ಹೆಜಮಾಡಿಯ ಕ್ರೀಡಾಂಗಣ: ಅನುದಾನದ ಕೊರತೆ; ಸ್ಥಗಿತಗೊಂಡ ಪೆವಿಲಿಯನ್ ಕಾಮಗಾರಿ

Update: 2019-05-20 15:40 GMT

ಪಡುಬಿದ್ರಿ: ಹೆಜಮಾಡಿ ಬಸ್ತಿಪಡ್ಪು ರಾಜೀವಗಾಂಧಿ ಕ್ರೀಡಾಂಗಣದ ಪೆವಿಲಿಯನ್ ಕಾಮಗಾರಿ ಭಾರೀ ನಿರೀಕ್ಷೆಯೊಂದಿಗೆ ಎರಡು ವರ್ಷಗಳ ಹಿಂದೆ ಕಾಮಗಾರಿ ಆರಂಭಗೊಂಡಿತ್ತು. ಆದರೆ ಇದೀಗ ಅನುದಾನದ ಕೊರತೆಯಿಂದ ಕಾಮಗಾರಿ ಸ್ಥಗಿತಗೊಂಡಿದೆ.

ಮಾಜಿ ಸಚಿವ ವಿನಯಕುಮಾರ್ ಸೊರಕೆಯವರ ಮುತುವರ್ಜಿಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮೂಲಕ 2 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಆರಂಭಗೊಂಡಿತ್ತು. ಒಂದು ಸಾವಿರ ಪ್ರೇಕ್ಷಕರು ಕುಳಿತುಕೊಳ್ಳಲು ಅನುಕೂಲವಾಗುವ ಗ್ಯಾಲರಿ, ಕಚೇರಿ ಕಟ್ಟಡ ಸಹಿತ 6 ಅಂಗಡಿ ಕೋಣೆಗಳು, 400 ಮೀ. ಮಡ್ ಟ್ರ್ಯಾಕ್ ಹಾಗೂ ಚರಂಡಿ ನಿರ್ಮಿಸಲು ಯೋಜನೆ ಸಿದ್ದಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದರಂತೆ ಎರಡು ವರ್ಷಗಳ ಹಿಂದೆ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಆದರೆ 1 ಕೋಟಿ ರೂ. ಮಾತ್ರ ಬಿಡುಗಡೆಯಾಗಿ ಅನುದಾನವಿಲ್ಲದೆ ಕಾಮಗಾರಿ ಈಗ ಸ್ಥಗಿತಗೊಂಡಿದೆ.

ಹಳೆ ಪೆವಿಲಿಯನ್ ಕಟ್ಟಡ ದುರಸ್ತಿ:

ಹೆಜಮಾಡಿ ಬಸ್ತಿಪಡ್ಪು ರಾಜೀವಗಾಂಧಿ ಕ್ರೀಡಾಂಗಣವನ್ನು 2002ರಲ್ಲಿ ಕಾಪು ಶಾಸಕ ವಸಂತ ವಿ ಸಾಲಿಯಾನ್ ಅವರ ಮುತುವರ್ಜಿಯಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲಾಗಿತ್ತು. ಲೋಕೋಪಯೋಗಿ ಇಲಾಖೆ ಮೂಲಕ ಆಂದು ಶಂಕುಸ್ಥಾಪನೆಗೊಂಡ ರೂ 33 ಲಕ್ಷ ವೆಚ್ಚದ ಪೆವಿಲಿಯನ್ ಕಟ್ಟಡ ಮತ್ತು ಟ್ರ್ಯಾಕ್ ನಿರ್ಮಾಣ ಕಾಮಗಾರಿ 2003 ರಲ್ಲಿ ಆರಂಭಗೊಂಡಿತ್ತು. 2004 ರಲ್ಲಿ ಅದು ಉದ್ಘಾಟನೆಗೊಂಡಿತ್ತು. ಅ ಬಳಿಕ ಸ್ಥಳೀಯವಾಗಿ ಇಲ್ಲಿ ಹಲವಾರು ಕ್ರೀಡೆ ಹಾಗೂ ಪುಟ್ಬಾಲ್ ಪಂದ್ಯಾಟಗಳು ನಡೆದಿತ್ತು.

ಅವೈಜ್ಞಾನಿಕವಾಗಿ ಕ್ರೀಡಾಂಗಣದ ಮಧ್ಯಭಾಗದಲ್ಲಿ ಈ ಹಿಂದೆ ಸುಮಾರು ರೂ. 57 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಪೆವಿಲಿಯನ್ ಕಟ್ಟಡ ಭದ್ರತೆಯಿಲ್ಲದೆ ಅಕ್ರಮ ಚಟುವಟಿಕೆಗಳ ತಾಣವಾಗಿ ರೂಪುಗೊಂಡಿತ್ತು. ಇದೀಗ ಜಿಲ್ಲಾ ಪಂಚಾಯಿತಿಯ 10 ಲಕ್ಷ ರೂ. ಅನುದಾನದಲ್ಲಿ ಅದನ್ನೂ ದುರಸ್ತಿ ಮಾಡಲಾಗಿದೆ. ವಿದ್ಯುತ್ ಸಂಪರ್ಕ, ಶೌಚಾಲಯ, ಪ್ರೇಕ್ಷಕರ ಗ್ಯಾಲರಿಗೆ ಅಳವಡಿಸಿದ್ದ ತುಕ್ಕುಹಿಡಿದ ತಡೆಬೇಲಿಗಳನ್ನು ಬದಲಿಸಿ ಸುಣ್ಣ ಬಣ್ಣ ಬಳಿಯಲಾಗಿದೆ. ಕಟ್ಟಡ ಸುತ್ತ ಭದ್ರತಾ ಗೇಟ್‍ಗಳನ್ನು ಅಳವಡಿಸಲಾಗಿದೆ.

