ಗೋಡ್ಸೆ ಜನ್ಮ ದಿನಾಚರಣೆ: ಹಿಂದೂ ಮಹಾಸಭಾದ 6 ಕಾರ್ಯಕರ್ತರ ಬಂಧನ

Update: 2019-05-20 17:09 GMT

ಸೂರತ್, ಮೇ 20: ಸೂರತ್‌ನ ಲಿಂಬಾಯತ್ ಪ್ರದೇಶದಲ್ಲಿರುವ ದೇವಾಲಯದಲ್ಲಿ ರವಿವಾರ ಮಹಾತ್ಮ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆ ಜನ್ಮ ದಿನಾಚರಣೆ ಆಚರಿಸಿದ ಹಿಂದೂ ಮಹಾಸಭಾದ 6 ಮಂದಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

ಆಗಿನ ಬಾಂಬೆ ಪ್ರೆಸಿಡೆನ್ಸಿಯ ಭಾಗವಾಗಿದ್ದ ಪುಣೆ ಜಿಲ್ಲೆಯ ಬಾರಾಮತಿಯಲ್ಲಿ 19 ಮೇ 1910ರಲ್ಲಿ ನಾಥೂರಾಮ್ ಗೋಡ್ಸೆ ಜನಿಸಿದ್ದ. ನಗರದ ಲಿಂಬಾಯತ್ ಪ್ರದೇಶದಲ್ಲಿರುವ ಸೂರ್ಯಮುಖಿ ದೇವಾಲಯದ ಆವರಣದಲ್ಲಿ ನಾಥೂರಾಮ್ ಗೋಡ್ಸೆಯ ಜನ್ಮ ದಿನಾಚರಣೆ ಆಯೋಜಿಸಿದ ಆರೋಪದಲ್ಲಿ ಸೋಮವಾರ ಹಿಂದೂ ಮಹಾಸಭಾದ ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಸೂರತ್ ಪೊಲೀಸ್ ಆಯುಕ್ತ ಸತೀಶ್ ಶರ್ಮಾ ಹೇಳಿದ್ದಾರೆ.

ಗೋಡ್ಸೆ ಜನ್ಮ ದಿನಾಚರಣೆ ದಿನ ದೇವಾಲಯದ ಆವರಣದಲ್ಲಿ ಹಿಂದೂ ಮಹಾ ಸಭಾದ ಈ ಸದಸ್ಯರು ಗೋಡ್ಸೆ ಭಾವಚಿತ್ರಕ್ಕೆ ಹಣತೆ ಹಚ್ಚಿ ಗೌರವ ಸಲ್ಲಿಸಿದ್ದರು. ಸಿಹಿ ಹಂಚಿಕೊಂಡಿದ್ದರು ಹಾಗೂ ಭಜನೆ ಮಾಡಿದ್ದರು. ಅಲ್ಲದೆ ಈ ಕಾರ್ಯಕ್ರಮದ ವೀಡಿಯೊ ಮಾಡಿದ್ದರು ಹಾಗೂ ಫೋಟೊ ತೆಗೆದಿದ್ದರು ಎಂದು ಶರ್ಮಾ ಹೇಳಿದ್ದಾರೆ. ಗಾಂಧೀಜಿ ಅವರನ್ನು ಹತ್ಯೆಗೈದ ಗೋಡ್ಸೆಯನ್ನು ನೆನಪಿಸುವ ಇವರ ವರ್ತನೆ ನಾಗರಿಕರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದೆ. ಇದು ಜನರನ್ನು ಉತ್ತೇಜಿಸುವ ಹಾಗೂ ಶಾಂತಿಯುತ ವಾತಾವರಣವನ್ನು ಕದಡುವ ಪ್ರಯತ್ನ ಎಂದು ಶರ್ಮಾ ಹೇಳಿದ್ದಾರೆ.

ಆರು ಮಂದಿಯನ್ನು ಬಂಧಿಸಲಾಗಿದೆ. ಬಂಧಿತರನ್ನು ಹಿರೇನ್ ಮಶ್ರು, ವಾಲಾ ಭರ್ವಾಡ್, ವಿರಾಲ್ ಮಾಲ್ವಿ, ಹಿತೇಶ್ ಸೋನಾರ್, ಯೋಗೇಶ್ ಪಟೇಲ್ ಹಾಗೂ ಮನೀಶಾ ಕಲಾಲ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News