ಭಟ್ಕಳ: ಹೊಳೆಯ ನೀರು ಸಂಪೂರ್ಣ ಮಲಿನ

Update: 2019-05-21 15:17 GMT

ಭಟ್ಕಳ: ಕರಾವಳಿಯಲ್ಲಿ ಕಳೆದ ಒಂದು ದಶಕದಿಂದ ಕಂಡರಿಯದ ನೀರಿನ ಬರ ಬಂದಿರೋದು ಎಲ್ಲರನ್ನು ತೀವ್ರ ಆತಂಕಕ್ಕೆ ಗುರಿ ಮಾಡಿದ್ದರೆ, ಇಲ್ಲಿನ ಜಾಲಿ ಕೋಡಿಯಲ್ಲಿ ಇರುವ ನೀರನ್ನೂ ಹೊಲಸು ಮಾಡಿದ್ದಲ್ಲದೇ ಬೇರೆಯವರ ಬಾವಿಗಳನ್ನು ಹಾಳು ಮಾಡುವ ಕೆಲಸ ಕೇವಲ ಕೆಲವೇ ಜನರು ಮಾಡುತ್ತಿರುವುದು ಅಧಿಕಾರಿಗಳು ಕಣ್ಮುಚ್ಚಿ ಕೊಳಿತಿರುವುದು ಮಾತ್ರ ವಿಪರ್ಯಾಸವಾಗಿದೆ. 

ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಜಾಲಿ ಕೊಡಿಯ ಹೊಳೆಗೆ ಕೆಲವೇ ಕೆಲವು ಮನೆಯವರು ಶೌಚಾಲಯದ ನೀರು ಬಿಡುವುದರಿಂದ ನೀರಿದ್ದರೂ ಸಹ ಉಪಯೋಗಕ್ಕೆ ಬಾರದಂತಾಗಿದೆ. ಅಲ್ಲದೇ ಅಕ್ಕ ಪಕ್ಕದ ಬಾವಿಗಳೂ ಕಲುಷಿತ ನೀರು ಸೇರಿ ಉಪಯೋಗಕ್ಕೆ ಬಾರದಂತಾ ಗಿದೆ ಎನ್ನುವುದು ಗ್ರಾಮಸ್ಥರ ದೂರಾಗಿದೆ.

ಗ್ರಾಮದಲ್ಲಿ ಕೆಲವೇ ಕೆಲವು ಮನೆಯವರು ಶೌಚದ ನೀರನ್ನು ನದಿಗೆ ಬಿಡುತ್ತಿದ್ದಾರೆ ಈ ಬಗ್ಗೆ ಊರಿನವರು ಎಚ್ಚರಿಸಿದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲ. ಸಾರ್ವಜನಿಕರು ಈ ಕುರಿತು ತಾಲೂಕಾ ಆಡಳಿತಕ್ಕೆ, ಪಟ್ಟಣ ಪಂಚಾಯತಕ್ಕೆ ಮನವಿ ನೀಡಿದರೂ ಕೂಡಾ ಯಾವುದೇ ಪ್ರಯೋಜನ ವಾಗಿಲ್ಲ ಎನ್ನುತ್ತಾರೆ ಊರಿನ ನಾಗರೀಕರು.  

ಈಗಾಗಲೇ ಎಲ್ಲ ಕಡೆಯಲ್ಲಿಯೂ ನೀರು ಒಣಗಿ ಹೋಗಿದ್ದು ನದಿಯ ಹೊಲಸು ನೀರು ಬಾವಿಗೆ ಬರುತ್ತಿದ್ದು ಇದ್ದ ಅಲ್ಪ ಸ್ವಲ್ಪ ನೀರನ್ನು ನಾವು ಉಪಯೋಗಿಸದಂತಾಗಿದೆ. ಈಗಾಗಲೇ ನದಿಗೆ ಅಳವಡಿಸಲಾಗಿದ್ದ ಹೊಲಸು ನೀರು ಬಿಡುವ ಪೈಪುಗಳನ್ನು ಬಂದ್ ಮಾಡಿಸುವಂತೆ ಕೋರಿಕೊಂಡರೂ ಸಹ ಬಂದ್ ಮಾಡದೇ ಇರುವುದು ಇಡೀ ಪ್ರದೇಶದಲ್ಲಿ ವಾಸನೆ ಉಂಟು ಮಾಡಿದೆ. ಬಿರು ಬೇಸಿಗೆಯಾದ್ದರಿಂದ ರೋಗ ಹರಡುವ ಭೀತಿ ಕಾಡುತ್ತಿದ್ದು ತಕ್ಷಣ ಕ್ರಮ ಕೈಗೊಂಡು ಹೊಲಸು ನೀರು ಬಿಡುವುದನ್ನು ಶಾಶ್ವತವಾಗಿ ಬಂದ್ ಮಾಡಿಸದೇ ಇದ್ದಲ್ಲಿ ತೀವ್ರ ಪರಿಣಾಮ ಬೀರಲಿದೆ ಎನ್ನುವುದು ನಾಗರೀಕರ ಆಗ್ರಹವಾಗಿದೆ. ತಕ್ಷಣ ಈ ಕುರಿತು ತಾಲೂಕಾ ಆಡಳಿತ ಹಾಗೂ ಪಟ್ಟಣ ಪಂಚಾಯತ್ ಪರಿಶೀಲನೆ ನಡೆಸಿ ನದಿ ನೀರಿಗೆ ಶೌಚಾಲಯದ ನೀರನ್ನು ಬಿಡುವ ಮನೆಗಳಿಗೆ ಪ್ರತ್ಯೇಕವಾಗಿ ನೋಟೀಸು ನೀಡಿ ಶೌಚಗುಂಡಿಗಳನ್ನು ಮಾಡಿಸಿಕೊಳ್ಳಲು ತಿಳಿಸಬೇಕು. ಇಲ್ಲವಾದಲ್ಲಿ ಗ್ರಾಮಸ್ಥರೇ ಮುಂದಾಗಿ ಕ್ರಮ ಕೈಗೊಳ್ಳಲು ಹೋದರೆ ಅನಾಹುತ ಸಂಭವಿಸುವ ಸಾಧ್ಯತೆ ಇದೆ ಎನ್ನುವುದು ಕೂಡಾ ಗ್ರಾಮಸ್ಥರ ಅಳಲಾಗಿದೆ.

ತಕ್ಷಣ ಸ್ಥಳೀಯಾಡಳಿತ ಹಾಗೂ ಪಟ್ಟಣ ಪಂಚಾಯತ್ ಕ್ರಮ ಕೈಗೊಂಡು ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ಊರಿನಲ್ಲಿ ರೋಗ ಹರಡುವ ಭೀತಿಯನ್ನು ದೂರ ಮಾಡಬೇಕು ಎನ್ನುವುದು ಆಗ್ರಹವಾಗಿದೆ.

Similar News