ಮಾಹೆ- ಟೊಯೋಟಾ ಕಿರ್ಲೋಸ್ಕರ್ ಮೋಟರ್ ನಡುವೆ ಒಪ್ಪಂದ

Update: 2019-05-21 15:12 GMT

ಉಡುಪಿ, ಮೇ 21: ಆಧುನಿಕ ತಂತ್ರಜ್ಞಾನಕ್ಕೆ ಅನುಗುಣವಾಗಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿಯನ್ನು ನೀಡುವ ಉದ್ದೇಶ ದಿಂದ ಮಣಿಪಾಲದ ಎಂಐಟಿಯಲ್ಲಿ ‘ಟೊಯೋಟಾ ಸೆಂಟರ್ ಆಫ್ ಎಕ್ಸಲೆನ್ಸ್’ನ್ನು ಪ್ರಾರಂಭಿಸಲು ಬೆಂಗಳೂರು ಮೂಲದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್, ಮಣಿಪಾಲದ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ)ಯೊಂದಿಗೆ ಇಂದು ಒಪ್ಪಂದವೊಂದಕ್ಕೆ ಸಹಿ ಹಾಕಿದೆ.

ಮಾಹೆ ಪರವಾಗಿ ಕುಲಪತಿ ಡಾ.ಎಚ್.ವಿನೋದ್ ಭಟ್ ಹಾಗೂ ಟೊಯೋಟಾ ಪರವಾಗಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್‌ನ ಉಪಾಧ್ಯಕ್ಷ ನವೀನ್ ಸೋನಿ ಒಪ್ಪಂದಕ್ಕೆ ಸಹಿ ಹಾಕಿದರು.

ತಮ್ಮ ಸಂಸ್ಥೆ ಕರ್ನಾಟಕದಲ್ಲಿ ಪ್ರಾರಂಭಿಸಿದ ಆರನೇ ಸೆಂಟರ್ ಆಫ್ ಎಕ್ಸಲೆನ್ಸ್ ಇದಾಗಿದ್ದು, ವೇಗವಾಗಿ ಬದಲಾಗುತ್ತಿರುವ ತಂತ್ರಜ್ಞಾನದಲ್ಲಿ ಅಪ್‌ಡೇಟ್ ಆಗಲು ವಿದ್ಯಾರ್ಥಿಗಳಿಗೆ ಇದರಲ್ಲಿ ವಿಪುಲ ಅವಕಾಶ ಸಿಗಲಿದೆ. ಸದ್ಯಕ್ಕೆ ಎಂಐಟಿಯ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯ ಬಹುದಾಗಿದ್ದು, ಮುಂದೆ ಇತರ ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳಿಗೂ ಇದರ ಸೇವೆ ಸಿಗಲಿದೆ ಎಂದರು.

ಇದರಲ್ಲಿ ಕೇವಲ ಅಟೋಮೊಬೈಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಮಾತ್ರವಲ್ಲದೇ, ಇಲೆಕ್ಟ್ರಾನಿಕ್ಸ್, ಐಟಿ ಸೇರಿದಂತೆ ಉಳಿದೆಲ್ಲಾ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಈ ಕೇಂದ್ರದ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಇಂಜಿನಿಯರಿಂಗ್‌ನ ಎಲ್ಲಾ ಶಾಖೆಗಳ ವಿದ್ಯಾರ್ಥಿ ಗಳಿಗೂ ಪ್ರಯೋಜನವಾಗುವಂತೆ ಇದನ್ನು ರೂಪಿಸಲಾಗುವುದು ಎಂದು ನವೀನ್ ಸೋನಿ ನುಡಿದರು.

ಜಾಗತಿಕವಾಗಿ ವಿವಿಧ ಉದ್ಯಮಗಳ ವೈವಿಧ್ಯಮಯ ಬೇಡಿಕೆಗಳನ್ನು ಈಡೇರಿ ಸುವಂತೆ ಉನ್ನತ ತಂತ್ರಜ್ಞಾನದ ತರಬೇತಿ, ವಿಶ್ವದ ಸ್ಪರ್ಧಾತ್ಮಕ ಮಟ್ಟಕ್ಕನು ಗುಣವಾಗಿ ತರಬೇತಿ, ಉದ್ಯೋಗಿಯೊಬ್ಬನಿಗಿರಬೇಕಾದ ಕೌಶಲ್ಯ ಪಡೆಯಲು ಬೇಕಾದ ಮೂಲ ತರಬೇತಿಯನ್ನು ನೀಡುವುದಕ್ಕೆ ಹೆಚ್ಚಿನ ಗಮನ ಹರಿಸಲಾಗುವುದು ಎಂದು ಸೋನಿ ತಿಳಿಸಿದರು.

ಡಾ.ವಿನೋದ್ ಭಟ್ ಮಾತನಾಡಿ, ಇಲ್ಲಿನ ಸೆಂಟರ್ ಆಫ್ ಎಕ್ಸಲೆನ್ಸ್ ಮೂಲಕ ಉದ್ದಿಮೆ ಹಾಗೂ ಶೈಕ್ಷಣಿಕ ಕ್ಷೇತ್ರ ಒಂದಾಗಿ ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿಗೆ ಪೂರಕವಾಗಿ ಶ್ರಮಿಸಲಿದೆ. ಈ ಮೂಲಕ ನಮ್ಮ ವಿದ್ಯಾರ್ಥಿಗಳು ಪದವಿಯೊಂದಿಗೆ ಹೊರಬರುವ ವೇಳೆಗೆ ಉದ್ಯಮಗಳ ಅವಕಾಶದ ಬಾಗಿಲು ತೆರೆದಿರುತ್ತದೆ ಎಂದು ಅಭಿಪ್ರಾಯಪಟ್ಟರು.

ಮಾಹೆ ಮತ್ತು ಟೊಯೋಟಾ ಸಂಸ್ಥೆಗಳು ಒಪ್ಪಂದಕ್ಕೆ ಸಹಿ ಹಾಕುವ ಸಂದರ್ಭದಲ್ಲಿ ಎಂಐಟಿಯ ನಿರ್ದೇಶಕ ಡಾ.ಡಿ.ಶ್ರೀಕಾಂತ್ ರಾವ್, ಎಂಐಟಿಯ ಅಟೋಮೋಬೈಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಹಾಗೂ ಸಂಶೋಧನಾ ನಿರ್ದೇಶಕ ಡಾ.ಸತೀಶ್ ಶೆಣೈ, ರಿಜಿಸ್ಟ್ರಾರ್ ಡಾ.ನಾರಾಯಣ ಸಭಾಹಿತ್ ಹಾಗೂ ಟೊಯೋಟಾ ಕಿರ್ಲೋಸ್ಕರ್ ಮೋಟಾರ್‌ನ ಹಿರಿಯ ಉಪಾಧ್ಯಕ್ಷ ರಾಜು ಬಿ.ಕೇತ್ಕಳೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News