ಯಕ್ಷಗಾನದಲ್ಲಿ ಹೊಸ ಪ್ರಯೋಗ, ಆಧುನಿಕ ತಂತ್ರ ಬಳಕೆ: ನ್ಯಾ.ಪಾಟೀಲ್

Update: 2019-05-20 15:11 GMT

ಉಡುಪಿ, ಮೇ 20: ಸಾಹಿತಿ ಶಿವರಾಮ ಕಾರಂತರು ನೀಡಿದ ಭವ್ಯವಾದ ಸ್ಪರ್ಶದಿಂದ ಇಂದು ಯಕ್ಷಗಾನ ಪ್ರಸಿದ್ಧ ಕಲೆಯಾಗಿ ಹೊರಹೊಮ್ಮಲು ಸಾಧ್ಯ ವಾಗಿದೆ. ಯಕ್ಷಗಾನದಲ್ಲಿ ಇಂದು ಹೊಸ ಹೊಸ ಪ್ರಯೋಗ, ಆಧುನಿಕ ತಂತ್ರ ಗಳನ್ನು ಬಳಸಲಾಗುತ್ತಿದೆ ಎಂದು ಕರ್ನಾಟಕ ಹೈಕೋರ್ಟ್ ಮತ್ತು ಉಡುಪಿ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಬಿ.ಎ.ಪಾಟೀಲ್ ಹೇಳಿದ್ದಾರೆ.

ಉಡುಪಿ ವಕೀಲರ ಸಂಘದ ವತಿಯಿಂದ ಉಡುಪಿಯ ಪುರಭವನದಲ್ಲಿ ಆಯೋಜಿಸಲಾದ ಎರಡು ದಿನಗಳ ರಾಜ್ಯ ಮಟ್ಟದ ವಕೀಲರ ಯಕ್ಷಗಾನ ಸ್ಪರ್ಧೆ ‘ಯಕ್ಷ ಕಲಾ ವೈಭವ-2019’ನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಯಕ್ಷಗಾನ ಕಲೆಯು ನಮ್ಮ ಹಳೆಯ ಸಂಪ್ರದಾಯ ಹಾಗೂ ಧರ್ಮದ ಪ್ರಾಮುಖ್ಯತೆಯನ್ನು ಕಲಿಸುತ್ತದೆ. ಯಕ್ಷಗಾನದ ಮುಖ್ಯ ವಿಷಯವಾಗಿರುವ ದುಷ್ಟರ ಸಂಹಾರ ಹಾಗೂ ಶಿಷ್ಟರ ರಕ್ಷಣೆಯು ಕಾನೂನಿನ ಅಂಶಗಳಿಗೂ ಸಂಬಂಧಿಸಿದ್ದಾಗಿದೆ ಎಂದರು.

ಯಕ್ಷಗಾನ ಅತ್ಯಂತ ಪ್ರಸಿದ್ಧ ಜಾನಪದ ಕಲೆಯಾಗಿದ್ದು, ಈ ಕಲೆ ಕರಾವಳಿ ಜಿಲ್ಲೆಯಲ್ಲಿ ಹೆಚ್ಚು ಖ್ಯಾತಿಯನ್ನು ಪಡೆದಿದೆ. ಇದರಲ್ಲಿರುವ ಬಣ್ಣ, ವೇಷ ಭೂಷಣ, ನೃತ್ಯ, ಮಾತುಗಾರಿಕೆ ಅದ್ಭುತವಾಗಿದೆ. ಇದು ಬಹಳ ಪುರಾತನ ಕಲೆ ಎಂಬುದಕ್ಕೆ ಸಾಕಷ್ಟು ಪುರಾವೆಗಳು ದೊರೆತಿವೆ. ಈ ಕಲೆ ಇಂದು ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ರೂಪದಲ್ಲಿ ಪ್ರದರ್ಶನ ಕಾಣುತ್ತಿದೆ ಎಂದು ಅವರು ತಿಳಿಸಿದರು.

