ಕುರ್ ಆನ್ ಅರ್ಥ ಮಾಡಿಕೊಂಡವ ಯಾವುದೇ ಧರ್ಮ, ವ್ಯಕ್ತಿಗೆ ತೊಂದರೆ ಕೊಡಲು ಸಾಧ್ಯವಿಲ್ಲ: ಯು.ಟಿ.ಖಾದರ್

Update: 2019-05-20 12:53 GMT

ಕೊಣಾಜೆ: ರಮಝಾನ್‍ನ ಒಂದು ತಿಂಗಳು ವೃತಾನುಷ್ಠಾನದ ಮೂಲಕ ಧಾರ್ಮಿಕ ಪಾವಿತ್ರ್ಯತೆ ಕಾಪಾಡಿದಂತೆ ಮುಂದಿನ ದಿನಗಳಲ್ಲೂ ಅದನ್ನು ಪಾಲಿಸಿಕೊಂಡು ಹೋಗಬೇಕು. ಕುರ್ ಆನ್ ಅರ್ಥಮಾಡಿಕೊಂಡವನು ಯಾವುದೇ ಧರ್ಮ, ವ್ಯಕ್ತಿಗೆ ತೊಂದರೆ ಕೊಡಲು ಸಾಧ್ಯವೇ ಇಲ್ಲ

ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದರು.

ಅವರು ಕೊಣಾಜೆಯ ಕೋಡಿಜಾಲ್ ರಿಫಾಯಿಯಾ ಜುಮಾ ಮಸೀದಿಯಲ್ಲಿ  ಹಾಜಿ ಇಬ್ರಾಹಿಂ ಕೋಡಿಜಾಲ್ ಅವರ ನೇತೃತ್ವದಲ್ಲಿ ರವಿವಾರ ನಡೆದ ಸೌಹಾರ್ದ ಇಫ್ತಾರ್ ಕೂಟದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಮಾತನಾಡಿದರು.

ಮಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ. ಸುರೇಂದ್ರರಾವ್ ಅವರು ಮಾತನಾಡಿ, ಧರ್ಮ ಎನ್ನುವುದನ್ನು ನಾವು ಮಾಡಿಕೊಂಡಿದ್ದು, ಮನುಷ್ಯನಾಗಿ ಹುಟ್ಟಿದ ಬಳಿಕ ಪ್ರಾಣಿಗಳಾಗಬಾರದು. ಶ್ರೀಮಂತರಿಗೆ ಹಸಿವು ಗೊತ್ತಿರುವುದಿಲ್ಲ, ಆ ಕಾರಣಕ್ಕೆ ನಾವೇ ಗೊತ್ತು ಮಾಡಬೇಕಾಗುತ್ತದೆ. ಎಲ್ಲಾ ಧರ್ಮಗಳು ಒಳ್ಳೆಯ ಮಾತುಗಳನ್ನೇ ಹೇಳಿದರೂ ಅದನ್ನು ಪಾಲಿಸುವಲ್ಲಿ ಮನುಷ್ಯ ವಿಫಲನಾಗಿದ್ದಾನೆ ಎಂದು ಹೇಳಿದರು.

ಸಭಾ ಕಾರ್ಯಕ್ರಮ ಉದ್ಘಾಟಿಸಿದ ಮಸೀದಿಯ ಖತೀಬ್ ಅಬೂಬಕರ್ ಸಖಾಫಿ ಮಾತನಾಡಿ, ಯಾರಾದರು ಕಷ್ಟದಲ್ಲಿದ್ದಾಗ ನಮಾಝ್ ನಲ್ಲಿದ್ದರೂ ಕೈಬಿಟ್ಟು ಆತನಿಗೆ ಸಹಾಯ ಮಾಡುವ ಅವಕಾಶ ಇಸ್ಲಾಂ ಕಲ್ಪಿಸಿದೆ. ಹಸಿದವನಿಗೆ ಅನ್ನ, ಅಗತ್ಯ ಸಂದರ್ಭದಲ್ಲಿ ರಕ್ತ, ಜೀವಕ್ಕೆ ಜೀವ ಕೊಡುವಂತೆ ಇಸ್ಲಾಂ ಸೂಚಿಸಿದೆ. ಪ್ರತಿಯೊಬ್ಬರೂ ಅವರವರ ಧರ್ಮ ಸರಿಯಾಗಿ ಪಾಲಿಸಿದಾಗ ಭಾರತದಲ್ಲಿ ಯಾವುದೇ ಗಲಭೆ ನಡೆಯದು, ಈ ದೇಶದಲ್ಲಿ ಬದುಕುವುದು ಕಷ್ಟವಲ್ಲ. ಎಲ್ಲಾ ಜಾತಿ ಧರ್ಮದವರು ಸೌಹಾರ್ದತೆ ಯಿಂದ ಜೀವನ ಸಾಗಿಸಿದಾಗ ಭಾರತ ಶಾಂತಿಯ ತಾಣವಾಗಲಿದೆ ಎಂದರು.

