ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಗೆ ಯುವರಾಜ್ ಚಿಂತನೆ

Update: 2019-05-19 18:23 GMT

ಹೊಸದಿಲ್ಲಿ, ಮೇ 19: ಭಾರತದ ಓರ್ವ ಶ್ರೇಷ್ಠ ಸೀಮಿತ ಓವರ್ ಕ್ರಿಕೆಟಿಗ ಯುವರಾಜ್ ಸಿಂಗ್ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಲು ಚಿಂತನೆ ನಡೆಸುತ್ತಿದ್ದು, ಐಸಿಸಿ ಮಾನ್ಯತೆಯಿರುವ ವಿದೇಶಿ ಟ್ವೆಂಟಿ-20 ಲೀಗ್‌ಗಳಲ್ಲಿ ಭಾಗವಹಿಸಲು ಬಿಸಿಸಿಐ ಅನುಮತಿ ಪಡೆಯಲು ಯೋಚಿಸುತ್ತಿದ್ದಾರೆ ಎನ್ನಲಾಗಿದೆ.

ಬಿಸಿಸಿಐಯಿಂದ ವಿದೇಶದಲ್ಲಿ ಟಿ-20 ಲೀಗ್‌ಗಳಲ್ಲಿ ಆಡಲು ಅನುಮತಿ ದೊರೆತ ಬಳಿಕವೇ ಪಂಜಾಬ್‌ನ ಎಡಗೈ ದಾಂಡಿಗ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ತನಗಿನ್ನು ಭಾರತದ ಪರ ಆಡಲು ಸಾಧ್ಯವಿಲ್ಲ ಎಂದು ಯುವರಾಜ್‌ಗೆ ಈಗಾಗಲೇ ಮನವರಿಕೆಯಾಗಿದೆ ಎಂದು ತಿಳಿದುಬಂದಿದೆ.

‘‘ಯುವರಾಜ್ ಅಂತರ್‌ರಾಷ್ಟ್ರೀಯ ಹಾಗೂ ದೇಶೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಲು ಯೋಚಿಸುತ್ತಿದ್ದಾರೆ. ಜಿಟಿ-20(ಕೆನಡಾ), ಐರ್ಲೆಂಡ್‌ನ ಯುರೋ ಟಿ-20 ಸ್ಲಾಮ್ ಹಾಗೂ ಹಾಲೆಂಡ್‌ನಲ್ಲಿನ ಟೂರ್ನಮೆಂಟ್‌ಗಳಲ್ಲಿ ಆಡಲು ಬಿಸಿಸಿಐಯಿಂದ ಅನುಮತಿ ಪಡೆಯಲು ಮಾತುಕತೆ ನಡೆಸಲಿದ್ದಾರೆ’’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಇತ್ತೀಚೆಗೆ ಇರ್ಫಾನ್ ಪಠಾಣ್ ಅವರ ಹೆಸರು ಕೆರಿಬಿಯನ್ ಪ್ರೀಮಿಯರ್ ಲೀಗ್‌ನ ಮೊದಲ ಪಟ್ಟಿಯಲ್ಲಿ ಕಾಣಸಿಕೊಂಡಿತ್ತು. ಸಕ್ರಿಯ ಪ್ರಥಮ ದರ್ಜೆ ಕ್ರಿಕೆಟಿಗನಾಗಿರುವ ಪಠಾಣ್ ಬಿಸಿಸಿಐಯಿಂದ ಅನುಮತಿ ಪಡೆದಿಲ್ಲ.

 ‘‘ಇರ್ಫಾನ್ ತನ್ನ ಹೆಸರನ್ನು ಹಿಂದಕ್ಕೆ ಪಡೆಯುವುದಾಗಿ ಹೇಳಿದ್ದಾರೆ. ಯುವರಾಜ್‌ಗೆ ಸಂಬಂಧಿಸಿ ನಾವು ನಿಯಮವನ್ನು ಪರಿಶೀಲಿಸಬೇಕಾಗಿದೆ. ಒಂದು ವೇಳೆ ಅವರು ಪ್ರಥಮ ದರ್ಜೆ ಕ್ರಿಕೆಟ್‌ನಿಂದ ನಿವೃತ್ತಿಯಾದರೂ ಬಿಸಿಸಿಐನಿಂದ ನೋಂದಾಯಿತ ಸಕ್ರಿಯ ಟಿ-20 ಆಟಗಾರನಾಗಿರುತ್ತಾರೆ’’ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವರ್ಷದ ಐಪಿಎಲ್‌ನಲ್ಲಿ ಯುವರಾಜ್ ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಡಿದ್ದರು. ಆದರೆ, ಅವರಿಗೆ ಹೆಚ್ಚು ಆಡುವ ಅವಕಾಶ ಲಭಿಸಿರಲಿಲ್ಲ. ಹೀಗಾಗಿ ಅವರು ತನ್ನ ಭವಿಷ್ಯದ ಬಗ್ಗೆ ಗಂಭೀರ ಚಿಂತನೆಯಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News