ವಿಶ್ವದ ಅತಿ ಎತ್ತರದ ಮತಗಟ್ಟೆಯಲ್ಲಿ 142 % ಮತ ಚಲಾವಣೆ !

Update: 2019-05-20 04:27 GMT

ಶಿಮ್ಲಾ: ವಿಶ್ವದ ಅತಿ ಎತ್ತರದ ಮತಗಟ್ಟೆ ಎನಿಸಿದ ಹಿಮಾಚಲ ಪ್ರದೇಶದ ತಾಶಿಗಂಗ್ ಗ್ರಾಮದ ಮತಗಟ್ಟೆಯಲ್ಲಿ ರವಿವಾರ ನಡೆದ ಏಳನೇ ಹಂತದ ಮತದಾನದಲ್ಲಿ, ನಂಬಲು ಅಸಾಧ್ಯ ಎನಿಸಿದ ಶೇಕಡ 142.5 ರಷ್ಟು ಮತದಾನವಾಗಿದೆ. ಈ ಎಲ್ಲ ಮತಗಳನ್ನು ಸಿಂಧು ಎಂದು ಅಧಿಕೃತವಾಗಿ ಘೋಷಿಸಲಾಗಿದೆ.

ದೇಶದ ಪ್ರಜಾಪ್ರಭುತ್ವ ಹಕ್ಕು ಚಲಾವಣೆಯ ದೊಡ್ಡ ಹಬ್ಬದಲ್ಲಿ, ದೇಶದ ಅತಿಸಣ್ಣ ಮತಗಟ್ಟೆ ಎನಿಸಿದ ಕಾ ಮತಗಟ್ಟೆಯಲ್ಲಿ ಶೇಕಡ 81.25 ಮಂದಿ ಮತ ಚಲಾಯಿಸಿದ್ದಾರೆ. ಈ ಮತಗಟ್ಟೆಯಲ್ಲಿ ಒಟ್ಟು 16 ಮಂದಿ ಇದ್ದು, ಈ ಪೈಕಿ 13 ಮಂದಿ ಮತದಾನ ಮಾಡಿದ್ದಾರೆ.

ಸಮುದ್ರಮಟ್ಟದಿಂದ 12,256 ಅಡಿ ಎತ್ತರದಲ್ಲಿರುವ ತಾಶಿಗಂಗ್ ಮತಗಟ್ಟೆಯಲ್ಲಿ 49 ಮಂದಿ ನೋಂದಾಯಿತ ಮತದಾರರಿದ್ದಾರೆ. ಆದರೆ ಅಲ್ಲಿ 70 ಮಂದಿ ಮತ ಚಲಾಯಿಸಿದರು ಎಂದು ಉಪವಿಭಾಗಾಧಿಕಾರಿ ಜೀವನ್ ನೇಗಿ ಬಹಿರಂಗಪಡಿಸಿದ್ದಾರೆ.

ತಾಶಿಗಂಗ್ ಹಾಗೂ ಸುತ್ತಮುತ್ತಲ ಮತಗಟ್ಟೆಗಳಲ್ಲಿ ಮತದಾನ ಕರ್ತವ್ಯಕ್ಕೆ ನಿಯೋಜಿತರಾಗಿದ್ದ ಅಧಿಕಾರಿಗಳು ವಿಶ್ವದ ಅತಿ ಎತ್ತರದ ಮತಗಟ್ಟೆಯಲ್ಲಿ ಮತ ಚಲಾಯಿಸುವ ಅಪೇಕ್ಷೆ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ನಂಬಲು ಅಸಾಧ್ಯ ಎನಿಸಿದ ಪ್ರಮಾಣದಲ್ಲಿ ಮತ ಚಲಾವಣೆಯಾಗಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.

ತಾಶಿಗಂಗ್ ಗ್ರಾಮದ 49 ಮತದಾರರ ಪೈಕಿ 21 ಮಂದಿ ಪುರುಷರು ಹಾಗೂ 15 ಮಹಿಳೆಯರು ಮತ ಚಲಾಯಿಸಿದ್ದು, ಗ್ರಾಮದ ವಾಸ್ತವ ಶೇಕಡಾವಾರು ಪ್ರಮಾಣ ಶೇಕಡ 74. ಸಂಬಂಧಪಟ್ಟ ಸಹಾಯಕ ಚುನಾವಣಾ ಅಧಿಕಾರಿಗೆ ತಮ್ಮ ಮತದಾನ ಕರ್ತವ್ಯ ಪ್ರಮಾಣಪತ್ರವನ್ನು ಸಲ್ಲಿಸಿದ ಹಲವು ಮಂದಿ ಮತಗಟ್ಟೆ ಅಧಿಕಾರಿಗಳು ಇಲ್ಲಿ ಮತ ಚಲಾಯಿಸಿದ್ದರಿಂದ ಶೇಕಡವಾರು ಮತಪ್ರಮಾಣ ಬಹುತೇಕ ದುಪ್ಪಟ್ಟಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News