ಚುನಾವಣೆ ಮುಗಿಯುತ್ತಲೇ ಸದ್ದಿಲ್ಲದೆ ತೆರೆಮರೆಗೆ ಸರಿದ ನಮೋ ಟಿವಿ!

Update: 2019-05-21 09:06 GMT

ಹೊಸದಿಲ್ಲಿ, ಮೇ 21: ಲೋಕಸಭಾ ಚುನಾವಣೆಗಳೂ ಮುಗಿಯುತ್ತಿದ್ದಂತೆಯೇ ಬಿಜೆಪಿ ಪ್ರವರ್ತಿತ, ಪ್ರಧಾನಿ ನರೇಂದ್ರ ಮೋದಿಯ ರ್ಯಾಲಿಗಳು ಹಾಗೂ ರಾಜಕೀಯ ಸಂದೇಶಗಳನ್ನು ಪ್ರಚುರ ಪಡಿಸುವ ಉದ್ದೇಶ ಹೊಂದಿದ ‘ನಮೋ ಟಿವಿ’ ಸದ್ದಿಲ್ಲದೆ ತೆರೆಮರೆಗೆ ಸರಿದಿದೆ.

ಅಂತಿಮ ಹಂತದ ಚುನಾವಣೆ ನಡೆಯುವ ಎರಡು ದಿನ ಮುನ್ನ ನಮೋ ಟಿವಿ ಮರೆಯಾಗಿ ಬಿಟ್ಟಿದೆ. ‘‘ನಮೋ ಟಿವಿ ಬಿಜೆಪಿಯ ಪ್ರಚಾರ ಸಾಧನವಾಗಿದ್ದರಿಂದ ಲೋಕಸಭಾ ಚುನಾವಣೆ ನಂತರ ಅದರ ಅಗತ್ಯವಿಲ್ಲ. ಇದೇ ಕಾರಣಕ್ಕೆ ಪ್ರಚಾರ ಅಂತ್ಯಗೊಂಡ ಮೇ 17ರಿಂದ ಅದು ಪ್ರಸಾರವಾಗುತ್ತಿಲ್ಲ’’ ಎಂದು ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.

ಮಾರ್ಚ್ 31ರಂದು ಮೊದಲ ಬಾರಿ ಕಾಣಿಸಿಕೊಂಡಂದಿನಿಂದ ನಮೋ ಟಿವಿ ವಿವಾದದ ಕೇಂದ್ರ ಬಿಂದುವಾಗಿತ್ತು, ಇಂತಹ ಒಂದು ಟಿವಿ ವಾಹಿನಿ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆಯೆಂದೂ ವಿಪಕ್ಷಗಳು ದೂರಿದ್ದವು. ಟಾಟಾ ಸ್ಕೈ, ವೀಡಿಯೋಕಾನ್ ಮತ್ತು ಡಿಶ್ ಟಿವಿ ಸಹಿತ ಹಲವಾರು ಸೇವಾ ಪೂರೈಕೆದಾರ ಸಂಸ್ಥೆಗಳು ನಮೋ ಟಿವಿಯನ್ನು ಉಚಿತ ಸೇವೆಯಾಗಿ ಚಂದಾದಾರರಿಗೆ ಒದಗಿಸಿದ್ದವು.

ನಮೋ ಟಿವಿ ಒಂದು ಜಾಹೀರಾತು ವೇದಿಕೆಯಾಗಿರುವುದರಿಂದ ಅದಕ್ಕೆ ಯಾವುದೇ ಅನುಮತಿಯ ಅಗತ್ಯವಿಲ್ಲವೆಂದೂ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಹೇಳಿತ್ತು. ಎಪ್ರಿಲ್ 12ರಂದು ಚುನಾವಣಾ ಆಯೋಗ ತನ್ನ ಆದೇಶದಲ್ಲಿ ನಮೋ ಟಿವಿ ತನ್ನ ಮಾಧ್ಯಮ ಪ್ರಮಾಣಪತ್ರ ಸಮಿತಿಯಿಂದ ಅನುಮತಿ ಪಡೆಯುವ ಮುನ್ನ ಯಾವುದೇ ರಾಜಕೀಯ ವಿಷಯವನ್ನು ಪ್ರಸ್ತುತಪಡಿಸುವ ಹಾಗಿಲ್ಲ ಎಂದು ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News