ದ.ಕ. ನೀರಿನ ಸಮಸ್ಯೆಗೆ ಉಸ್ತುವಾರಿ ಸಚಿವ, ಮನಪಾ ಕಾರಣ: ಬಿಜೆಪಿ ಆರೋಪ

Update: 2019-05-20 15:24 GMT

ಮಂಗಳೂರು, ಮೇ 20: ನಗರಕ್ಕೆ ನೀರು ಪೂರೈಕೆ ಮಾಡುವ ತುಂಬೆ ಕಿಂಡಿ ಅಣೆಕಟ್ಟನ್ನು ಎತ್ತರಿಸಿದಂತೆಯೇ ನೀರಿನ ಸಮಸ್ಯೆಯೂ ಹೆಚ್ಚಾಗುತ್ತಿದ್ದು, ಇದಕ್ಕೆ ಮನಪಾ ಆಡಳಿತ ಹಾಗೂ ಉಸ್ತುವಾರಿ ಸಚಿವರೇ ಕಾರಣ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಆರೋಪಿಸಿದ್ದಾರೆ.

ದ.ಕ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಈ ಆರೋಪ ಮಾಡಿದ ಅವರು, ನದಿಗಳಲ್ಲಿ ಮರಳು ರೂಪದಲ್ಲಿ ಹೂಳು ತುಂಬಿ ನೀರು ಸಮಸ್ಯೆಯಾಗುತ್ತಿದ್ದರೂ ಜಿಲ್ಲೆಯಲ್ಲಿ ಮರಳಿಗಾಗಿ ಪರದಾಡುವ ಪರಿಸ್ಥಿತಿ ಇದೆ ಎಂದರು.

ಜಿಲ್ಲೆಯಲ್ಲಿ ಪ್ರಾಕೃತಿಕವಾಗಿ ಮರಳು ಸಿಗುತ್ತದೆ. ಆದರೆ ನಾನ್ ಸಿಆರ್‌ಝೆಡ್ ವ್ಯಾಪ್ತಿಯಲ್ಲಿ ಕೇವಲ 9 ಜನರಿಗೆ ಮಾತ್ರವೇ ಮರಳು ತೆಗೆಯಲು ಪರವಾನಿಗೆ ನೀಡಲಾಗಿದೆ. ಅದರಲ್ಲೂ ಅವೈಜ್ಞಾನಿಕ ಷರತ್ತು ವಿಧಿಸಲಾಗಿದೆ. ಅದರ ಪ್ರಕಾರ 51000 ಮೆಟ್ರಿಕ್ ಟನ್ ಮರಳು ಲಭ್ಯವಿರುವ ದಿಣ್ಣೆಗಳಿಂದ 1000 ಮೆಟ್ರಿಕ್ ಟನ್ ಮರಳನ್ನು ಮಾತ್ರವೇ ತೆಗೆಯಲು ಅವಕಾಶವಿರುತ್ತದೆ. ಉಳಿದ ಮರಳು ಅಲ್ಲಿಯೇ ಉಳಿದು ಹೂಳಾಗಿ ನೀರು ಸಂಗ್ರಹಕ್ಕೆ ಅಡ್ಡಿಯಾಗಲಿದೆ. ಕಲ್ಲನ್ನು ಪುಡಿ ಮಾಡಿ ಮಾಡಲಾಗುವ ಎಂಸ್ಯಾಂಡ್ ಒಂದು ಲೋಡ್‌ಗೆ 12000 ರೂ.ಗಳಿಗೆ ಸಿಗುತ್ತದೆಯಾದರೆ, ಪ್ರಾಕೃತಿಕವಾಗಿ ದೊರೆಯುವ 1 ಲೋಡ್ ಮರಳಿಗೆ 14500 ನೀಡಬೇಕಾದ ಪರಿಸ್ಥಿತಿ ಜಿಲ್ಲೆಯಲ್ಲಿದೆ. ನದಿಯಲ್ಲಿ ಒಂದು ಲೋಡ್ ಮರಳಿನಿಂದ 8000 ಲೀಟರ್ ನೀರು ಕೊರತೆ ಆಗುತ್ತದೆ ಎಂಬುದು ತಜ್ಞರು ನೀಡಿರುವ ವರದಿ. ಜಿಲ್ಲೆಯಲ್ಲಿ ಸೂಕ್ತ ಮರಳು ನೀತಿಯನ್ನು ಜಾರಿಗೆ ತರಲಾಗು ತ್ತಿಲ್ಲ. ಇದರಿಂದ ಮುಂದೆ ಸಂಭವಿಸಬಹುದಾದ ಪ್ರಾಕೃತಿಕ ವಿಕೋಪಕ್ಕೆ ಉಸ್ತುವಾರಿ ಸಚಿವರು, ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತವೇ ಹೊಣೆ ಎಂದು ಅವರು ಹೇಳಿದರು.

