ಚುನಾವಣಾ ಫಲಿತಾಂಶಗಳು ಚುನಾವಣೋತ್ತರ ಸಮೀಕ್ಷೆಗಳಿಗೆ ಅನುಗುಣವಾಗಿರಲಿವೆ: ಜೇಟ್ಲಿ

Update: 2019-05-20 16:25 GMT

ಹೊಸದಿಲ್ಲಿ,ಮೇ 20: ಲೋಕಸಭಾ ಚುನಾವಣೆಗಳ ಫಲಿತಾಂಶಗಳು ಚುನಾವಣೋತ್ತರ ಸಮೀಕ್ಷೆಗಳಿಗೆ ಅನುಗುಣವಾಗಿರಲಿವೆ ಎಂದು ಕೇಂದ್ರ ವಿತ್ತಸಚಿವ ಅರುಣ್ ಜೇಟ್ಲಿ ಅವರು ಆಶಯ ವ್ಯಕ್ತಪಡಿಸಿದ್ದಾರೆ.

ರವಿವಾರ ಅಂತಿಮ ಹಂತದ ಮತದಾನ ಮುಗಿದ ಬಳಿಕ ಬಹಿರಂಗಗೊಂಡ ಹೆಚ್ಚಿನ ಚುನಾವಣೋತ್ತರ ಸಮೀಕ್ಷೆಗಳು ನರೇಂದ್ರ ಮೋದಿಯವರು ಎರಡನೇ ಬಾರಿ ಅಧಿಕಾರಕ್ಕೇರುತ್ತಾರೆ ಎಂದು ಭವಿಷ್ಯ ನುಡಿದಿವೆ. ಬಿಜೆಪಿ ನೇತೃತ್ವದ ಎನ್‌ಡಿಎ 300ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುವ ಮೂಲಕ ಲೋಕಸಭೆಯಲ್ಲಿ ಬಹುಮತಕ್ಕೆ ಅಗತ್ಯವಾಗಿರುವ 272ರ ಗೆರೆಯನ್ನು ಸುಲಭವಾಗಿ ದಾಟಲಿದೆ ಎಂದು ಕೆಲವು ಸಮೀಕ್ಷೆಗಳು ತಿಳಿಸಿವೆ.

ಚುನಾವಣೋತ್ತರ ಸಮೀಕ್ಷೆಗಳ ಲೆಕ್ಕಾಚಾರ ಮತ್ತು ನಿಖರತೆಗಳ ಬಗ್ಗೆ ಹಲವರು ವಾದವಿವಾದದಲ್ಲಿ ತೊಡಗಿರಬಹುದು. ಆದರೆ ಹೆಚ್ಚಿನ ಸಮೀಕ್ಷೆಗಳು ಒಂದೇ ಸಂದೇಶವನ್ನು ರವಾನಿಸುತ್ತಿರುವಾಗ ಸಾರ್ವತ್ರಿಕ ಚುನಾವಣೆಗಳ ನಿಜವಾದ ಫಲಿತಾಂಶವು ಅದೇ ದಿಕ್ಕಿನಲ್ಲಿದೆ ಎನ್ನುವುದು ಕಟುವಾಸ್ತವವಾಗಿದೆ ಮತ್ತು ಫಲಿತಾಂಶವು ಚುನಾವಣೋತ್ತರ ಸಮೀಕ್ಷೆಗಳಿಗೆ ಅನುಗುಣವಾಗಿರಲಿದೆ ಎಂದು ಜೇಟ್ಲಿ ತನ್ನ ಬ್ಲಾಗ್‌‌ನಲ್ಲಿ ಬರೆದಿದ್ದಾರೆ.