ಶಾಸಕ ಲಾಲಾಜಿ ಆರ್ ಮೆಂಡನ್ ಶಾಸಕತ್ವದ ಅವಧಿಯಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಲೋಕೋಪಯೋಗಿ ಇಲಾಖೆ ಮೂಲಕ  ರೂ. 24.30 ಲಕ್ಷ ಅನುದಾನದಲ್ಲಿ ಕ್ರೀಡಾಂಗಣದ ಮುಂದುವರಿದ ಹಾಗೂ ನವೀಕರಣ ಕಾಮಗಾರಿಯನ್ನು ನಡೆಸಿ, 2009ರಲ್ಲಿ ಉದ್ಘಾಟಿಸಲಾಗಿತ್ತು. ಒಟ್ಟಿನಲ್ಲಿ ಇಷ್ಟೆಲ್ಲ ಕಾಮಗಾರಿಗಳು ನಡೆದರೂ ಸಮರ್ಪಕವಾಗಿ ಉಪಯೋಗಕ್ಕೆ ಬಂದಿಲ್ಲ ನಂತರ ಕ್ರೀಡಾ ಇಲಾಖೆಯ 2014-15ರ ರೂ. 25 ಲಕ್ಷ ಮತ್ತು 15-16 ನೇ ಸಾಲಿನ ರೂ. 29 ಲಕ್ಷ ಅನುದಾನದದಲ್ಲಿ ಕ್ರೀಡಾಂಗಣ ಸುತ್ತ ಆವರಣಗೋಡೆ ನಿರ್ಮಿಸಲಾಗಿದೆ.

ಅತೀ ದೊಡ್ಡ ಮೈದಾನ: ಹೆಜಮಾಡಿಯ ಬಸ್ತಿಪಡ್ಪು ರಾಜೀವ್ ಗಾಂಧಿ ಕ್ರೀಡಾಂಗಣವು ಜಿಲ್ಲೆಯ ಅತೀ ದೊಡ್ಡ ಮೈದಾನವಾಗಿದ್ದು, ಸುಮಾರು 13.5 ಎಕರೆ ವಿಶಾಲವಾದ ಜಮೀನು ಹೊಂದಿದೆ. ಈ ಮೈದಾನವು ಪುಟ್ಬಾಲ್ ಪಂದ್ಯಕ್ಕೆ ಪ್ರಸಿದ್ಧಿ ಪಡೆದಿದೆ. ಕಾಪು ತಾಲ್ಲೂಕಾಗಿ ಮಾರ್ಪಟ್ಟಿರುವ ಕಾರಣ ರಾಷ್ಟ್ರೀಯ ಹೆದ್ದಾರಿ 66ಕ್ಕೆ ಹೊಂದಿಕೊಂಡಿರುವ ವಿಶಾಲವಾದ ಹೆಜಮಾಡಿ ಕ್ರೀಡಾಂಗಣವನ್ನು ಸೂಕ್ತವಾಗಿ ಅಭಿವೃದ್ಧಿಪಡಿಸಿ ತಾಲೂಕು ಕ್ರೀಡಾಂಗಣವಾಗಿ ರೂಪಿಸುವ ಅವಶ್ಯಕತೆಯಿದೆ.

ಅನುದಾನದ ನಿರೀಕ್ಷೆಯಲ್ಲಿ: ಈ ವರ್ಷದ ಬಜೆಟ್‍ನಲ್ಲಿ ಬಾಕಿ ಉಳಿದ ಅನುದಾನವನ್ನು ಬಿಡುಗಡೆ ಮಾಡುವುದಾಗಿ ಸರ್ಕಾರ ಭರವಸೆ ನೀಡಿದೆ. ಅನುದಾನ ಬಿಡುಗಡೆಯಾದಲ್ಲಿ ಶೀಘ್ರ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಉಡುಪಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ. 

2 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕಾಮಗಾರಿ ಆಮೆನಡಿಗೆಯಲ್ಲಿ ಸಾಗುತ್ತಿದೆ. ಉಸ್ತವಾರಿ ಸಚಿವರ ನೇತೃತ್ವದಲ್ಲಿ ತಾಲೂಕು ಕ್ರೀಡಾಂಗಣ ಘೋಷಣೆಯಾಗಿದೆ. ಆದರೆ ಆದ್ಯತೆ ಮೇರೆಗೆ ಕಾಮಗಾರಿ ನಡೆಯುತಿಲ್ಲ. ಈ ಮೈದಾನದ ಒಂದು ಭಾಗದಲ್ಲಿ ವಯೋವೃದ್ಧರಿಗೆ ವಾಕಿಂಗ್ ಟ್ರಾಕ್ ಅಗತ್ಯ ಇದೆ. ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸುವುದಾಗಿ ಕ್ರೀಡಾಂಗಣ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಶೇಖರ್ ಹೆಜಮಾಡಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News