ಕನಿಷ್ಠ ಕೂಲಿ ಜಾರಿಗೊಳಿಸಲು ಒತ್ತಾಯಿಸಿ ಸಿಐಟಿಯು ಪ್ರತಿಭಟನೆ

Update: 2019-05-21 11:53 GMT

ಮಂಗಳೂರು, ಮೇ 21: ಹೈಕೋರ್ಟ್ ಆದೇಶದಂತೆ ಕನಿಷ್ಠ ಕೂಲಿಯನ್ನು ಜಾರಿಗೊಳಿಸಬೇಕು, ಸ್ಕೀಮ್ ನೌಕರರಾದ ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತೆಯರನ್ನೂ ಕನಿಷ್ಠ ಕೂಲಿ ವ್ಯಾಪ್ತಿಗೆ ಒಳಪಡಿಸಬೇಕು, ತಂದೆ ತಾಯಿಯನ್ನೊಳಗೊಂಡು 5 ಘಟಕಗಳ ಆಧಾರದಲ್ಲಿ ಕನಿಷ್ಠ ಕೂಲಿ 18,000 ರೂ. ನಿಗದಿಗೊಳಿಸಬೇಕು, ಬೆಲೆಯೇರಿಕೆ ಸೂಚ್ಯಾಂಕ ನಿಗದಿಯಲ್ಲಿನ ಮೋಸ ನಿಲ್ಲಿಸಬೇಕು, 10 ರೂ.ಇದ್ದ ಕಾರ್ಮಿಕ ಸಂಘದ ನೋಂದಣಿ ಶುಲ್ಕವನ್ನು 1,000 ರೂ.ಗೆ ಹೆಚ್ಚಳ ಮಾಡಿರುವುದನ್ನು ಹಿಂಪಡೆಯಬೇಕು, ಕಾರ್ಮಿಕ ಇಲಾಖೆಯಲ್ಲಿನ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿಗೊಳಿಸಬೇಕು ಮತ್ತು ಬೀಡಿ ಕಾರ್ಮಿಕರಿಗೆ ಬಾಕಿಯಿರಿಸಿದ ಕನಿಷ್ಟ ಕೂಲಿ-ತುಟ್ಟಿಭತ್ತೆಯನ್ನು ನೀಡಬೇಕು ಎಂದು ಒತ್ತಾಯಿಸಿ ಸಿಐಟಿಯು ಮಂಗಳವಾರ ಕದ್ರಿಯಲ್ಲಿರುವ ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿತು.

