ಶಿಕ್ಷಣ ಇಲಾಖೆಯಿಂದ ಶೇ.60 ಪಠ್ಯಪುಸ್ತಕ ಪೂರೈಕೆ

Update: 2019-05-21 08:45 GMT
ಸಾಂದರ್ಭಿಕ ಚಿತ್ರ

ಮಂಗಳೂರು, ಮೇ 20: ದ.ಕ. ಶೈಕ್ಷಣಿಕ ಜಿಲ್ಲೆಯ ಏಳು ವಲಯಗಳ ವ್ಯಾಪ್ತಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಸಲ್ಲಿಸಿದ ಬೇಡಿಕೆಗಳ ಪೈಕಿ ಶೇ.60.03ರಷ್ಟು ಪಠ್ಯಪುಸ್ತಕಗಳನ್ನು ಶಿಕ್ಷಣ ಇಲಾಖೆಯಿಂದ ಸರಬರಾಜು ಮಾಡಲಾಗಿದೆ. ಶಾಲಾ ಪ್ರಾರಂಭೋತ್ಸವದ ದಿನದಂದು ಮಕ್ಕಳಿಗೆ ವಿತರಣೆ ಮಾಡಲು ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿದೆ.

2019-20ನೇ ಪ್ರಸಕ್ತ ಶೈಕ್ಷಣಿಕ ವರ್ಷದ ಶಾಲಾ ತರಗತಿಗಳು ಮೇ 29ರಿಂದ ಆರಂಭಗೊಳ್ಳಲಿದೆ. ಆಯಾ ವಲಯಗಳ ಕ್ಷೇತ್ರ ಶಿಕ್ಷಣಾಧಿಕಾರಿ ಮೂಲಕ ಶಾಲೆಗಳಿಂದ ಎಸ್‌ಎಟಿಎಸ್ (ವಿದ್ಯಾರ್ಥಿ ಹಾಜರಾತಿ ಮಾಹಿತಿ) ಅನ್ವಯ ಬೇಡಿಕೆ ಸಲ್ಲಿಸಲಾದ ಪ್ರಮಾಣದಲ್ಲಿ ಪಠ್ಯಪುಸ್ತಕಗಳನ್ನು ಸರಬರಾಜು ಮಾಡಲಾಗಿದ್ದು, ಇನ್ನು ಶೇ.40ರಷ್ಟು ಬರುವ ಅಗತ್ಯವಿದೆ.

ದ.ಕ. ಶೈಕ್ಷಣಿಕ ಜಿಲ್ಲೆಯ ಏಳು ವಲಯಗಳಾದ ಬಂಟ್ವಾಳ, ಬೆಳ್ತಂಗಡಿ, ಮಂಗಳೂರು ಉತ್ತರ, ಮಂಗಳೂರು ದಕ್ಷಿಣ, ಮೂಡುಬಿದಿರೆ, ಪುತ್ತೂರು, ಮತ್ತು ಸುಳ್ಯದಲ್ಲಿ ಪುಸ್ತಕಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಒಟ್ಟು 20,15,413 ಪುಸ್ತಕಗಳಿಗೆ ಬೇಡಿಕೆ ಸಲ್ಲಿಸಲಾಗಿತ್ತು. ಇದರಲ್ಲಿ 14,44,235 ಪುಸ್ತಕಗಳನ್ನು ಪೂರೈಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ನೋಡಲ್ ಅಧಿಕಾರಿ ಶಮಂತ್ ‘ವಾರ್ತಾಭಾರತಿ’ಗೆ ಮಾಹಿತಿ ನೀಡಿದ್ದಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಪಠ್ಯಪುಸ್ತಕಗಳು ಆಯಾ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ)ಕಚೇರಿಗಳಿಗೆ ನೇರವಾಗಿ ಸರಬರಾಜು ಆಗುತ್ತಿವೆ. ಬಿಇಒ ಕಚೇರಿಗೆ ಬಂದಂತಹ ಪುಸ್ತಕಗಳನ್ನು ಆ ದಿನವೇ ಕ್ಷೇತ್ರ ವ್ಯಾಪ್ತಿಯಲ್ಲಿನ ಶಾಲೆಗಳಿಗೆ ರವಾನಿಸಲಾಗುತ್ತದೆ. ಬಿಇಒಗಳು ಮೇಲ್ವಿಚಾರಣೆ ವಹಿಸಿಕೊಂಡಿರುತ್ತಾರೆ. ಪ್ರತಿ ತಾಲೂಕುಗಳಲ್ಲೂ ಪಠ್ಯಪುಸ್ತಕದ ನೋಡಲ್ ಅಧಿಕಾರಿಗಳು ಇರುತ್ತಾರೆ. ಬಿಇಒಗಳು ಶಾಲಾ ಮುಖ್ಯೋಪಾಧ್ಯಾಯರಿಗೆ ಪುಸ್ತಕಗಳನ್ನು ಕಳುಹಿಸುತ್ತಾರೆ. ಮುಖ್ಯೋಪಾಧ್ಯಾಯರು ಅವುಗಳನ್ನು ಮೇ 29ರಂದು ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಿದ್ದಾರೆ ಎಂದು ನೋಡಲ್ ಅಧಿಕಾರಿ ತಿಳಿಸಿದ್ದಾರೆ.