ವಕೀಲ ವೃತ್ತಿ ಹೆಚ್ಚು ಒತ್ತಡದಿಂದ ಇರುವ ವೃತ್ತಿಯಾಗಿದೆ. ಈ ಮಧ್ಯೆ ವಕೀಲರು ನಮ್ಮ ಸಂಸ್ಕೃತಿಗಾಗಿ ಸಮಯವನ್ನು ವಿನಿಯೋಗಿಸುತ್ತಿರುವುದು ಶ್ಲಾಘ ನೀಯವಾಗಿದೆ. ಯಕ್ಷಗಾನದ ಮೂಲಕ ಪ್ರತಿಭೆ ಮತ್ತು ಸಂಸ್ಕೃತಿಯನ್ನು ಪ್ರದರ್ಶನ ಜೊತೆಗೆ ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯ ಪಡೆಯಲು ಸಾಧ್ಯ ವಾಗುತ್ತದೆ. ಇದರಿಂದ ತಾಜಾ ಮನುಷ್ಯರಾಗಿ ವೃತ್ತಿಯಲ್ಲಿ ಉತ್ಸಾಹದಿಂದ ತೊಡಗಿಸಿಕೊಳ್ಳಬಹುದಾಗಿದೆ ಎಂದು ಪಾಟೀಲ್ ನುಡಿದರು.

ಉಡುಪಿ ಪ್ರಧಾನ ಮತ್ತು ಜಿಲ್ಲಾ ನ್ಯಾಯಾಧೀಶ ಸಿ.ಎಂ.ಜೋಶಿ ಮಾತ ನಾಡಿ, ವೃತ್ತಿಯಲ್ಲಿ ಸಾಧನೆ ಮಾಡಬೇಕಾದರೆ ನಾವು ಸಾಗಿ ಬಂದ ನಮ್ಮ ಸಂಸ್ಕೃತಿ ಯತ್ತ ಕೂಡ ಗಮನ ಕೊಡಬೇಕಾಗಿದೆ. ಇದೀಗ ವಕೀಲರು ತಮ್ಮ ದಾರಿ ಹಾಗೂ ಇತಿಹಾಸವನ್ನು ನೆನಪಿಸುವ ಕಾರ್ಯವನ್ನು ಯಕ್ಷಗಾನದ ಮೂಲಕ ಮಾಡುತ್ತಿದ್ದಾರೆ ಎಂದರು.

ನ್ಯಾಯಾಲಯದಲ್ಲಿ ನಡೆಸುವ ಮಧ್ಯಸ್ಥಿಕೆಯು ಕೃಷ್ಣನ ಸಂಧಾನವಾಗಿದೆ. ಪುರಾಣದ ಒಲವುಗಳನ್ನು ವೃತ್ತಿಯಲ್ಲಿ ತರುವ ಬಗ್ಗೆ ಚಿಂತನೆಗಳನ್ನು ಮಾಡ ಬೇಕು. ಇದರಿಂದ ಕಲೆಯ ಜೊತೆ ವೃತ್ತಿಯಲ್ಲಿ ಕೂಡ ಹೆಚ್ಚು ಹೊಳಪು ಹಾಗೂ ಮೊನಚು ಪಡೆಯಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.

ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎಚ್.ರತ್ನಾಕರ ಶೆಟ್ಟಿ ವಹಿಸಿದ್ದರು. ಸಂಘದ ಗೌರವಾಧ್ಯಕ್ಷ ಶ್ರೀಪತಿ ಆಚಾರ್ಯ ಉಪಸ್ಥಿತರಿದ್ದರು. ಯಕ್ಷ ಕಲಾ ವೈಭವದ ಅಧ್ಯಕ್ಷ ವಿಜಯ ಹೆಗ್ಡೆ ಸ್ವಾಗತಿಸಿದರು. ಮುಂಡ್ಕೂರು ವಿನಯ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News