ಮಸೀದಿಯ ಅಧ್ಯಕ್ಷ  ಹಾಜಿ ಇಬ್ರಾಹಿಂ ಕೋಡಿಜಾಲ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಉಪವಾಸ ಎಲ್ಲಾ ಧರ್ಮಗಳಲ್ಲೂ ಇದೆ. ಮುಸಲ್ಮಾನರು ರಮಝಾನ್ ತಿಂಗಳಲ್ಲಿ 30 ದಿವಸಗಳ ಕಾಲ ಉಪವಾಸ ನಿರತರಾದರೆ, ಹಿಂದೂಗಳು ಶಿವರಾತ್ರಿ, ನವರಾತ್ರಿ ಸಮಯದಲ್ಲಿ ಆಚರಿಸಿದರೆ, ಕ್ರಿಶ್ಚಿಯನ್ನರು 40 ದಿನಗಳ ಕಾಲ ಉಪವಾಸ ಆಚರಿಸಲು ಬೈಬಲ್ ನಲ್ಲಿ ಉಲ್ಲೇಖವಿದೆ. ಉಪವಾಸವು ದೇವರಲ್ಲಿ ಭಯ ಭಕ್ತಿ ಹೆಚ್ಚು ಉಂಟಾಗಲು ಮತ್ತು ಬಡವರ ಹಸಿವು ಶ್ರೀಮಂತ ವ್ಯಕ್ತಿಗಳಿಗೆ ಅರಿವು ಮೂಡಿಸುತ್ತದೆ. ಆದ ಕಾರಣ ಎಲ್ಲಾ ಧರ್ಮದ ವ್ಯಕ್ತಿಗಳನ್ನು ಸೇರಿಸಿ ಸರ್ವ ಧರ್ಮ ಸಮನ್ವಯ ಸಾಧಿಸಲು ಇಫ್ತಾರ್ ಕೂಟ ಏರ್ಪಡಿಸಲಾಗಿದೆ ಎಂದು ಅವರು ಹೇಳಿದರು. ಸದರ್ ಮುಅಲ್ಲಿಂ ಉಮರ್ ಸಅದಿ ದುವಾ ಮಾಡಿದರು.

ವಿದಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ, ಹರೀಶ್ ಕುಮಾರ್, ಮಂಗಳೂರು ವಿವಿ ಕುಲಸಚಿವ ಎ.ಎಮ್.ಖಾನ್, ವಿಶ್ರಾಂತ ಕುಲಸಚಿವ ಡಾ.ಚಿನ್ನಪ್ಪ ಗೌಡ, ಹರೇಕಳ ರಾಮಕೃಷ್ಣ ಪ್ರೌಢಶಾಲೆಯ ಮುಖ್ಯ ಶಿಕ್ಷಕ ರವೀಂದ್ರ ರೈ ಕಲ್ಲಿಮಾರ್, ತಾಲೂಕು ಪಂ. ಅಧ್ಯಕ್ಷ ಮಹಮ್ಮದ್ ಮೋನು,  ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ, ತಾಲೂಕು ಪಂ. ಮಾಜಿ ಸದಸ್ಯ ಮುಸ್ತಫಾ ಮಲಾರ್, ಜಮೀಯತುಲ್ ಫಲಾಹ್ ಉಡುಪಿ ಮತ್ತು ದ.ಕ.ಜಿಲ್ಲೆ ಅಧ್ಯಕ್ಷ ಶಾಹುಲ್ ಹಮೀದ್,  ಕೊಣಾಜೆ ಗ್ರಾ.ಪಂ. ಅಧ್ಯಕ್ಷ ನಝರ್ ಷಾ ಪಟ್ಟೋರಿ, ಮಾಜಿ ಅಧ್ಯಕ್ಷರುಗಳಾದ ಶೌಕತ್ ಅಲಿ,  ಅಚ್ಚುತ ಗಟ್ಟಿ, ವಕ್ಫ್ ಸಲಹಾ ಸಮಿತಿ ಸದಸ್ಯ ಉಮರ್ ಪಜೀರ್, ಹೈದರ್ ಪರ್ತಿಪ್ಪಾಡಿ, ಮಾಜಿ ಪಟೇಲ ರಘುರಾಮ ಕಾಜವ, ಪಜೀರ್ ಮಸೀದಿ ಅಧ್ಯಕ್ಷ ಅಬ್ದುಲ್ ರಝಾಕ್, ಬ್ಲಾಕ್ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿಗಳಾದ ಇಕ್ಬಾಲ್ ಸಾಮಾನಿಗೆ, ಮೇಗಾ ಸಲೀಂ, ಕೋಡಿಜಾಲ್ ಮಸೀದಿಯ ಕಾರ್ಯದರ್ಶಿ ಅಬೂಬಕರ್ ಕೆ.ಎಸ್., ಉಪಾಧ್ಯಕ್ಷ ಮುಹಮ್ಮದ್ ಕೆ.ಐ, ಕೋಶಾಧಿಕಾರಿ ಮುಹಮ್ಮದ್, ಕೊಣಾಜೆ ಗ್ರಾ.ಪಂ. ಸದಸ್ಯ ಮುತ್ತು ಶೆಟ್ಟಿ, ಪ್ರಕಾಶ್ ಶೆಟ್ಟಿ, ಮಾಜಿ ಸದಸ್ಯ ಪದ್ಮನಾಭ ಗಟ್ಟಿ, ಖಿದ್ಮತುಲ್ ಇಸ್ಲಾಂ ಅಸೋಸಿಯೇಶನ್ ಅಧ್ಯಕ್ಷ ಅಮೀರ್ ಕೋಡಿಜಾಲ್, ಉಪಾಧ್ಯಕ್ಷ ಹನೀಫ್ ಬಿ., ರಝಾಕ್, ಸೂಫಿ ಕುಂಞಿ, ಅಶ್ರಫ್ ಮೊದಲಾದವರು ಭಾಗವಹಿಸಿದ್ದರು.

ಖಿದ್ಮತುಲ್ ಇಸ್ಲಾಂ ಅಸೋಸಿಯೇಶನ್ ನ ಗೌರವಾಧ್ಯಕ್ಷ ಅಬ್ದುಲ್ ರಹಿಮಾನ್ ಎ.ಕೆ. ವಂದಿಸಿದರು.  ರಿಫಾಯಿ ಜುಮಾ ಮಸೀದಿ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಕೋಡಿಜಾಲ್ ಕಾರ್ಯಕ್ರಮ ನಿರೂಪಿಸಿದರು.

'1400 ವರ್ಷಗಳ ಹಿಂದೆ ಕುರ್ ಆನ್ ಸಹಿತ ಎಲ್ಲಾ ಧರ್ಮಗ್ರಂಥಗಳಲ್ಲೂ ಒಳ್ಳೆಯ ಮಾತುಗಳನ್ನೇ ಹೇಳಿವೆ, ಆದರೆ ಮನುಷ್ಯ ಒಳ್ಳೆಯವನಾಗಲು ಬಯಸದ ಕಾರಣದಿಂದಾಗಿ ಸಮಸ್ಯೆಗಳು ಎದುರಾಗುತ್ತಿವೆ’

- ಪ್ರೊ.ಸುರೇಂದ್ರ ರಾವ್, ವಿಶ್ರಾಂತ ಪ್ರಾಧ್ಯಾಪಕ, ಮಂಗಳೂರು ವಿಶ್ವವಿದ್ಯಾಲಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News