×
Ad

ಲೋಕಸಭಾ ಚುನಾವಣೆ: 2014ಕ್ಕಿಂತ ಶೇ. 2ರಷ್ಟು ಕಡಿಮೆ ಮತದಾನ

Update: 2019-05-20 09:33 IST

ಹೊಸದಿಲ್ಲಿ: ಸುಧೀರ್ಘ ಅವಧಿಯ ಏಳು ಹಂತಗಳ ಮತದಾನ ಮುಕ್ತಾಯದ ಮೂಲಕ 17ನೇ ಲೋಕಸಭಾ ಚುನಾವಣೆ ಮುಗಿದಿದ್ದು, ಎನ್‌ಡಿಎ ಹಾಗೂ ವಿರೋಧ ಪಕ್ಷಗಳ ನಡುವೆ ಹೋರಾಟದ ಹೊರತಾಗಿಯೂ ಒಟ್ಟಾರೆಯಾಗಿ 2014ಕ್ಕಿಂತ ಶೇಕಡ 2ರಷ್ಟು ಕಡಿಮೆ ಮತದಾನವಾಗಿದೆ.

ಏಳು ಹಂತಗಳಲ್ಲಿ ಸರಾಸರಿ 64.2ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗದ ಅಂಕಿ ಅಂಶಗಳು ಹೇಳಿವೆ.

ಈ ಬಾರಿಯ ಚುನಾವಣೆಯ ವಿಶೇಷವೆಂದರೆ ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಮತ ಚಲಾಯಿಸಿರುವುದು. ಮತ ಚಲಾಯಿಸಿದ ಪುರುಷರು ಹಾಗೂ ಮಹಿಳಾ ಮತದಾರರ ನಡುವೆ ಶೇಕಡ 0.4ರಷ್ಟು ಮಾತ್ರ ಅಂತರವಿದ್ದು, ಕಳೆದ ಚುನಾವಣೆಯಲ್ಲಿ ಈ ಅಂತರ 1.4 ಶೇಕಡ ಆಗಿತ್ತು.

"ಮತ ಚಲಾಯಿಸಿದ ಪುರುಷ ಮತ್ತು ಮಹಿಳಾ ಮತದಾರರ ನಡುವಿನ ಶೇಕಡಾವಾರು ವ್ಯತ್ಯಾಸ 2009ರಲ್ಲಿ ಶೇಕಡ 9ರಷ್ಟಿದ್ದುದು ಈ ಬಾರಿ ಶೇಕಡ 0.4ಕ್ಕೆ ಇಳಿದಿದೆ. ಕಳೆದ ಬಾರಿ ಅದು ಶೇಕಡ 1.4 ಆಗಿತ್ತು" ಎಂದು ಉಪ ಚುನಾವಣಾ ಆಯುಕ್ತ ಉಮೇಶ್ ಸಿನ್ಹಾ ಹೇಳಿದ್ದಾರೆ.

ಈ ಅಂತರ ತೀರಾ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಕೆಲ ರಾಜ್ಯಗಳಲ್ಲಾದರೂ ಪುರುಷರಿಗಿಂತ ಹೆಚ್ಚು ಸಂಖ್ಯೆಯ ಮಹಿಳೆಯರು ಮತ ಚಲಾಯಿಸಿರುವ ಸಾಧ್ಯತೆ ಇದೆ.

ಪಶ್ಚಿಮ ಬಂಗಾಳದಲ್ಲಿ ಮಾತ್ರ ಕೆಲ ಅಹಿತಕರ ಘಟನೆಗಳು ನಡೆದದ್ದು, ಹೊರತುಪಡಿಸಿದರೆ ರವಿವಾರದ ಮತದಾನ ಶಾಂತಿಯುತವಾಗಿ ಮುಗಿದಿದೆ. ಏಳನೇ ಹಂತದಲ್ಲಿ ಮತದಾನ ನಡೆದ 59 ಕ್ಷೇತ್ರಗಳಲ್ಲಿ ಸರಾಸರಿ 64.6ರಷ್ಟು ಮತದಾನವಾಗಿದೆ ಎಂದು ವಿವರಿಸಿದ್ದಾರೆ.

ಚುನಾವಣೆ ಮುಂದೂಡಲ್ಪಟ್ಟ ತಮಿಳುನಾಡಿನ ವೆಲ್ಲೂರು ಲೋಕಸಭಾ ಕ್ಷೇತ್ರಕ್ಕೆ ಚುನಾವಣೆ ದಿನಾಂಕವನ್ನು ಆಯೋಗ ಇನ್ನಷ್ಟೇ ಪ್ರಕಟಿಸಬೇಕಿದೆ. ಈ ಬಾರಿಯ ಚುನಾವಣೆಯಲ್ಲಿ 90 ಕೋಟಿ ಮತದಾರರು ನೋಂದಾಯಿಸಿಕೊಂಡಿದ್ದಾರೆ ಎಂದು ಆಯೋಗದ ಅಧಿಕಾರಿಗಳು ವಿವರ ನೀಡಿದ್ದಾರೆ.

ಜಮ್ಮು ಕಾಶ್ಮೀರ, ಮಾವೋವಾದಿ ಉಗ್ರರ ಉಪಟಳ ಇರುವ ಪ್ರದೇಶಗಳಲ್ಲಿ ಕೂಡಾ 2014ಕ್ಕಿಂತ ಹೆಚ್ಚು ಶಾಂತಿಯುತವಾಗಿ ಈ ಬಾರಿ ಚುನಾವಣೆ ನಡೆದಿದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News