ನೀರಿನ ಸಮಸ್ಯೆ ಪರಿಹರಿಸುವಲ್ಲಿ ಬಂಟ್ವಾಳ ತಾಲೂಕು ಆಡಳಿತ ಸನ್ನದ್ಧ: ರಾಜಣ್ಣ

Update: 2019-05-21 14:48 GMT

ಬಂಟ್ವಾಳ, ಮೇ 21: ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಬಂಟ್ವಾಳ ತಾಲೂಕು ಆಡಳಿತ ಸನ್ನದ್ಧವಾಗಿದ್ದು, ತೀವ್ರ ನೀರಿನ ಅಭಾವ ಉಂಟಾಗಿರುವ ಪ್ರದೇಶಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಮೂಲಕ ನೀರಿನ ಬವಣೆಯನ್ನು ನೀಗಿಸುತ್ತಿದೆ ಎಂದು ಬಂಟ್ವಾಳ ತಾಲೂಕು ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಅವರು ಮಾಹಿತಿ ನೀಡಿದ್ದಾರೆ.

ತಾಲೂಕಿನಲ್ಲಿ ನೀರಿನ ಸಮಸ್ಯೆ ಬಗ್ಗೆ "ವಾರ್ತಾಭಾರತಿ'ಯೊಂದಿಗೆ ಮಾತನಾಡಿದ ಅವರು, ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿದಂತೆ ಟಾಸ್ಕ್‍ಪೋರ್ಸ್‍ನಡಿ 50 ಲಕ್ಷ ರೂ. ಅನುದಾನ ಮಂಜೂರಾಗಿದ್ದು, ಇದರಲ್ಲಿ 33 ಕೊಳವೆ, 4 ಪ್ಲಷಿಂಗ್, 11 ಪೈಪ್‍ಲೈನ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅದೇ ರೀತಿ 25 ಲಕ್ಷ ರೂ. ಹೆಚ್ಚುವರಿ ಅನುದಾನ ಮಂಜೂರಾಗಿದ್ದು, ಇದರಲ್ಲಿ 22 ತುರ್ತು ಕೊಳವೆ ಬಾವಿಗಳು, 7 ಪ್ಲಷಿಂಗ್ 2 ಪೈಪ್‍ಲೈನ್ ಸಂಬಂಧ ಕಾಮಗಾರಿ ನಡೆದಿದೆ ಎಂದು ಮಾಹಿತಿ ನೀಡಿದರು.

ತೀರಾ ನೀರಿನ ಸಮಸ್ಯೆ ಎದುರಾಗಿಲ್ಲ:

ತಾಲೂಕಿನ 58 ಗ್ರಾಮ ಪಂಚಾಯತ್‍ಗಳಲ್ಲಿ ತೀರಾ ನೀರಿನ ಸಮಸ್ಯೆ ಎದುರಾಗಿಲ್ಲ. ನರಿಂಗಾನ, ಬಾಳೆಪುಣಿ ಒಣಪ್ರದೇಶವಾಗಿದ್ದು, ಅಲ್ಲಿ ಯಾವುದೇ ರೀತಿಯಾದ ನೀರಿನ ಮೂಲ ಇಲ್ಲದ ಕಾರಣ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. 

981 ಕೊಳವೆ ಬಾವಿಗಳು ಚಾಲನೆಯಲ್ಲಿವೆ: 

ನೀರಿನ ವಿಚಾರಕ್ಕೆ ಸಂಬಂಧಿಸಿ ಆರಂಭವಾಗಿರುವ 48 ಕಾಮಗಾರಿಗಳು ಪೂರ್ಣಗೊಂಡಿದ್ದು, ನೀರಿನ ಸಮಸ್ಯೆಗೆ ತಾತ್ಕಲಿಕ ಪರಿಹಾರ ಕಂಡುಕೊಳ್ಳಲಾಗಿದೆ. ನೀರಿನ ಸಮಸ್ಯೆಗಳಿರುವ ಎಲ್ಲ ಪ್ರದೇಶಗಳಲ್ಲಿ ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. ತಾಲೂಕಿನಲ್ಲಿ ಒಟ್ಟು 981 ಕೊಳವೆ ಬಾವಿಗಳು ಚಾಲನೆಯಲ್ಲಿವೆ ಎಂದು ಹೇಳಿದರು. 

