ರಾಜೀವ್ ಗಾಂಧಿ ನಿಂದಕರನ್ನು ಕಾಂಗ್ರೆಸ್ ಎಂದಿಗೂ ಸಹಿಸದು: ರಮಾನಾಥ ರೈ

Update: 2019-05-21 11:56 GMT

ಮಂಗಳೂರು, ಮೇ 21: ದೇಶವನ್ನು 21ನೇ ಶತಮಾನದತ್ತ ಕೊಂಡ್ಯೊಯುವ ನಿಟ್ಟಿನಲ್ಲಿ ದೇಶದಲ್ಲಿ ದೂರದರ್ಶನ ಮತ್ತು ಕಂಪ್ಯೂಟರ್ ಕ್ರಾಂತಿಯನ್ನು ಆರಂಭಿಸಿದ ಮಹಾನ್ ನಾಯಕ, ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರನ್ನು ದೂಷಣೆ ಮಾಡುವವರನ್ನು ಕಾಂಗ್ರೆಸ್ ಪಕ್ಷವು ಎಂದಿಗೂ ಸಹಿಸದು ಮತ್ತು ಕ್ಷಮಿಸದು ಎಂದು ಮಾಜಿ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದರು.

ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ನಡೆದ ರಾಜೀವ್ ಗಾಂಧಿಯ ಪುಣ್ಯತಿಥಿಯ ವರ್ಷಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

ದೇಶವನ್ನು ಆಳುವವರು ಮತ್ತು ಕೆಲವು ಬಿಜೆಪಿ ಸಂಸದರು ರಾಜೀವ್ ಗಾಂಧಿ ಬಗ್ಗೆ ಕೀಳುಮಟ್ಟದಲ್ಲಿ ಮಾತನಾಡಿರುವುದು ದುರದೃಷ್ಟಕರ. 18 ವರ್ಷಕ್ಕೆ ಮತದಾನದ ಹಕ್ಕು ನೀಡುವುದರ ಮೂಲಕ ಯುವ ಜನತೆಗೆ ಸ್ಪೂರ್ತಿ ತುಂಬಿದ ಅವರು ಹಗರಣ ಮುಕ್ತರಾಗಿ ಪ್ರತಿಯೊಬ್ಬ ರಾಜಕಾರಣಿಗೂ ಮಾದರಿಯಾಗಿದ್ದರು ಎಂದು ರೈಗಳು ಬಣ್ಣಿಸಿದರು.

ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಮಾತನಾಡಿ, ದೇಶಕ್ಕಾಗಿ ಬಲಿದಾನ ಮಾಡಿದ ಕಾಂಗ್ರೆಸ್ ನಾಯಕರನ್ನು ದೇಶದ್ರೋಗಳೆಂದು ಯಾರು ಬಿಂಬಿಸುತ್ತಾರೋ ಅವರು ನಿಜವಾದ ದೇಶದ್ರೋಹಿಗಳು. ಇಂದಿನ ಸೋಶಿಯಲ್ ಮೀಡಿಯಾ ಜನಪ್ರಿಯವಾ ಗಿದ್ದರೆ, ಅದು ರಾಜೀವ್ ಗಾಂಧಿ ದೇಶಕ್ಕೆ ನೀಡಿದ ದೊಡ್ಡ ಕೊಡುಗೆಯೇ ಕಾರಣ. ಇಲ್ಲಿನ ಸಂಸದರು ತಿಳಿಗೇಡಿಯಾಗಿ ವರ್ತಿಸಿ ರಾಜೀವ್ ಗಾಂಧಿಯನ್ನು ನಿಂದಿಸಿರುವುದು ಅಕ್ಷಮ್ಯ ಅಪರಾಧ ಎಂದರು.

ಸಭಾಧ್ಯಕ್ಷತೆ ವಹಿಸಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಅಗಲಿದ ಕಾಂಗ್ರೆಸ್ ನಾಯಕ ಸಂಜೀವ ಮೊಯ್ಲಿಗೆ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ರಾಷ್ಟ್ರಪಿತ ಮಹಾತ್ಮ ಗಾಂಧಿಯನ್ನು ಹತ್ಯೆಗೈದ ನಾಥುರಾಮ್ ಗೋಡ್ಸೆಯ ಜನ್ಮದಿನವನ್ನು ಮಂಗಳೂರಿನಲ್ಲಿ ಆಚರಿಸಿದ ಹಿಂದೂ ಮಹಾಸಭಾದ ನಡೆಯನ್ನು ತೀವ್ರವಾಗಿ ಖಂಡಿಸಲಾಯಿತು. ಇದರ ವಿರುದ್ಧ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲು ನಿರ್ಧರಿಸಲಾಯಿತು.

ಈ ಸಂದರ್ಭ ಪಕ್ಷದ ಲೋಕಸಭಾ ಅಭ್ಯರ್ಥಿ ಮಿಥುನ್ ಎಂ.ರೈ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಪಕ್ಷದ ಮುಖಂಡರಾದ ಇಬ್ರಾಹೀಂ ಕೋಡಿಜಾಲ್, ಸುರೇಶ್ ಬಲ್ಲಾಳ್, ಜೆ. ಅಬ್ದುಲ್ ಸಲೀಂ, ಬಿ.ಎ.ಮುಹಮ್ಮದ್ ಹನೀಫ್, ಅಬ್ಬಾಸ್ ಅಲಿ ಬೊಳಂತೂರು, ಕೆ.ಕೆ.ಶಾಹುಲ್ ಹಮೀದ್, ಶಶಿಧರ ಹೆಗ್ಡೆ, ನವೀನ್ ಡಿಸೋಜ, ಟಿ.ಕೆ.ಸುಧೀರ್, ಎಂ.ಎಸ್. ಮುಹಮ್ಮದ್, ಸಂತೋಷ್ ಕುಮಾರ್ ಶೆಟ್ಟಿ, ಅಸೈಗೋಳಿ, ಸುರೇಂದ್ರ ಕಂಬಳಿ, ಮುರಳೀಧರ ರೈ ವಿಟ್ಲ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News