ಯಕ್ತಿಯ ಬಂಧನ

Update: 2019-05-19 18:15 GMT

ಮುಂಬೈ, ಮಾ 19: ಬ್ರಾಹ್ಮಣವಾದದ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಬರಹ ಪೋಸ್ಟ್ ಮಾಡಿದ ಆರೋಪದಲ್ಲಿ ಮುಂಬೈಯ ಡಾ ಸುನಿಲ್ ಕುಮಾರ್ ನಿಷದ್ ಎಂಬ ವ್ಯಕ್ತಿಯನ್ನು ಬಂಧಿಸಿ ಬಳಿಕ ಬಿಡುಗಡೆಗೊಳಿಸಲಾಗಿದೆ.

ನಿಷದ್ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಬರಹದ ವಿರುದ್ಧ ಮುಂಬೈಯ ಪಾರ್ಕ್‌ಸೈಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾದ ಬಳಿಕ ಅವರನ್ನು ಬುಧವಾರ ಬಂಧಿಸಲಾಗಿದೆ. ಒಂದು ರಾತ್ರಿ ಅವರು ಠಾಣೆಯಲ್ಲೇ ಕಳೆದಿದ್ದು ಗುರುವಾರ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ.

“ಬ್ರಾಹ್ಮಣವಾದ ಎಂಬ ಶತ್ರುವನ್ನು ಎದುರಿಸಿ ನಾಶವಾಗಿಸಬೇಕು. ಜನರು ಬ್ರಾಹ್ಮಣವಾದವನ್ನು ಹಿಂದು ಧರ್ಮದ ಜೊತೆ ಸಮೀಕರಿಸುವುದೇ ಬಹುದೊಡ್ಡ ಸಮಸ್ಯೆಯಾಗಿದೆ. ಮನುವಾದ ಅಥವಾ ಅಂಬೇಡ್ಕರ್‌ವಾದದ ರೀತಿ ಬ್ರಾಹ್ಮಣವಾದವೂ ಒಂದು ಜೀವನಕ್ರಮವಾಗಿದೆ. ನಾನು ತಾರತಮ್ಯದ ತತ್ವಗಳನ್ನು ಒಳಗೊಂಡಿರುವ, ಅಸ್ಪ್ರಶ್ಯತೆ, ಜಾತಿಯ ಆಧಾರದಲ್ಲಿ ಮೇಲು -ಕೀಳು ಎಂದು ಪರಿಗಣಿಸುವ ಬ್ರಾಹ್ಮಣವಾದದ ವಿರುದ್ಧವಾಗಿದ್ದೇನೆ. ನಾನೂ ಕೂಡಾ ಓರ್ವ ಹಿಂದೂವಾಗಿದ್ದರೂ ನನ್ನ ಧರ್ಮದಲ್ಲಿ ಬ್ರಾಹ್ಮಣವಾದಕ್ಕೆ ಆಸ್ಪದವಿಲ್ಲ” ಎಂದು ನಿಷದ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ನಿಷದ್ ಸಮುದಾಯ ಇತರ ಹಿಂದುಳಿದ ವರ್ಗ(ಒಬಿಸಿ)ಯಡಿ ಬರುತ್ತದೆ.

“ಜ್ಯೋತಿಬಾ ಫುಲೆ, ಶಾಹು ಮಹಾರಾಜ್ ಮತ್ತು ಡಾ ಬಿಆರ್ ಅಂಬೇಡ್ಕರ್ ಅವರ ತತ್ವ, ಸಿದ್ಧಾಂತಗಳು ಸಮಾನತೆ, ಭ್ರಾತೃತ್ವ ಮತ್ತು ನ್ಯಾಯವನ್ನು ಪ್ರತಿಪಾದಿಸುತ್ತಿದ್ದು ಅದನ್ನು ನಾನು ಅನುಸರಿಸುತ್ತೇನೆ. ಈ ಸಿದ್ಧಾಂತಗಳಿಗೆ ವಿರುದ್ಧವಾದ ಯಾವುದೇ ಜೀವನಕ್ರಮ(ಉದಾಹರಣೆಗೆ ಮನುವಾದ)ವನ್ನು ವಿರೋಧಿಸುತ್ತೇನೆ. ನಾನು ಫೇಸ್‌ಬುಕ್‌ನಲ್ಲಿ ಬರೆದಿರುವುದು ದ್ವೇಷ ಹಂಚಿಕೆಯ ಉದ್ದೇಶದಿಂದಲ್ಲ. ಜಾಗೃತಿ ಮೂಡಿಸಲೆಂದು ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದೇನೆ.

ನಾನು ಯಾರದ್ದೇ ಭಕ್ತನಲ್ಲ. ಒಬ್ಬರ ಭಕ್ತನಾಗುವುದರಿಂದ ಏನನ್ನೂ ಸಾಧಿಸಿದಂತಾಗುವುದಿಲ್ಲ. ಜ್ಯೋತಿಭಾ ಪುಲೆ ಹಾಗೂ ಸಾವಿತ್ರಿಭಾ ಫುಲೆಯಂತವರ ಚಿಂತನೆಗಳನ್ನು ನಾನು ಅನುಸರಿಸುತ್ತಿದ್ದೇನೆ” ಎಂದು ನಿಷದ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News