ವರ್ಷವೊಂದರಲ್ಲೇ 55 ಕೋಟಿಗೂ ಅಧಿಕ ಇ ವೇ ಬಿಲ್: ಡಾ.ಮುರಳೀಕೃಷ್ಣ

Update: 2019-05-21 07:48 GMT

ಮಂಗಳೂರು, ಮೇ 21: ವ್ಯಾಪಾರಸ್ಥರು, ವ್ಯವಹಾರಸ್ಥರಿಗೆ ಜಿಎಸ್‌ಟಿಯಡಿ ಜಾರಿಗೆ ತರಲಾದ ಇ- ವೇ ಬಿಲ್ ವ್ಯವಸ್ಥೆಯಡಿ ಕಳೆದ ಒಂದು ವರ್ಷದ ಅವಧಿಯಲ್ಲಿ 55 ಕೋಟಿಗೂ ಅಧಿಕ ಇ ವೇ ಬಿಲ್ ಜನರೇಟ್ ಆಗಿದೆ ಎಂದು ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತ ಡಾ.ಬಿ.ವಿ. ಮುರಳೀಕೃಷ್ಣ ತಿಳಿಸಿದ್ದಾರೆ.

ನಗರದ ಕೆನರಾ ವಾಣಿಜ್ಯ ಮತ್ತು ಕೈಗಾರಿಕೆಗಳ ಸಂಘ (ಕೆಸಿಸಿಐ)ದಲ್ಲಿ ನಗರದ ವ್ಯಾಪಾರಿಗಳು, ಉದ್ದಿಮೆದಾರರಿಗೆ ಆಯೋಜಿಸಲಾದ ಜಿಎಸ್‌ಟಿ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ತೆರಿಗೆ ಸೇರಿದಂತೆ ವಿನಾಯಿತಿ ಸರಕಗಳು ವೌಲ್ಯಗಳನ್ನು ಹೊರತುಪಡಿಸಿ ಯಾವುದೇ ರೀತಿಯ ಸರಕಗಳು ರಫ್ತು- ಆಮದಿಗೆ ಸಂಬಂಧಿಸಿ ವೌಲ್ಯವು 50,000 ರೂ.ಗಳನ್ನು ಮೇಲ್ಪಟ್ಟಾಗ ಇ- ವೇ ಬಿಲ್ ರಚನೆ ಅಗತ್ಯವಾಗಿದೆ. ಹಾಗಾಗಿ ಜಿಎಸ್‌ಟಿಯಲ್ಲಿ ರಿಟರ್ನ್ಸ್ ಫೈಲ್ ಮಾಡಬೇಕಾಗುತ್ತದೆ. ಈ ತೆರನಾದ ಬದಲಾವಣೆಯ ತೆರಿಗೆ ಪದ್ಧತಿಯು ಮೇಲ್ನೋಟಕ್ಕೆ ಗೊಂದಲ ಹಾಗೂ ಕ್ಲಿಷ್ಟಕರವಾಗಿ ಕಂಡರೂ ವ್ಯಾಪಾರ ವಹಿವಾಟಿನಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿದೆ. ಮತ್ತು ವ್ಯವಹಾರಸ್ಥರು ಸ್ವ ಇಚ್ಛೆಯಿಂದ ಜಿಎಸ್‌ಟಿಯಡಿ ರಿಟನ್ಸ್ ಫೈಲ್ ಮಾಡುವ ಮೂಲಕ ಇ ವೇ ಬಿಲ್ ವ್ಯವಸ್ಥೆಯನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದರು.

ಜಿಎಸ್‌ಟಿಯ ಸ್ವರೂಪಗಳು, ರಿಟನ್ಸ್ ಫೈಲ್ ಮಾಡುವ ರೀತಿ, ಯಾರೆಲ್ಲಾ ರಿಟನ್ಸ್ ಫೈಲ್ ಮಾಡುವ ಅಗತ್ಯವಿದೆ ಹಾಗೂ ಮಾಡದಿದ್ದಲ್ಲಿ ದಂಡ ಮೊದಲಾದ ಅಂಶಗಳನ್ನು ಕಾರ್ಯಕ್ರಮದಲ್ಲಿ ಸೇರಿದ್ದ ವ್ಯವಹಾರಸ್ಥರಿಗೆ ವಿವರವಾಗಿ ಅವರು ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಸಿಸಿಐ ಅಧ್ಯಕ್ಷ ಪಿ.ಬಿ.ಅಬ್ದುಲ್ ಹಮೀದ್ ವಹಿಸಿ ಸ್ವಾಗತಿಸಿದರು. ಉಪಾಧ್ಯಕ್ಷ ಐಸಾಕ್ ವಾಸ್ ಮುಖ್ಯ ಅತಿಥಿಯ ಪರಿಚಯ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News