ನದಿ ತಿರುಗಿಸಿದರೆ ದ.ಕ. ಜಿಲ್ಲೆಗೆ ಶಾಶ್ವತ ಬರಗಾಲ: ದಿನೇಶ್ ಹೊಳ್ಳ

Update: 2019-05-21 11:52 GMT

ಮಂಗಳೂರು, ಮೇ 21: ಎಳೆನೀರಿನಿಂದ ಹಿಡಿದು ಸುಬ್ರಹ್ಮಣ್ಯವರೆಗಿನ ಕುಮಾರಧಾರ ಹೊಳೆ, ಕಪಿಲಾಹೊಳೆ, ಕೆಂಪುಹೊಳೆ, ಮೃತ್ಯುಂಜಯ ಹೊಳೆ, ಅನಿಲಹೊಳೆ, ಸುನಾದಹೊಳೆ ಸೇರಿದಂತೆ ಒಂಬತ್ತು ನದಿಗಳನ್ನು ತಿರುಗಿಸಿದರೆ ದ.ಕ. ಜಿಲ್ಲೆ ಶಾಶ್ವತ ಬರಗಾಲಕ್ಕೀಡಾಗಲಿದೆ ಎಂದು ಪರಿಸರವಾದಿ ದಿನೇಶ್ ಹೊಳ್ಳ ಆತಂಕ ವ್ಯಕ್ತಪಡಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ‘ದ.ಕ. ಜಿಲ್ಲೆಯಲ್ಲಿ ನೀರಿಗೆ ಬರ; ಮುಂದೇನು...!’ ವಿಷಯದ ಸಂವಾದದಲ್ಲಿ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

ಜಿಲ್ಲೆಯಲ್ಲಿನ ನದಿಗಳನ್ನು ತಿರುಗಿಸುವ ಸುಮಾರು 60 ಸಾವಿರ ಕೋಟಿ. ರೂ. ವೆಚ್ಚದ ಯೋಜನೆಯಿದೆ. ಕೇಂದ್ರ, ರಾಜ್ಯ ಸರಕಾರಗಳ ಪ್ರತಿ ಯೋಜನೆಗಳಲ್ಲೂ ನದಿಮೂಲಗಳನ್ನು ನಾಶ ಮಾಡುವ ಕೆಲಸಗಳು ನಡೆಯುತ್ತಿವೆ. ಈ ಬಗ್ಗೆ ಜಿಲ್ಲೆಯ ಜನತೆ, ಜನಪ್ರತಿನಿಧಿಗಳು ಸೊಲ್ಲೆತ್ತುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನಮ್ಮಲ್ಲಿ ಹಿಂದೆಂದೂ ಬರಗಾಲ ಎನ್ನುವ ಪದ ಇರಲಿಲ್ಲ. ಈಗ ನೀರಿನ ರೇಷನಿಂಗ್ ಮೂಲಕ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಪರಿಸರ, ಜಲ ಸಂರಕ್ಷಣೆ ಬಗ್ಗೆ ಕಾಳಜಿ ವಹಿಸದಿದ್ದರೆ ಮುಂದೊಂದು ದಿನ ಹನಿ ನೀರಿಗೂ ಭಿಕ್ಷೆ ಬೇಡುವ ಕಾಲ ದೂರವಿಲ್ಲ ಎಂದು ಎಚ್ಚರಿಸಿದರು.
ರಾಜ್ಯ ಸರಕಾರ ಕಳೆದ ಬಾರಿ ದ.ಕ. ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯಾಗಿ ಘೋಷಿಸಿತು. ಎತ್ತಿನಹೊಳೆಯಲ್ಲಿ ನೀರಿಲ್ಲ ಎನ್ನುವುದನ್ನು ಸರಕಾರವೇ ಪರೋಕ್ಷವಾಗಿ ಒಪ್ಪಿಕೊಂಡಿದೆ. ಬರಪೀಡಿತ ಜಿಲ್ಲೆಯಿಂದ ಮತ್ತೊಂದು ಬರಪೀಡಿತ ಜಿಲ್ಲೆಗೆ ಎತ್ತಿನಹೊಳೆಯಿಂದ ನೀರು ಸರಬರಾಜು ಮಾಡಲು ಹೊರಟಿದೆ. ಹಂತ ಹಂತವಾಗಿ ನದಿ ಮೂಲಗಳನ್ನು ಕೊಂದಿದ್ದು ರಾಜ್ಯ ಸರಕಾರವೇ ಎಂದು ಪುನರುಚ್ಚರಿಸಿದರು.

ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಉಲ್ಬಣಗೊಳ್ಳಲು ಶೇ.50ರಷ್ಟು ಜನತೆಯೂ ಕಾರಣ; ಜನಪ್ರತಿನಿಧಿಗಳೂ ಕಾರಣರಾಗಿದ್ದಾರೆ. ಜನರಿಗೆ ನದಿಗಳು ಬೇಕಿಲ್ಲ; ಬಹುಕಟ್ಟಡ ಸಂಕೀರ್ಣಗಳ ಹಪಾಹಪಿಯಲ್ಲಿ ಮುಳುಗಿದ್ದಾರೆ. ನೇತ್ರಾವತಿ ಸೇರಿದಂತೆ ರಾಜ್ಯದ ನದಿ ಮೂಲಗಳು ಬಡಕಲಾಗುತ್ತಿವೆ. ಫಲಾನುಭವಿಗಳು ಹೆಚ್ಚುತ್ತಿದ್ದಾರೆ. ನದಿ ಮೂಲಗಳನ್ನು ಸಂರಕ್ಷಿಸುವ ಯಾವುದೇ ಕೆಲಸವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಈ ಹಿಂದೆ ಗುಂಡ್ಯದಲ್ಲಿ ಜಲವಿದ್ಯುತ್ ಯೋಜನೆ ಕಾರ್ಯರೂಪಕ್ಕೆ ತರಲಾಗಿತ್ತು. ಆ ಯೋಜನೆ ವಿಫಲವಾಯಿತು. ಮಳೆಯಿಂದ ಮೇಲ್ಗಡೆ ಇರುವ ಹುಲ್ಲುಗಾವಲು ಪ್ರದೇಶಕೆಳಗಡೆ ಶೋಲಾ ಅರಣ್ಯವಿದೆ. ಮೇಲಿನ ಹುಲ್ಲುಗಾವಲಿಗೆ ಆರು ತಿಂಗಳು ಮಳೆ ಬರುತ್ತದೆ. ಪುನಃ ಬಿದ್ದ ಮಳೆ ಶೋಲಾ ಅರಣ್ಯಕ್ಕೆ ಸೇರುತ್ತದೆ. ಇನ್ನುಳಿದ ತಿಂಗಳಲ್ಲಿ ಅಲ್ಲಿನ ನೀರು ನೇತ್ರಾವತಿ ನದಿಗೆ ಸೇರ್ಪಡೆಯಾಗುತ್ತದೆ. ಇಲ್ಲಿನ ಜಲಮೂಲಗಳನ್ನು ನಾಶ ಮಾಡಿದರೆ ಬಯಲುಸೀಮೆಗಳಿಗೆ ಎಲ್ಲಿಂದ ಸರಕಾರ ನೀರು ಸರಬರಾಜು ಮಾಡಲಿದೆ ಎಂದು ಪ್ರಶ್ನಿಸಿದರು.

ಪಶ್ಚಿಮ ಘಟ್ಟಗಳಲ್ಲಿ ಇರುವೆಗಳ ಸಂತತಿ ನಾಶವಾದರೆ ಅರಬ್ಬಿ ಸಮುದ್ರದಲ್ಲಿ ಮೀನುಗಳ ಸಂತತಿ ಕಡಿಮೆಯಾಗುತ್ತದೆ. ಇಲ್ಲಿ 120ಕ್ಕೂ ಹೆಚ್ಚು ಜಾತಿಯ ಇರುವೆಗಳಿವೆ. ಅಲ್ಲಿನ ನೆಲದಲ್ಲಿ ಸಣ್ಣ ರಂಧ್ರಗಳನ್ನು ಕೊರೆದು ಒಳಪ್ರವೇಶಿಸುತ್ತವೆ. ಮಳೆಗಾಲದ ವೇಳೆ ಇಲ್ಲಿನ ರಂಧ್ರಗಳಲ್ಲಿ ಮಳೆನೀರು ಇಳಿದು ಎಲ್ಲ ಖನಿಜಾಂಶಗಳು ಸಮುದ್ರಕ್ಕೆ ಸೇರ್ಪಡೆಯಾಗುತ್ತವೆ. ಹೀಗಾದಲ್ಲಿ ಮಾತ್ರ ಪರಿಸರ ಸಮತೋಲನದಿಂದ ಇರಲು ಸಾಧ್ಯ ಎಂದು ಅವರು ವಿವರಿಸಿದರು.