ದ.ಕ. ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರು ಇದ್ದಾರೋ ಇಲ್ಲವೋ ತಿಳಿಯುತ್ತಿಲ್ಲ. ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಕಂದಾಯ ಅಧಿಕಾರಿಗಳು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳ ಸಭೆ ನಡೆಸುವಲ್ಲಿ ಉಸ್ತುವಾರಿ ಸಚಿವರು ವಿಫಲರಾಗಿದ್ದಾರೆ. ಅಡಿಕೆ ಬೆಳೆಗಾರರು ಕಂಗಾಲಾಗಿದ್ದಾರೆ. ಪಶ್ಚಿಮ ವಾಹಿನಿ ಯೋಜನೆ ನೀಡುವ ಭರವಸೆ ನೀಡಿ ಒಂದು ವರ್ಷ ಆದರೂ ಯೋಜೆ ಆರಂಭ ವಾಗಿಲ್ಲ. ಶಾಸಕರಿಗೆ ತಲಾ 2 ಕೋಟಿರೂ.ಗಳ ಅನುದಾನವನ್ನು ಅಭಿವೃದ್ದಿಗಾಗಿ ನೀಡುವುದಾಗಿ ಹೇಳಿ ಕೇವಲ 50 ಲಕ್ಷ ರೂ. ಮಾತ್ರ ನೀಡಿದ್ದಾರೆ. ಒಂದು ವರ್ಷದ ಅವಧಿಯಲ್ಲಿ ಸರಕಾರಕ್ಕೆ ಆರ್ಥಿಕ ಬರ ಬಂದಂತಿದೆ ಎಂದು ಶಾಸಕ ಸಂಜೀವ ಮಠಂದೂರು ಆರೋಪಿಸಿದರು.

ರಾಜ್ಯ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಸಂಜೀವ ಮಠಂದೂರು, ಕಳೆದ ಒಂದು ವರ್ಷದಲ್ಲಿ ರಾಜ್ಯದಲ್ಲಿನ ಕಾಂಗ್ರೆಸ್ ಮತ್ತು ಜೆಡಿಎಸ್ ನೇತೃತ್ವದ ಸರಕಾರ ಅಭಿವೃದ್ಧಿ ಕಾರ್ಯಗಳನ್ನು ಮಾಡದೇ ಕೇವಲ ಅಧಿಕಾರಕ್ಕಾಗಿ ಪರಸ್ಪರ ಕಾಲೆಳೆಯುವುದರಲ್ಲಷ್ಟೇ ನಿರತವಾಗಿದೆ ಎಂದು ಆಪಾದಿಸಿದರು.

ಮುಖ್ಯಮಂತ್ರಿಯವರು ಒಂದು ವರ್ಷದ ಹಿಂದೆ ಅಧಿಕಾರ ಸ್ವೀಕರಿಸುವ ಸಂದರ್ಭ ತಾನು ಸಾಂದರ್ಭಿಕ ಶಿಶು ಎಂದುಹೇಳಿಕೆ ನೀಡಿದ್ದು, ಅದನ್ನು ಒಂದು ವರ್ಷದಲ್ಲಿ ಸಾಧಿಸಿ ತೋರಿಸಿದ್ದಾರೆ. ಮುಖ್ಯಮಂತ್ರಿ ರೆಸಾರ್ಟ್‌ನಲ್ಲಿ ಮೋಜು ಮಜಾ ಮಾಡುತ್ತಿದ್ದರೆ, ಸಚಿವರು ವಿದೇಶ ಪ್ರವಾಸದಲ್ಲಿ ನಿರತರಾಗಿ ಕುಡಿಯುವ ನೀರಿನ ಸಮಸ್ಯೆ, ಬರ, ಮೇವಿನ ಕೊರತೆ ಮೊದಲಾದ ಸಮಸ್ಯೆಗಳನ್ನು ನಿರ್ವಹಿಸುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದರು.

