ಉತ್ತರಾಖಂಡದಲ್ಲಿ ಸ್ಪರ್ಧಿಸಿಯೇ ಇಲ್ಲದ ಆಪ್ ಗೆ 2.9% ಮತ ಕೊಟ್ಟ ಟೈಮ್ಸ್ ನೌ ಮತಗಟ್ಟೆ ಸಮೀಕ್ಷೆ !

Update: 2019-05-21 13:49 GMT

ರವಿವಾರ ಕೊನೆಯ ಹಂತದ ಮತದಾನ ಮುಗಿಯುತ್ತಲೇ ಎಲ್ಲ ಟಿವಿ ಚಾನೆಲ್ ಗಳು ಒಂದರ ಹಿಂದೊಂದರಂತೆ ಮತಗಟ್ಟೆ ಸಮೀಕ್ಷೆಗಳನ್ನು ಪ್ರಸಾರ ಮಾಡಿದವು. ಬಹುತೇಕ ಎಲ್ಲ ನ್ಯೂಸ್ ಚಾನೆಲ್ ಗಳ ಪ್ರಕಾರ ಬಿಜೆಪಿ ನೇತೃತ್ವದ ಎನ್ ಡಿಎ ಸ್ಪಷ್ಟ ಬಹುಮತ ಪಡೆದು ಮತ್ತೆ ಸರಕಾರ ರಚಿಸಲಿದೆ. ಟೈಮ್ಸ್ ನೌ ಸುದ್ದಿ ವಾಹಿನಿ ಕೂಡ ಎನ್ ಡಿಎ 306 ಸ್ಥಾನಗಳನ್ನು ಪಡೆದರೆ ಯುಪಿಎ ಕೇವಲ 132  ಸ್ಥಾನಗಳನ್ನು ಪಡೆಯಲಿದೆ ಎಂದು ಹೇಳಿತು. 

ಅಷ್ಟೇ ಅಲ್ಲದೆ ಟೈಮ್ಸ್ ನೌ ರಾಜ್ಯವಾರು ಪಕ್ಷಗಳು ಪಡೆಯುವ ಮತಗಳ ಪ್ರಮಾಣವನ್ನು ಪ್ರಸಾರ ಮಾಡುತ್ತಲೇ ಇತ್ತು. ಉತ್ತರಾಖಂಡದಲ್ಲಿ ಬಿಜೆಪಿಗೆ 51.6% ಮತ ಸಿಗುತ್ತದೆ ಎಂದ ಚಾನಲ್ ಕಾಂಗ್ರೆಸ್ 38.81%  ಮತ ಪಡೆಯಲಿದೆ ಎಂದು ತೋರಿಸಿತು. ಆದರೆ ವಿಶೇಷವೆಂದರೆ ಟೈಮ್ಸ್ ನೌ ಪ್ರಕಾರ ಉತ್ತರಾಖಂಡದಲ್ಲಿ ಆಮ್ ಆದ್ಮಿ ಪಕ್ಷಕ್ಕೆ 2.9%  ಮತ ಸಿಗಲಿವೆ ! ಆದರೆ ಆ ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷ ಚುನಾವಣೆಗೆ ಸ್ಪರ್ಧಿಸಿಯೇ ಇಲ್ಲ !

ಈ ಬಗ್ಗೆ ಟ್ವೀಟ್ ಮಾಡಿದ ಆಪ್ ನಾಯಕ ಹಾಗು ರಾಜ್ಯಸಭಾ ಸದಸ್ಯ ಟೈಮ್ಸ್ ನೌ ಸಮೀಕ್ಷೆಯನ್ನು ಕಟುವಾಗಿ ಖಂಡಿಸಿದರು. ಮತಗಟ್ಟೆ ಸಮೀಕ್ಷೆಯನ್ನು ಮದ್ಯಪಾನ ಮಾಡಿ ಅಥವಾ ಬಿಜೆಪಿಯಿಂದ ಲಂಚ ಪಡೆದು ಮಾಡಿದ್ದಾರೆ ಎಂಬುದು ಇದರಿಂದ ಸಾಬೀತಾಗುತ್ತದೆ ಎಂದು ಹೇಳಿದರು. 

ತಕ್ಷಣ ಎಚ್ಚೆತ್ತುಕೊಂಡ ಟೈಮ್ಸ್ ನೌ ಈ ಕುರಿತ ತನ್ನ ಟ್ವೀಟ್ ಅನ್ನು ಡಿಲೀಟ್ ಮಾಡಿತು. ಆದರೆ ಅದರ ಸ್ಕ್ರೀನ್ ಶಾಟ್ ಗಳನ್ನು ತೆಗೆದಿಟ್ಟುಕೊಂಡ ವೀಕ್ಷಕರು ಈಗ ಟೈಮ್ಸ್ ನೌ ಅನ್ನು ತಮಾಷೆ ಮಾಡುತ್ತಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News