ಮತಎಣಿಕಾ ಕೇಂದ್ರದಲ್ಲಿ ಅಂತಿಮ ಸಿದ್ಧತೆ: ಉಡುಪಿ ಡಿಸಿ, ಎಸ್ಪಿ ಪರಿಶೀಲನೆ

Update: 2019-05-21 14:26 GMT

ಉಡುಪಿ, ಮೇ 21: ಮತ ಎಣಿಕೆಗೆ ಸಂಬಂಧಿಸಿ ಸಾರ್ವಜನಿಕರಿಗೆ ಯಾವುದೇ ಮಾಹಿತಿ ಮತ್ತು ಸಂಶಯಗಳಿದ್ದರೆ ಉಡುಪಿ ಜಿಲ್ಲಾ ಚುನಾವಣಾ ಕಂಟ್ರೋಲ್ ರೂಂ 1950 ಟೋಲ್‌ಫ್ರೀ ನಂಬರಿಗೆ ಕರೆ ಮಾಡಬಹುದಾಗಿದೆ ಎಂದು ಉಡುಪಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಹೆಫ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.

ಉಡುಪಿ ಬ್ರಹ್ಮಗಿರಿಯ ಸೈಂಟ್ ಸಿಸಿಲಿಸ್ ಶಾಲೆಯಲ್ಲಿರುವ ಉಡುಪಿ ಚಿಕ್ಕ ಮಗಳೂರು ಲೋಕಸಭಾ ಕ್ಷೇತ್ರದ ಮತ ಎಣಿಕಾ ಕೇಂದ್ರದಲ್ಲಿ ಮಂಗಳವಾರ ಅಂತಿಮ ಸಿದ್ಧತೆ ಕುರಿತು ಪರಿಶೀಲನೆ ನಡೆಸಿದ ಬಳಿಕ ಅವರು ಸುದ್ದಿಗಾರ ರೊಂದಿಗೆ ಮಾತನಾಡುತಿದ್ದರು.

ಮತ ಎಣಿಕೆಯ ದಿನ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಫಲಿತಾಂಶದ ಕ್ಷಣಕ್ಷಣದ ಮಾಹಿತಿಯನ್ನು ಜಿಲ್ಲಾಧಿಕಾರಿ, ಸಿಇಓ ವೆಬ್‌ಸೈಟ್ ಹಾಗೂ ವೋಟರ್ ಹೆಲ್ಪ್‌ಲೈನ್ ಆ್ಯಪ್‌ಗಳಲ್ಲಿ ಅಪ್‌ಲೌಡ್ ಮಾಡಲಾಗುತ್ತದೆ. ಸಾರ್ವಜನಿಕರು ಇದರ ನೆವು ಪಡೆಯಬಹುದಾಗಿದೆ ಎಂದರು.

ಮತ ಎಣಿಕೆ ಕೇಂದ್ರಕ್ಕೆ ಬರುವ ಪ್ರತಿಯೊಬ್ಬರಿಗೂ ಪ್ರವೇಶ ಪಾಸ್‌ನ್ನು ನೀಡಲಾಗಿದೆ. ಅದರಂತೆ ಅವರಿಗೆ ಕೇಂದ್ರದಲ್ಲಿ ಪಾಲಿಸಬೇಕಾದ ನಿಯಮಗಳ ಬಗ್ಗೆಯೂ ತಿಳಿಹೇಳಲಾಗಿದೆ. ಮತ ಎಣಿಕೆ ಸಂಬಂಧ ಇರುವ ಎಲ್ಲ ನಿಯಮ ಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಮತಎಣಿಕೆ ಕಾರ್ಯ ಸುಗಮವಾಗಿ ನಡೆಯಲು ಎಲ್ಲ ರೀತಿಯ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಅವರು ಹೇಳಿದರು.

ಲೋಕಸಭಾ ಕ್ಷೇತ್ರದಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳಿದ್ದು, ಪ್ರತಿಯೊಂದು ಕ್ಷೇತ್ರದ ಮತ ಎಣಿಕೆ ಹಾಗೂ ಕನಿಷ್ಠ ಐದು ವಿವಿ ಪ್ಯಾಟ್‌ಗಳ ಎಣಿಕೆಯನ್ನು ಕಡ್ಡಾಯವಾಗಿ ಮಾಡಬೇಕಾಗಿದೆ. ಆದುದರಿಂದ ಎಂಟು ಕ್ಷೇತ್ರಗಳಿಗೆ ಬೇಕಾಗಿ ರುವ ಸ್ಥಳ ಇರುವ ಸೈಂಟ್ ಸಿಸಿಲಿ ಶಾಲೆಯ ಕಟ್ಟಡದಲ್ಲಿ ಈ ಬಾರಿಯ ಮತ ಎಣಿಕೆ ಕಾರ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ಮಾತನಾಡಿ, ಮತ ಎಣಿಕೆ ಕೇಂದ್ರದಲ್ಲಿ ಎಲ್ಲ ರೀತಿಯ ಭದ್ರತೆ ವ್ಯವಸ್ಥೆ ಮಾಡಲಾಗಿದ್ದು, ಉಡುಪಿ ಜಿಲ್ಲೆಯ 300ಕ್ಕಿಂತಲೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ಬಂದೋಬಸ್ತ್ ಗಾಗಿ ನಿಯೋಜಿಸಲಾಗಿದೆ ಎಂದರು.