ಎಲ್ಲ ಶಾಲಾ ಮುಖ್ಯೋಪಾಧ್ಯಾಯರು ತಮ್ಮ ಅಗತ್ಯಕ್ಕೆ ತಕ್ಕಂತೆ ಆನ್‌ಲೈನ್ ಮೂಲಕ ಪಠ್ಯಪುಸ್ತಕಗಳ ಬೇಡಿಕೆಯನ್ನು ಸಲ್ಲಿಸುತ್ತಾರೆ. ಆ ಬೇಡಿಕೆಗೆ ಅನುಗುಣವಾಗಿ ಪುಸ್ತಕಗಳು ಮುದ್ರಣಗೊಂಡು ಸರಬರಾಜು ಆಗುತ್ತಿವೆ. ಅಲ್ಲಿಂದ ಯೋಜನಾಬದ್ಧವಾಗಿ ಆಯಾ ಶಾಲೆಗಳಿಗೆ ಪುಸ್ತಕಗಳು ರವಾನೆಯಾಗುತ್ತವೆ. ಮೇ 28ರಂದು ಎಲ್ಲ ಶಿಕ್ಷಕರು ಶಾಲೆಗಳಿಗೆ ಹಾಜರಾಗಲಿದ್ದಾರೆ. ಮರುದಿನ (ಮೇ 29) ಆಯಾ ಶಾಲಾ ಶಿಕ್ಷಕರು ಮಕ್ಕಳನ್ನು ಸ್ವಾಗತಿಸುವ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದರು.

ಅನುದಾನ ರಹಿತ ಶಾಲೆಗಳ ಮುಖ್ಯಸ್ಥರು ಮಾರಾಟ ಪಠ್ಯಪುಸ್ತಕಗಳನ್ನು ಖರೀದಿಸುವ ಅಗತ್ಯವಿದೆ. ಅವರೂ ಕೂಡ ಆನ್‌ಲೈನ್ ಮೂಲಕವೇ ಪುಸ್ತಕಗಳ ಪ್ರಮಾಣ ಹಾಗೂ ಆನ್‌ಲೈನ್ ಪೇಮೆಂಟ್ ಮಾಡಬೇಕು. ಈ ಮೊದಲು ಬ್ಯಾಂಕ್‌ಗಳ ಮೂಲಕ ಚಲನ್ ತೆಗೆದು ಹಣ ಪಾವತಿಸುತ್ತಿದ್ದರು. ಈಗ ನೂತನವಾಗಿ ಯೋಜನೆಗಳನ್ನು ಹಾಕಿಕೊಂಡ ಫಲವಾಗಿ ಪ್ರಕ್ರಿಯೆ ಸರಳವಾಗಿದೆ. ಇದೇ ವಾರದಲ್ಲಿ ಅಂದರೆ ಶಾಲೆಗಳು ಆರಂಭವಾಗುವ ಮೊದಲೇ ಎಲ್ಲ ಪುಸ್ತಕಗಳು ವಿದ್ಯಾರ್ಥಿಗಳಿಗೆ ಲಭ್ಯವಾಗಲಿವೆ ಎಂದರು.

ಬೇಸಿಗೆಯ ರಜೆ ಕಳೆದು ಮರಳಿ ಶಾಲೆಗೆ ತೆರಳಲು ಎಲ್ಲ ವಿದ್ಯಾರ್ಥಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ. ಅದರಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯೂ ಶಾಲೆ ಪ್ರಾರಂಭೋತ್ಸವದ ದಿನದಂದೇ ಮಕ್ಕಳಿಗೆ ಪಠ್ಯಪುಸ್ತಕಗಳನ್ನು ವಿತರಿಸುವ ನಿಟ್ಟಿನಲ್ಲಿ ಆಯಾ ಶಾಲೆಗಳಿಗೆ ಪಠ್ಯ ಪುಸ್ತಕಗಳನ್ನು ಸರಬರಾಜು ಮಾಡುತ್ತಿದೆ. ಪ್ರತಿವರ್ಷ ತರಗತಿಗಳು ಆರಂಭಗೊಂಡು ಹಲವು ತಿಂಗಳು ಕಳೆದರೂ ಮಕ್ಕಳಿಗೆ ಎಲ್ಲ ವಿಷಯಗಳ ಪಠ್ಯಪುಸ್ತಕಗಳು ಲಭಿಸುತ್ತಿರಲಿಲ್ಲ. ಆದರೆ, ಈ ಬಾರಿ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಶಮಂತ್ ಮಾಹಿತಿ ನೀಡಿದರು.

ಪ್ರಸಕ್ತ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ ಮೇ 29ರಂದು ನಡೆಯಲಿದ್ದು, ಅದಕ್ಕಾಗಿ ಇಲಾಖೆ ಸರ್ವ ಸನ್ನದ್ಧ ಗೊಂಡಿದೆ. ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳ ವಿತರಣೆಯಲ್ಲಿ ತೊಂದರೆ ಯಾಗಬಾರದೆಂದೇ ಈ ಬಾರಿ ಮುಂಜಾಗರೂಕತೆ ವಹಿಸಲಾಗಿದೆ. ಶಾಲೆ ಆರಂಭವಾಗುವ ನಿಗದಿತ ಸಮಯದೊಳಗೇ ಪಠ್ಯಪುಸ್ತಕಗಳು ಆಯಾ ಶಾಲೆಗಳಿಗೆ ತಲುಪಲಿವೆ.

 ವೈ.ಶಿವರಾಮಯ್ಯ, ಡಿಡಿಪಿಐ

Writer - ಬಂದೇನವಾಝ್ ಮ್ಯಾಗೇರಿ

contributor

Editor - ಬಂದೇನವಾಝ್ ಮ್ಯಾಗೇರಿ

contributor

Similar News