ಮಂಗಳೂರು: ವಿವಾದದ ನಡುವೆಯೂ ಗೋಡ್ಸೆ ಜನ್ಮದಿನ ಆಚರಿಸಿದ ಹಿಂದೂ ಮಹಾಸಭಾ

Update: 2019-05-20 16:28 GMT

ಮಂಗಳೂರು, ಮೇ 20: ನಾಥೂರಾಮ್ ಗೋಡ್ಸೆ ಬಗ್ಗೆ ಚರ್ಚೆಗಳು ಮುನ್ನೆಲೆಗೆ ಬಂದಿರುವ ನಡುವೆಯೇ ಮಂಗಳೂರಿನಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾ ರಾಜ್ಯ ಸಮಿತಿಯು ರವಿವಾರ ನಾಥೂರಾಮ್ ಗೋಡ್ಸೆಯ ಜಯಂತಿ ಆಚರಿಸಿದೆ.

ಸ್ವಾತಂತ್ರಾ ನಂತರ ನಿರಂತರವಾಗಿ ಚರ್ಚೆಯಾಗುತ್ತಿರುವ ಗಾಂಧಿ ಹಂತಕ ನಾಥೂರಾಂ ಗೋಡ್ಸೆ ವಿಚಾರ ಲೋಕಸಭಾ ಚುನಾವಣೆಯಿಂದ ಮತ್ತೆ ಮುನ್ನಲೆಗೆ ಬಂದಿದೆ. ನಟ ಕಮಲ್ ಹಾಸನ್ ಸ್ವಾತಂತ್ರ ಭಾರತದ ಮೊದಲ ಹಿಂದೂ ಉಗ್ರ ಗೋಡ್ಸೆ ಎಂಬ ಹೇಳಿಕೆ ರಾಜಕೀಯ ಬಣ್ಣ ಪಡೆದು ಹಲವು ಆರೋಪ ಪ್ರತ್ಯಾರೋಪಗಳಿಗೆ ಕಾರಣವಾಗಿತ್ತು.

ಈ ನಡುವೆ ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ನಳಿನ್‌ ಕುಮಾರ್ ಕಟೀಲು ಗೋಡ್ಸೆ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ಬಳಿಕ ಕ್ಷಮೆಯಾಚನೆ ಮಾಡಿದ್ದರು. ಗೋಡ್ಸೆ ಪರ ಹೇಳಿಕೆ ನೀಡಿದ್ದ  ಪ್ರಜ್ಞಾ ಸಿಂಗ್, ಅನಂತ್ ಕುಮಾರ್ ಹೆಗಡೆ ಹಾಗೂ ನಳಿನ್ ಕುಮಾರ್ ಕಟೀಲ್ ಅವರ ವಿರುದ್ಧ ಬಿಜೆಪಿ ವರಿಷ್ಠರು ಸಿಟ್ಟಾಗಿದ್ದರು ಎಂದು ತಿಳಿದುಬಂದಿದೆ.

ಈ ಬೆಳವಣಿಗೆಗಳ ನಡುವೆಯೇ ಮಂಗಳೂರಿನಲ್ಲಿ ಗೋಡ್ಸೆ ಜನ್ಮ ದಿನಾಚರಣೆಯನ್ನು ಮಾಡುವ ಮೂಲಕ ಅಖಿಲ ಭಾರತ ಹಿಂದೂ ಮಹಾಸಭಾ ಕರ್ನಾಟಕ ರಾಜ್ಯದ ಕಾರ್ಯಕರ್ತರು ವಿವಾದಕ್ಕೆ ಕಾರಣರಾಗಿದ್ದಾರೆ.

ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿಂದೂ ಮಹಾಸಭಾದ ಸುವರ್ಣ, ರಾಜೇಶ್, ಧರ್ಮೇಂದ್ರ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮ ಆಯೋಜಿಸಿದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News