ಅದಲ್ಲದೆ, 14ನೇ ಹಣಕಾಸು ಯೋಜನೆಯ ಕ್ರಿಯಾ ಯೋಜನೆಯಡಿ ಶೇ. 50ರಷ್ಟು ಕೊಳವೆ ಬಾವಿಗಳಿಗೆ ಕೊರೆಯಲು ಅವಕಾಶವಿದ್ದು, ಈ ಬಗ್ಗೆ ಪ್ರತಿ ಪಂಚಾಯತ್‍ಗಳ ಪಿಡಿಒಗಳಿಗೆ ಸೂಚನೆ ನೀಡಲಾಗಿದೆ. ಪಂಪ್, ಮೋಟರ್‍ಗೂ ಅನುದಾನವನ್ನು ಮೀಸಲಿಡಲಾಗಿದೆ ಎಂದರು. 

ಬೋರ್‍ಗಳಿಗೆ ತುರ್ತು ಮಿದ್ಯುತ್ ಸಂಪರ್ಕ ಕಲ್ಪಿಸುವಂತೆ ಮೆಸ್ಕಾಂ ಅಧಿಕಾರಿಗಳಿಗೆ ಸೂಚನೆ ಹಾಗೂ ಪಿಡಿಒಗಳಿಗೆ ಮಾರ್ಗದರ್ಶನ ನೀಡಲಾಗಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಒಬ್ಬ ಫಲಾನುಭವಿಗಳಿಗೆ ವೈಯಕ್ತಿಕ ತೆರೆದ ಬಾವಿ ನಿರ್ಮಿಸಲು 84 ಸಾವಿರ ರೂ. ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕ ಬಾವಿಗಳ ಪುನಚ್ಚೇತನ, ಬತ್ತಿ ಹೋಗಿರುವ ಕೊಳವೆ ನಾವಿಗಳನ್ನು ಗುರುತಿಸಿ, ಮರುಪೂರಣ ಘಟಕ ಹೆಚ್ಚಿನ ಘಟಕ ನಿರ್ಮಿಸಲು ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ತಾಲೂಕಿನ ಹೆಚ್ಚಿನ ಪ್ರದೇಶಗಳು ಬಂಡೆಕಲ್ಲಿನಿಂದ ಕೂಡಿದ್ದು, ಮಳೆಗಾಲದ ಸಂದರ್ಭದಲ್ಲಿ ನೀರು ನೀಂಗದೇ ಹರಿದು ನದಿಪಾಲಾಗುತ್ತಿದೆ. ಇದರಿಂದ ಅಂತರ್ಜಲಗಳು ವೃದ್ಧಿಯಾಗಲು ಸಾಧ್ಯವಾಗುತ್ತಿಲ್ಲ. ಕೆಲವು ಕಡೆಗಳಲ್ಲಿ 3ರಿಂದ 4 ಇಂಚು ನೀರು ಲಭ್ಯವಾದರೆ, ಇನ್ನು ಕೆಲವು ಕಡೆಗಳಲ್ಲಿ 1ರಿಂದ 2 ಇಂಚು ಸಿಗುತ್ತಿದೆ. ಇನ್ನು ಕೊರೆದ ಕೊಳವೆ ಬಾವಿ ಶೀಘ್ರವಾಗಿ ಬತ್ತಿದುವುಂಟು ಎಂದು ಅಭಿಪ್ರಾಯಪಟ್ಟರು.

ತಾಲೂಕಾಡಳಿತ ಕೈಕೊಂಡಿರುವ ಕ್ರಮಗಳು:

ಕಿಂಡಿ ಅಣೆಕಟ್ಟನ್ನು ನಿರ್ಮಾಣ, ವೈಯಕ್ತಿಕ ಬಾವಿ ರಚನೆ, ಸಾರ್ವಜನಿಕ ಬಾವಿ ರಚನೆ, ನೀರಿನ ಮರುಪೂರಣ ಘಟಕ, ಮಳೆ ನೀರಿನ ಕೊಯ್ಲು, ಕೃಷಿಹೊಂಡ, ಕೆರೆಗಳ ಹೂಳು ತೆಗೆಯುವ ಕಾರ್ಯಕ್ಕೆ ತಾಲೂಕಾಡಳಿತ ಹೆಚ್ಚಿನ ಆದ್ಯತೆ ನೀಡಿದೆ ಎಂದು ರಾಜಣ್ಣ ಅವರು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News