 ಚುನಾವಣೋತ್ತರ ಸಮೀಕ್ಷೆಗಳಲ್ಲಿ ವಿದ್ಯುನ್ಮಾನ ಮತದಾನ ಯಂತ್ರ(ಇವಿಎಂ)ಗಳು ಯಾವುದೇ ಪಾತ್ರ ಹೊಂದಿಲ್ಲ ಎನ್ನುವುದನ್ನು ಬೆಟ್ಟು ಮಾಡಿರುವ ಅವರು,ವಾಸ್ತವ ಪರಿಣಾಮಗಳು ಚುನಾವಣೋತ್ತರ ಸಮೀಕ್ಷೆಗಳ ದಿಕ್ಕಿನಲ್ಲಿಯೇ ಇದ್ದರೆ ಇವಿಎಂ ಕುರಿತು ಪ್ರತಿಪಕ್ಷಗಳ ಆರೋಪವು ಅಸ್ತಿತ್ವದಲ್ಲಿಯೇ ಇಲ್ಲದ ತನ್ನ ತಾರ್ಕಿಕತೆಯನ್ನು ಕಳೆದುಕೊಳ್ಳುತ್ತದೆ ಎಂದಿದ್ದಾರೆ.

ಕಾಂಗ್ರೆಸ್ ಪಕ್ಷವನ್ನು ಪ್ರಸ್ತಾಪಿಸಿರುವ ಜೇಟ್ಲಿ,ಈ ಹಳೆಯ ಪಕ್ಷಕ್ಕೆ ಗಾಂಧಿ ಕುಟುಂಬವು ಹೊರೆಯಾಗಿ ಪರಿಣಮಿಸಿದೆ. ಆ ಪಕ್ಷದಲ್ಲಿ ಗಾಂಧಿ ಕುಟುಂಬವು ಒಂದು ಆಸ್ತಿಯಾಗಿ ಉಳಿದುಕೊಂಡಿಲ್ಲ,ಅದೀಗ ಪಕ್ಷದ ಕುತ್ತಿಗೆಯ ಸುತ್ತ ಭಾರವಾಗಿದೆ. ಗಾಂಧಿ ಕುಟುಂಬವಿಲ್ಲದೆ ಕಾಂಗ್ರೆಸ್ ಜನರನ್ನಾಕರ್ಷಿಸದು,ಗಾಂಧಿ ಕುಟುಂಬವಿದ್ದರೆ ಅದಕ್ಕೆ ಮತಗಳು ದೊರೆಯುವುದಿಲ್ಲ ಎಂದು ಹೇಳಿದ್ದಾರೆ.

ಮೋದಿಯವರ ವಿರುದ್ಧ ವ್ಯಕ್ತಿಗತ ಅಪಪ್ರಚಾರವು 2014ರ ಚುನಾವಣೆಯಲ್ಲಿ ಹೆಚ್ಚಿನ ಲಾಭವನ್ನು ನೀಡಿರಲಿಲ್ಲ ಮತ್ತು 2019ರಲ್ಲಿಯೂ ಇದು ಪುನರಾವರ್ತನೆಯಾಗಲಿದೆ ಎಂದಿದ್ದಾರೆ.

ನಾಯಕರು ಪ್ರತಿಭೆಯ ಆಧಾರದಲ್ಲಿ ನಿರ್ಧರಿಸಲ್ಪಡುತ್ತಾರೆಯೇ ಹೊರತು ಜಾತಿ ಅಥವಾ ಕುಟುಂಬದ ಹೆಸರುಗಳಿಂದಲ್ಲ. ಹೀಗಾಗಿ ಜಾತಿಯನ್ನು ಮೀರಿದ ಪ್ರಧಾನಿಯವರ ಶೈಲಿ ಹಾಗೂ ಸಾಧನೆಗೆ ಸಂಬಂಧಿಸಿದ ವಿಷಯಗಳಿಗೆ ಹೆಚ್ಚಿನ ಗಮನ ನೀಡಿದ್ದನ್ನು ಮತದಾರರು ಒಪ್ಪಿಕೊಂಡಿದ್ದಾರೆ. ಪ್ರತಿಪಕ್ಷಗಳ ಮೈತ್ರಿಕೂಟಗಳನ್ನು ಮತದಾರರು ನಂಬುವುದಿಲ್ಲ ಎಂದು ಜೇಟ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News