ಕೃತಕ ಉಸಿರಾಟದ ವ್ಯವಸ್ಥೆಯೊಂದಿಗೆ 330 ಕಿ.ಮೀ. ಪ್ರಯಾಣಿಸಿ ಮತದಾನ ಮಾಡಿದ ಮಹಿಳೆ

Update: 2019-05-20 10:57 GMT

ರಾಂಚಿ, ಮೇ 20: 2019ರ ಲೋಕಸಭಾ ಚುನಾವಣೆಯ ಕೊನೆಯ ದಿನದಂದು 59 ವರ್ಷದ ರೇಣು ಮಿಶ್ರಾ ಎಂಬ ಮಹಿಳೆ, ಎಲ್ಲ ಪ್ರತಿಕೂಲಗಳ ನಡುವೆಯೂ ಬದ್ಧತೆಯನ್ನು ಮೆರೆದು ತಮ್ಮ ಪ್ರಜಾಸತ್ತಾತ್ಮಕ ಹಕ್ಕನ್ನು ಚಲಾಯಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ತೀವ್ರತರದ ಉರಿಯೂತ ಸಮಸ್ಯೆಯಿಂದಾಗಿ ಶ್ವಾಸಕೋಶಕ್ಕೆ ಹಾನಿಯಾಗಿರುವ ರೇಣು ಮಿಶ್ರಾ, ಆಮ್ಲಜನಕ ಬೆಂಬಲದೊಂದಿಗೆ ಕೃತಕ ಉಸಿರಾಟದಲ್ಲಿದ್ದಾರೆ. ಈ ಕೃತಕ ಉಸಿರಾಟ ವ್ಯವಸ್ಥೆಯ ಬೆಂಬಲದೊಂದಿಗೆ ಕೊಲ್ಕತ್ತಾದಿಂದ 330 ಕಿಲೋಮೀಟರ್ ಪ್ರಯಾಣಿಸಿ, ದುಮ್ಕಾ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ದುಮ್ಕಾ ಕ್ಲಬ್ 43ನೇ ಸಂಖ್ಯೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದ್ದಾರೆ.

"ನಾನು ಜೀವಂತ ಇರುವವರೆಗೂ ನಮ್ಮ ಪ್ರಜಾಸತ್ತಾತ್ಮಕ ಹಕ್ಕು ಚಲಾಯಿಸುವ ಮೂಲಕ ರಾಷ್ಟ್ರನಿರ್ಮಾಣಕ್ಕೆ ಕೊಡುಗೆ ನೀಡುತ್ತೇನೆ" ಎಂದು ಮಿಶ್ರಾ ಹೇಳಿದ್ದಾರೆ.

ದುಮ್ಕಾದಲ್ಲಿರುವ ಮೇಲ್ದರ್ಜೆಗೇರಿದ ಖಜೂರಿಯಾ ಮಾಧ್ಯಮಿಕ ಶಾಲೆಯ ಮುಖ್ಯಶಿಕ್ಷಕಿಯಾಗಿರುವ ಮಿಶ್ರಾ ಅವರನ್ನು ಜನವರಿ 23ರಂದು ಉಸಿರಾಟದ ತೊಂದರೆಗಾಗಿ ದುಮ್ಕಾದಲ್ಲಿರುವ ವಿಶ್ವ ಆರೋಗ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೇ 19ರಂದು ದುಮ್ಕಾದಲ್ಲಿ ಮತದಾನ ನಡೆಯಲಿದೆ ಎಂಬ ಸುದ್ದಿ ತಿಳಿದ ಅವರು, ಮತ ಚಲಾಯಿಸಲು ವ್ಯವಸ್ಥೆ ಮಾಡುವಂತೆ ಕೋರಿದರು ಎಂದು ಬತ್ಸಲ್ ಹೇಳಿದರು.

ಈ ವಿಷಯವನ್ನು ಬತ್ಸಲ್ ಅವರು ದುಮ್ಕಾ ಜಿಲ್ಲಾಡಳಿತದ ಗಮನಕ್ಕೆ ತಂದರು. "ಮೇ 12ರಂದು ಅವರ ಮನವಿ ನಮಗೆ ತಲುಪಿತು. ಅವರ ಬದ್ಧತೆಯನ್ನು ಕಂಡು, ಅವರಿಗೆ ವೈದ್ಯಕೀಯ ಸೌಲಭ್ಯಗಳಿರುವ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿದೆವು" ಎಂದು ಜಿಲ್ಲಾಧಿಕಾರಿ ಮುಖೇಶ್ ಕುಮಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News