ಬ್ರಹ್ಮಾವರ: ವೃದ್ಧಾಶ್ರಮದಲ್ಲಿ ರಾಜೀವ ಗಾಂಧಿ ಪುಣ್ಯಸ್ಮರಣೆ ಆಚರಣೆ

Update: 2019-05-21 13:00 GMT

ಬ್ರಹ್ಮಾವರ, ಮೇ 21: ಉಡುಪಿ ಜಿಲ್ಲಾ ರಾಜೀವ ಗಾಂಧಿ ಪಂಚಾಯತ್ ರಾಜ್ ಸಂಘಟನೆ ವತಿಯಿಂದ ಮಾಜಿ ಪ್ರಧಾನಿ ದಿ.ರಾಜೀವ ಗಾಂಧಿ ಅವರ 28ನೆ ಪುಣ್ಯ ಸ್ಮರಣೆಯನ್ನು ಬ್ರಹ್ಮಾವರದ ಸ್ನೇಹಾಲಯ ವೃದ್ಧಾಶ್ರಮದಲ್ಲಿ ಮಂಗಳವಾರ ಏರ್ಪಡಿಸಲಾಗಿತ್ತು.

ಕೆಪಿಸಿಸಿ ಕಾರ್ಯದರ್ಶಿ ವರೋನಿಕಾ ಕರ್ನೆಲಿಯೋ ಮಾತನಾಡಿ, ದೇಶದಲ್ಲಿ ಪ್ರೌಢ ಶಿಕ್ಷಣದ ವಿಸ್ತರಣೆ ಮತ್ತು ಆಧುನೀಕರಣಕ್ಕಾಗಿ 1986ರಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜೀವ ಗಾಂಧಿ ಘೋಷಿಸಿದ್ದರು. ಅದರ ಫಲವಾಗಿ ನಿರ್ಮಾಣಗೊಂಡ ಜವಾಹರ್ ನವೋದಯ ವಿದ್ಯಾಲಯಗಳಂತಹ ವಸತಿ ಶಾಲೆಗಳ ಮೂಲಕ ಗ್ರಾಮೀಣ ಮಕ್ಕಳು ತಮ್ಮ ಪ್ರತಿಭೆಯನ್ನು ಅನಾವರಣ ಗೊಳಿಸಲು ಸಾಧ್ಯವಾಯಿತು ಎಂದರು.

ಅಲ್ಪಾವಧಿಯಲ್ಲಿಯೇ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ರಾಜೀವ ಗಾಂಧಿ ಪ್ರಯತ್ನಿಸಿದರು. ಅವರು ದೇಶಕ್ಕೆ ನೀಡಿರುವ ಕಾಣಿಕೆಗಳು ಭಾರತೀಯ ಸಮಾಜ ಮತ್ತು ರಾಜಕೀಯದಲ್ಲಿ ಅವರ ಹೆಸರು ಅಚ್ಚಳಿಯದೆ ಉಳಿಯುವಂತೆ ಮಾಡಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಆಶ್ರಮ ನಿವಾಸಿಗಳಿಗೆ ಹಣ್ಣು ಹಂಪಲುಗಳನ್ನು ಮತ್ತು ಆಶ್ರಮಕ್ಕೆ ದಿನಸಿ ಸಾಮಾಗ್ರಿಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಸಂಯೋಜಕಿ ರೋಶನಿ ಒಲಿವೇರ್, ಡಾ.ಸುನೀತಾ ಶೆಟ್ಟಿ, ಮೇರಿ ಡಿಸೋಜ, ಜ್ಯೋತಿ ಮೆನನ್, ಬಿ.ಕೆ.ಸೋಮನಾಥ್, ವೈ.ಬಿ.ರಾಘ ವೇಂದ್ರ, ಶಂಕರ್ ನಾಯಕ್, ರವಿರಾಜ್ ಶೆಟ್ಟಿ, ಸರಸ್ವತಿ ನಾಯಕ್, ರಮೇಶ್ ಉಪ್ಪೂರು, ರೋಸಲಿನ್, ಶಾಂತಿ, ಆಶ್ರಮದ ಮೇಲ್ವಿಚಾರಕ ಐಸಾಕ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News