 ಪ್ರತಿಭಟನಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಸಿಐಟಿಯು ದ.ಕ.ಜಿಲ್ಲಾಧ್ಯಕ್ಷ ಜೆ.ಬಾಲಕ್ರಷ್ಣ ಶೆಟ್ಟಿ ಕಳೆದ ಹಲವಾರು ದಶಕಗಳಿಂದ ಕಾರ್ಮಿಕ ವರ್ಗ ಕನಿಷ್ಠ ಕೂಲಿಗಾಗಿ ನಡೆಸಿದ ಅವಿರತ ಹೋರಾಟದ ಫಲವಾಗಿ 2016-17ನೇ ಸಾಲಿನಲ್ಲಿ ರಾಜ್ಯ ಸರಕಾರವು ಕನಿಷ್ಠ ವೇತನವನ್ನು ಪರಿಷ್ಕರಿಸಲು ಮಾಲಕರು, ಕಾರ್ಮಿಕರು, ಸರಕಾರದ ಸಮಸಂಖ್ಯೆಯ ಪ್ರತಿನಿಧಿಗಳನ್ನು ಒಳಗೊಂಡ ಕನಿಷ್ಠ ಕೂಲಿ ಸಲಹಾ ಮಂಡಳಿಯಲ್ಲಿ ಚರ್ಚಿಸಿದ ನಂತರ ಸರಕಾರಕ್ಕೆ ಶಿಫಾರಸು ಮಾಡಿತ್ತು. ಅದರ ಆಧಾರದಲ್ಲಿ ಸರಕಾರ ಕರಡು ಅಧಿಸೂಚನೆಯನ್ನು ಹೊರಡಿಸಿ, ಆಕ್ಷೇಪಗಳನ್ನು ಸ್ವೀಕರಿಸಿ ಅಂತಿಮ ಅಧಿಸೂಚನೆಗಳನ್ನು ಹೊರಡಿಸಿತ್ತು. ಇದರ ವಿರುದ್ದ ಸುಮಾರು 1,700ರಷ್ಟು ಮಾಲಕರು ರಾಜ್ಯ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. 2-3 ವರ್ಷಗಳ ಕಾಲ ಹೈಕೋರ್ಟ್‌ನಲ್ಲಿ ವಾದ ವಿವಾದಗಳನ್ನು ಆಲಿಸಿದ ನಂತರ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ನೇತೃತ್ವದ ಪೀಠವು 37 ವಿವಿಧ ಶೆಡ್ಯೂಲ್ ಕೈಗಾರಿಕೆಗಳಿಗೆ ರಾಜ್ಯ ಸರಕಾರ ನಿಗದಿಗೊಳಿಸಿರುವ ಕನಿಷ್ಠ ವೇತನ ಅಧಿಸೂಚನೆಯನ್ನು ಎತ್ತಿ ಹಿಡಿದಿರುವುದಲ್ಲದೆ, ಅಧಿಸೂಚನೆಯ ದಿನಾಂಕದಿಂದಲೇ ಶೇ.6ರ ಬಡ್ಡಿಯೊಂದಿಗೆ ಬಾಕಿಯನ್ನು 8 ವಾರಗಳೊಳಗೆ ಸಂದಾಯ ಮಾಡುವಂತೆಯೂ ಆದೇಶಿಸಿದೆ. ಆದರೆ, ಇನ್ನೂ ಅದು ಜಾರಿಯಾಗಿಲ್ಲ. ಇದರಿಂದ ಅಂಗಡಿ, ವಾಣಿಜ್ಯ ಸಂಸ್ಥೆಗಳು, ಅಟೋ ಮೊಬೈಲ್, ಆಸ್ಪತ್ರೆ, ನರ್ಸಿಂಗ್ ಹೋಂಗಳು, ಟೈಲರಿಂಗ್, ಹಾಸ್ಟೆಲ್, ಸೆಕ್ಯೂರಿಟಿ, ಹೊಟೇಲ್, ಬೇಕರಿ, ಇಟ್ಟಿಗೆ, ಮರದ ಕೆಲಸ, ಗ್ಲಾಸ್ ಮುಂತಾದ 37 ವಿವಿಧ ಕೈಗಾರಿಕೆಗಳ ಖಾಯಂ-ಗುತ್ತಿಗೆ-ತಾತ್ಕಾಲಿಕ-ಬದಲಿ-ಹೊರಗುತ್ತಿಗೆ ಕಾರ್ಮಿಕರೆಲ್ಲರಿಗೂ ತಮ್ಮ ಮೂಲವೇತನವನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗದೆ ತೊಂದರೆಗೊಳಗಾಗಿದ್ದಾರೆ ಎಂದರು.

ಸಿಐಟಿಯು ರಾಜ್ಯ ಉಪಾಧ್ಯಕ್ಷ ವಸಂತ ಆಚಾರಿ, ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಮಾತನಾಡಿದರು.
 ಸಿಐಟಿಯು ಜಿಲ್ಲಾ ನಾಯಕರಾದ ಯು.ಬಿ.ಲೋಕಯ್ಯ, ಸದಾಶಿವ ದಾಸ್, ಜಯಂತಿ ಬಿ.ಶೆಟ್ಟಿ, ಯೋಗೀಶ್ ಜಪ್ಪಿನಮೊಗರು, ಜಯಂತ ನಾಯಕ್, ಪದ್ಮಾವತಿ ಶೆಟ್ಟಿ, ವಸಂತ ನಡ,ರಾಮಣ್ಣ ವಿಟ್ಲ, ಶಿವ ಕುಮಾರ್, ಜಯಲಕ್ಷ್ಮಿ, ಭಾರತಿ ಬೋಳಾರ, ಬಾಬು ದೇವಾಡಿಗ, ವಸಂತಿ ಕುಪ್ಪೆಪದವು,ಅಹ್ಮದ್ ಬಾವ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News