ಮಡಿಕೇರಿ ಮೂಲದ ನಾಲ್ವರು ಬಾಲಕರು ನಾಪತ್ತೆ

Update: 2019-05-21 14:59 GMT

ಮಂಗಳೂರು, ಮೇ 21: ಮಡಿಕೇರಿಯ ಬಾಲಕರ ಬಾಲಮಂದಿರದಿಂದ ಮಂಗಳೂರಿನ ಬೊಂದೇಲ್‌ನಲ್ಲಿರುವ ಬಾಲಕರ ಬಾಲಮಂದಿರಕ್ಕೆ ವರ್ಗಾವಣೆಯಾಗಿ ಬಂದಿದ್ದ ಮಡಿಕೇರಿ ಮೂಲದ ನಾಲ್ಕು ಮಂದಿ ಬಾಲಕರು ನಾಪತ್ತೆಯಾಗಿದ್ದಾರೆ.

ವೀರಾಜಪೇಟೆ ಮಾಲಂಬಿ ಗ್ರಾಮ ನಿವಾಸಿ ಕೃಷ್ಣ (16), ಮಡಿಕೇರಿ ಮಾರ್ನಾಡು ನಿವಾಸಿ ಹ್ಯಾರಿ (16), ವೀರಾಜಪೇಟೆ ಮಾಲಂಬಿ ಗ್ರಾಮ ನಿವಾಸಿ ಸಿದ್ದು (17) ಮತ್ತು ಕೊಡಗು ತ್ಯಾಗರಾಜ್ ಕಾಲನಿ ಹಿಂಭಾಗ ನಿವಾಸಿ ಮಲ್ಲೇಶ್ (16) ನಾಪತ್ತೆಯಾದವರು.

ಮೇ 18ರಂದು ರಾತ್ರಿ ವೇಳೆಗೆ ಈ ಮಕ್ಕಳು ಬಾಲಮಂದಿರ ಕಂಪೌಂಡ್ ಹಾರಿ ನಾಪತ್ತೆಯಾಗಿರಬಹುದೆಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಆದರೆ ಮಕ್ಕಳು ನಾಪತ್ತೆಯಾಗಿರುವುದು ಬೆಳಗ್ಗೆ 7 ಗಂಟೆ ವೇಳೆಗೆ ಬಾಲಮಂದಿರದ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ಕಾವೂರು ಪೊಲೀಸರಿಗೆ ತಿಳಿಸಿದ್ದಾರೆ.

ಕೃಷ್ಣ: ವೀರಾಜಪೇಟೆ ತಾಲೂಕು ಮಾಲಂಬಿ ಗ್ರಾಮ ನಿವಾಸಿಯಾಗಿದ್ದು, ಎತ್ತರ 153ಸೆಂ.ಮೀ. ಎಣ್ಣೆಗಪ್ಪು ಮೈಬಣ್ಣ, ದುಂಡು ಮುಖ, ಸಾಧಾರಣ ಮೈಕಟ್ಟು, ಕನ್ನಡ ಯರವ ಮತ್ತು ಕೂರ್ಗಿ ಭಾಷೆ ಮಾತನಾಡುತ್ತಾರೆ. ತಿಳಿ ನೀಲಿ ಬಣ್ಣದ ಶರ್ಟ್ ಮತ್ತು ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದಾರೆ.

ಸಿದ್ದು: ವೀರಾಜಪೇಟೆ ಮಾಲಂಬಿ ಗ್ರಾಮ ನಿವಾಸಿಯಾಗಿದ್ದು, 170ಸೆಂ.ಮೀ. ಎತ್ತರ, ಕಪ್ಪು ಮೈ ಬಣ್ಣ, ದುಂಡು ಮುಖ, ಸಾಧಾರಣ ಮೈಕಟ್ಟು, ಕನ್ನಡ ಯರವ ಮತ್ತು ಕೂರ್ಗಿ ಭಾಷೆ ಮಾತನಾಡುತ್ತಾರೆ. ಬಿಳಿ ಬಣ್ಣದ ಶರ್ಟ್, ನೀಲಿ ಬಣ್ಣ ಜೀನ್ಸ್ ಪ್ಯಾಂಟ್ ಧರಿಸಿದ್ದಾರೆ.