ರಾಜ್ಯ ಸರಕಾರದಿಂದ ಪ್ರಾಕೃತಿಕ ವಿಕೋಪಡಿ ಅನುದಾನ ಬಂದಿಲ್ಲ ಎಂದು ಆರೋಪಿಸಿದ ಅವರು, ಕೇಂದ್ರದ ಎನ್‌ಡಿಆರ್‌ಎಫ್‌ನಿಂದ 48 ಕೋಟಿ ರೂ. ಬಂದಿದೆ. ಆದರೆ ರಾಜ್ಯದಿಂದ ಅಕ್ರಮ ಸಕ್ರಮ ಸಮಿತಿ, ಭೂ ನ್ಯಾಯ ಮಂಡಳಿ ಸಮಿತಿ, ಆಶ್ರಯ ಸಮಿತಿ, ಆರಾಧನಾ ಸವಿುತಿ ರಚನೆ ಆಗಿಲ್ಲ ಎಂದು ದೂರಿದರು.

ಮುಖ್ಯಮಂತ್ರಿಯವರು ಮಲೆನಾಡು ಅಭಿವೃದ್ದಿ ಯೋಜನೆಯಡಿ 1 ಕೋಟಿ ರೂ. ನೀಡುವುದಾಗಿ ಹೇಳಿ ಆರು ತಿಂಗಳಾದರೂ ಚಿಕ್ಕಾಸು ಬಂದಿಲ್ಲ. ಅಡಿಕೆ ಕೊಳೆರೋಗದಿಂದ 56000 ರೈತರು ಸಂಕಷ್ಟದಲ್ಲಿದ್ದು, 60 ಕೋಟಿ ರೂ. ಹಾನಿ ಆಗಿದೆ. ವಿಧಾನ ಸಭೆಯಲ್ಲಿ ಪ್ರಸ್ತಾಪಿಸಿದಾಗ ಪರಿಹಾರದ ಭರವಸೆ ದೊರಕಿದ್ದರೂ ಹಣ ಬಿಡುಗಡೆಯಾಗಿಲ್ಲ. ಕಳೆದ ಒಂದು ವರ್ಷದಲ್ಲಿ ರಾಜ್ಯ ಸರಕಾರ ಅಭಿವೃದ್ಧಿಯಲ್ಲಿ ವಿಫಲವಾಗಿದ್ದು, ಸರಕಾರ ಬೀಳುವ ದಿನಗಳು ಹತ್ತಿವಾಗುತ್ತಿವೆ ಎಂದವರು ಹೇಳಿದರು.

ಗೋಷ್ಠಿಯಲ್ಲಿ ಶಾಕ ಭರತ್ ಶೆಟ್ಟಿ ಉಪಸ್ಥಿತರಿದ್ದರು.

ಎತ್ತಿನಹೊಳೆ ಯೋಜನೆ ಬಗ್ಗೆ ಹಿಂದಿನ ನಿಲುವಿಗೆ ಬದ್ಧ

ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಶಾಸಕ ಸಂಜೀವ ಮಠಂದೂರು ಎತ್ತಿನ ಹೊಳೆ ಯೋಜನೆಗೆ ಸಂಬಂಧಿಸಿ ಬಿಜೆಪಿ ತನ್ನ ಹಿಂದಿನ ನಿಲುವಿಗೆ ಬದ್ಧವಾಗಿದೆ ಎಂದರು.

ಯೋಜನೆಯನ್ನು ವಿರೋಧಿಸಿ ಸಂಸದರ ಜತೆ ತಾನೂ ಶಾಸಕನಾಗುವ ಮೊದಲು ಪಾದಯಾತ್ರೆ ಮಾಡಿದ್ದೆ. ಅದೊಂದು ಅವೈಜ್ಞಾನಿಕ ನೀರು ಪೂರೈಕೆ ವ್ಯವಸ್ಥೆ. ಯಾರದೋ ಕಿಸೆ ತುಂಬಿಸುವ ಯೋಜನೆ ಇದಾಗಿದ್ದು, ಜಿಲ್ಲೆಯಲ್ಲಿ ಬಿಜೆಪಿಯ 7 ಜನ ಶಾಸಕರೂ ಇದಕ್ಕೆ ವಿರೋಧ ವಾಗಿದ್ದಾರೆ. ಅವಕಾಶ ಸಿಕ್ಕಲ್ಲಿ ಸರಕಾರದ ಗಮನ ಸೆಳೆಯುವ ಪ್ರಯತ್ನ ಮಾಡಲಾಗುವುದು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News