ಅದೇ ರೀತಿ ಅರೆಸೇನಾ ಪಡೆಯ ಒಂದು ತುಕಡಿ, ಕರ್ನಾಟಕ ರಾಜ್ಯ ಮೀಸಲು ಪಡೆಯ ಮೂರು ತುಕಡಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಕೇಂದ್ರದ ಒಳಗೆ ಹಾಗೂ ಹೊರಗೆ ಒಟ್ಟು 159 ಸಿಸಿಟಿವಿ ಕ್ಯಾಮೆರಾಗಳನ್ನು ಆಳವಡಿಸಲಾಗಿದ್ದು, ಪಾರ್ಕಿಂಗ್ ವ್ಯವಸ್ಥೆ ಕೂಡ ಮಾಡಲಾಗಿದೆ. ಸುಗಮ ರೀತಿಯಲ್ಲಿ ಮತ ಎಣಿಕೆಗೆ ಬೇಕಾದ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳ ಲಾಗಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ, ಉಡುಪಿ ಡಿವೈಎಸ್ಪಿ ಜೈಶಂಕರ್ ಮೊದ ಲಾದವರು ಉಪಸ್ಥಿತರಿದ್ದರು.

ಮತಎಣಿಕೆ ಕೇಂದ್ರಕ್ಕೆ ವೀಕ್ಷಕರ ಭೇಟಿ

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತ ಎಣಿಕಾ ವೀಕ್ಷಕರಾದ ಭಾರತ ಸರಕಾರದ ಜಲ ಸಂಪನ್ಮೂಲ ಸಚಿವಾಲಯದ ಜಂಟಿ ಕಾರ್ಯದರ್ಶಿ ನಿತೀಶ್ವರ್ ಕುಮಾರ್ ಇಂದು ಮತ ಎಣಿಕಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವೀಕ್ಷಕರು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಹೆಫ್ಸಿಬಾ ರಾಣಿ ಕೊರ್ಲಪಾಟಿ ಅವರಿಂದ ಎಣಿಕೆ ಸಂಬಂಧ ನಡೆಸಿರುವ ಸಿದ್ಧತೆಗಳ ಕುರಿತು ಮಾಹಿತಿ ಪಡೆದುಕೊಂಡರು. ವೀಕ್ಷಕರು ಕೇಂದ್ರದ ಮೊದಲ ಮತ್ತು ಎರಡನೆ ಸೆಂಟರ್‌ಗಳಿಗೆ ೆರಳಿ ವ್ಯವಸ್ಥೆಯನ್ನು ವೀಕ್ಷಿಸಿದರು.

ಕೇಂದ್ರಕ್ಕೆ ಟ್ಯಾಂಕರ್ ಮೂಲಕ ನೀರು

ಮೇ 23ರ ಮತ ಎಣಿಕೆ ದಿನ ಕೇಂದ್ರದಲ್ಲಿ ಅಧಿಕಾರಿ, ಸಿಬ್ಬಂದಿ ಸೇರಿದಂತೆ ಸುಮಾರು ಒಂದು ಸಾವಿರ ಮಂದಿ ಸೇರಲಿದ್ದು, ಇವರಿಗೆ ಬೇಕಾದ ಶೌಚಾ ಲಯ, ಊಟ, ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಜಿಲ್ಲಾ ಧಿಕಾರಿ ಹೆಫ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದರು.

ಮಹಿಳೆಯರಿಗೆ ಒಂದು ಗ್ರೀನ್ ರೂಂ, ಮಾಧ್ಯಮದವರಿಗೆ ಮಿಡಿಯಾ ಸೆಂಟರ್, ಏಜೆಂಟ್ ಹಾಗೂ ಅಭ್ಯರ್ಥಿಗಳಿಗೆ ವಿಶ್ರಾಂತಿ ಸೆಂಟರ್‌ನ್ನು ಕೂಡ ಮಾಡಲಾಗಿದೆ. ಕೇಂದ್ರಕ್ಕೆ ಬೇಕಾದ ನೀರಿನ ವ್ಯವಸ್ಥೆಯನ್ನು ಟ್ಯಾಂಕರ್ ಮೂಲಕ ಸರಬರಾಜು ಮಾಡಲು ಕ್ರಮಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News