ಮಲ್ಲೇಶ್: ಮಡಿಕೇರಿ ತ್ಯಾಗರಾಜ್ ಕಾಲನಿ ಹಿಂಭಾಗ ನಿವಾಸಿಯಾಗಿದ್ದು, 158 ಸೆಂ.ಮೀ. ಎತ್ತರ, ಗೋಧಿ ಮೈಬಣ್ಣ, ದುಂಡು ಮುಖ, ಸಾಧಾರಣ ಮೈಕಟ್ಟು, ಕನ್ನಡ, ತಮಿಳು ಮತ್ತು ಕೂರ್ಗಿ ಭಾಷೆ ಮಾತನಾಡುತ್ತಾರೆ. ಬಿಳಿ ಬಣ್ಣದ ಶರ್ಟ್, ನೀಲಿ ಬಣ್ಣ ನೈಟ್ ಪ್ಯಾಂಟ್ ಧರಿಸಿದ್ದಾರೆ.

ಹ್ಯಾರಿ: ಮಡಿಕೇರಿ ಮಾರ್ನಾಡು ನಿವಾಸಿಯಾಗಿದ್ದು, ಎತ್ತರ 152 ಸೆಂಮೀ ಎತ್ತರ, ಎಣ್ಣೆಗಪ್ಪು ಗೋಧಿ ಮೈಬಣ್ಣ, ದುಂಡು ಮುಖ, ಸಾಧಾರಣ ಮೈಕಟ್ಟು, ಯರವ ಮತ್ತು ಕೂರ್ಗಿ ಭಾಷೆ ಮಾತನಾಡುತ್ತಾರೆ. ಕಪ್ಪು ಬಣ್ಣದ ಟೀಶರ್ಟ್ ಮತ್ತು ನೀಲಿ ಬಣ್ಣ ನೈಟ್ ಪ್ಯಾಂಟ್ ಧರಿಸಿದ್ದಾರೆ.
ಬಾಲಮಂದಿರದಿಂದ ಮೇ 18ರಂದು ನಾಪತ್ತೆಯಾಗುವ ಮುನ್ನ ಬಾಲಕರು ಪತ್ರವೊಂದರನ್ನು ಬರೆದಿಟ್ಟಿದ್ದು ಅದರಲ್ಲಿ ‘ನಮ್ಮನ್ನು ಒತ್ತಾಯಪೂರ್ವಕವಾಗಿ ಮಡಿಕೇರಿಯಿಂದ ಮಂಗಳೂರಿಗೆ ಕಳುಹಿಸಿಕೊಟ್ಟಿದ್ದಾರೆ. ನಮಗೆ ಇಲ್ಲಿ ಇರಲು ಮನಸ್ಸಿಲ್ಲ’ ಎಂದು ಪತ್ರ ಬರೆದಿಟ್ಟು ನಾಪತ್ತೆಯಾಗಿದ್ದಾರೆ. ಇದನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ. ಕಾವೂರು ಪೊಲೀಸರು ಬಾಲಕರ ಮನೆಗೆ ತೆರಳಿದ್ದು ಅಲ್ಲಿಯೂ ಶೋಧ ಕಾರ್ಯ ನಡೆಸಿದ್ದಾರೆ.

ಈ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಲಕರು ಪತ್ತೆಯಾದಲ್ಲಿ ಕಾವೂರು ಪೊಲೀಸ್ ಠಾಣೆ ಅಥವಾ ನಗರದ ಕಂಟ್ರೋಲ್ ರೂಮ್‌ಗೆ ಮಾಹಿತಿ ನೀಡಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News