ಪರಿಸರ ಕುಲಗೆಡಿಸಿದ ಮಾನವ: ತ್ತನ್ನು 15 ಬಾರಿ ಸರ್ವನಾಶಗೊಳಿಸುವಷ್ಟು ಅಣುಬಾಂಬ್‌ಗಳನ್ನು ಎಲ್ಲ ದೇಶಗಳು ತಯಾರು ಮಾಡಿವೆ. ಆದರೆ ಪರಿಶುದ್ಧ ನೀರಿಲ್ಲ, ಶುದ್ಧ ಗಾಳಿಯಿಲ್ಲ, ವಿಷ ಸೇರದ ಅನ್ನವಿಲ್ಲ. ಈ ಅನ್ನಕ್ಕೆ ವಿಷ ಸೇರಿಸಿ, ನೀರು ಗಾಳಿಯನ್ನು ಹಾಳು ಮಾಡಿದ ಕೀರ್ತಿ ಕೇವಲ ಮಾನವನಿಗೆ ಸಲ್ಲುತ್ತದೆ ಎಂದು ಅಂಕಣಕಾರ, ಉಪನ್ಯಾಸಕ ನರೇಂದ್ರ ರೈ ದೇರ್ಲ ಕಳವಳ ವ್ಯಕ್ತಪಡಿಸಿದರು.

ನೀರಿನ ಹತ್ತಿರ ಮನುಷ್ಯ ಬಂದಿದ್ದು ಚರಿತ್ರೆ, ನೀರು ಮನುಷ್ಯನ ಹತ್ತಿರ ಬರುವುದು ವಿಜ್ಞಾನ. ನಮ್ಮ ಪೂರ್ವಜರು ಕಡಿಮೆ ನೀರು ಬಳಸಿ, ಹೆಚ್ಚು ಫಲ-ಧಾನ್ಯಗಳನ್ನು ಪಡೆಯುತ್ತಿದ್ದರು. ಮೊದಲಿನ ಸುಸ್ಥಿತ ಪದ್ಧತಿಯ ಜೀವನ ಇಂದು ಮರೆಯಾಗುತ್ತಿದೆ. ಎಲ್ಲರೂ ನಗರೀಕರಣದತ್ತ ವಾಲುತ್ತಿದ್ದಾರೆ. ನಗರೀಕರಣಕ್ಕೆ ಗ್ರಾಮೀಣ ಪ್ರದೇಶಗಳು ಹೊರತಾಗಿಲ್ಲ. ಹಳ್ಳಿಗಳಲ್ಲೂ ಮನೆ ಸುತ್ತ ಮುತ್ತ ಕಾಂಕ್ರಿಟೀಕರಣಗೊಳಿಸಲಾಗುತ್ತಿದೆ. ನೀರು ಭೂಮಿಗೆ ಇಂಗುತ್ತಿಲ್ಲ. ನದಿ ಮೂಲಗಳು ಬತ್ತಲು ಇದೇ ಕಾರಣ ಎಂದು ಹೇಳಿದರು.

ತುಂಬೆ ವೆಂಟೆಡ್ ಡ್ಯಾಮ್‌ನಿಂದ ಬರುವ ನೀರಿನಲ್ಲಿ ಶೇ.2ರಷ್ಟನ್ನು ಮಾತ್ರ ಕುಡಿಯಲು ಬಳಸಲಾಗುತ್ತಿದೆ. ಉಳಿದ ಶೇ.98ರಷ್ಟು ನೀರನ್ನು ಬೇರೆ ವಿಚಾರಕ್ಕೆ ಬಳಸಲಾಗುತ್ತಿದೆ. ಇದೇ ನೀರನ್ನು ಮರುಬಳಕೆ ಮಾಡಿದರೆ ನೀರಿನ ಸಮಸ್ಯೆ ಉದ್ಭವಿಸುವ ಪ್ರಮೇಯವೇ ಬರುವುದಿಲ್ಲ. ಫಲಾನುಭವಿಗಳು ಹೆಚ್ಚುತ್ತಿದ್ದಾರೆ. ನೀರಿನ ಬಳಕೆಯನ್ನು ಧಾರಾಳವಾಗಿ ಖರ್ಚು ಮಾಡಿದರೆ ಬರಗಾಲ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಅವರು ವಿವರಿಸಿದರು.

ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ಇಂದಾಜೆ ಉಪಸ್ಥಿತರಿದ್ದರು. ಜಿತೇಂದ್ರ ಕುಂದೇಶ್ವರ ಸ್ವಾಗತಿಸಿದರು. ವಿಜಯ ಕೋಟ್ಯಾನ್ ನಿರೂಪಿಸಿದರು. ಹರೀಶ್ ಮೋಟುಕಾನ ವಂದಿಸಿದರು.

‘ನಾಲ್ಕೈದು ವರ್ಷದಲ್ಲಿ ಬಾವಿಯಲ್ಲಿ ಉಪ್ಪು ನೀರು!’

ತಾಲೂಕು ಕೇಂದ್ರಗಳು ಸೇರಿದಂತೆ ಮಂಗಳೂರು ನಗರದಲ್ಲೂ ಕಾಂಕ್ರಿಟೀಕರಣ ಮಾಡಲಾಗುತ್ತಿದೆ. ನಗರದ ತೋಡುಗಳು, ಮೈದಾನಗಳಿಗೆ ಕಾಂಕ್ರೀಟ್ ಸುರಿಯಲಾಗುತ್ತಿದೆ. ನಗರದಲ್ಲೆಲ್ಲೂ ನೀರು ಇಂಗುವುದಿಲ್ಲ. ಪರಿಣಾಮ ಮುಂದಿನ ನಾಲ್ಕೈದು ವರ್ಷಗಳಲ್ಲಿ ಮಂಗಳೂರಿನ ಬಾವಿಗಳಲ್ಲಿ ಉಪ್ಪು ನೀರು ಬರಲಿದೆ ಎಂದು ಪುತ್ತೂರು ವಿವೇಕಾನಂದ ಕಾಲೇಜಿನ ಉಪನ್ಯಾಸಕ, ಜಲತಜ್ಞ ಶ್ರೀಶ ಪುತ್ತೂರು ಭವಿಷ್ಯ ನುಡಿದರು.

ಪರಿಸರವಾದಿಗಳು ಅಭಿವೃದ್ಧಿ ವಿರೋಧಿಗಳಲ್ಲ. ನಾಗರಿಕರಿಗೆ ಅಭಿವೃದ್ಧಿ ಬೇಕು. ಆದರೆ ಪರಿಸರಕ್ಕೆ ಸಹ್ಯವಾದ ಅಭಿವೃದ್ಧಿಯನ್ನು ಇಷ್ಟಪಡಬಹುದು. ನೇತ್ರಾವತಿ ನದಿ 96 ಕಿ.ಮೀ. ಹರಿಯುತ್ತದೆ. ನದಿಯ ಮೊದಲ ಭಾಗದಲ್ಲಿ 30 ಕಿ.ಮೀ. ಭಾಗದಲ್ಲಿ ಯಾವುದೇ ಸಣ್ಣ ಸೂಜಿ ಚುಚ್ಚುವ ಕೆಲಸ ಮಾಡಬಾರದು. ಅಲ್ಲಿ ಸೂಕ್ಷ್ಮವಾದ ಘಟ್ಟಗಳಿವೆ. ಅಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಅಗತ್ಯವಿಲ್ಲ. ಅಲ್ಲಿಂದ ಮುಂದೆ ಐದು ಕಿ.ಮೀ. ನಂತೆ ಒಂದೊಂದು ಸಣ್ಣ ಚೆಕ್‌ಡ್ಯಾಂಗಳನ್ನು ನಿರ್ಮಿಸಬೇಕು. 12 ಚೆಕ್‌ಡ್ಯಾಂ ಸೃಷ್ಟಿಯಾದರೆ ಮಂಗಳೂರಿಗೆ ಯಾವುದೇ ಸಮಸ್ಯೆಯಿಲ್ಲದೆ ನೀರು ಒದಗಿಸಬಹುದು ಎಂದು ಅವರು ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News