ಸರ್ಕಾರದ ಮೀಸಲಾತಿ ಗೊಂದಲದಿಂದ ಜನಪ್ರತಿನಿಧಿಗಳಿಗೆ ತೊಂದರೆ : ಕೋಟ ಆರೋಪ

Update: 2019-05-21 16:36 GMT

ಮೂಡುಬಿದಿರೆ : ದೂರಗಾಮಿ ಮೂಲಭೂತ ಸೌಕರ್ಯಗಳ ಪ್ರಣಾಳಿಕೆಯನ್ನು ಹೊಂದಿರುವ ಬಿಜೆಪಿ ಪಕ್ಷವನ್ನು ಸಾಮಾನ್ಯ ಮತ್ತು ಮಧ್ಯಮ ವರ್ಗದ ಜನ ಬಯಸುತ್ತಿದ್ದಾರೆ. ರಾಜ್ಯದಲ್ಲಿರುವ 274 ಸ್ಥಳೀಯ ಸಂಸ್ಥೆಗಳ ಪೈಕಿ 108 ಸಂಸ್ಥೆಗಳಿಗೆ ಚುನಾವಣೆ ನಡೆದು ಎಂಟು ತಿಂಗಳು ಕಳೆದರೂ ಇನ್ನೂ ಸ್ಥಳೀಯಾಡಳಿತಕ್ಕೆ ಅಧ್ಯಕ್ಷ-ಉಪಾಧ್ಯಕ್ಷರನ್ನು ನೇಮಿಸಿಲ್ಲ. ಸರ್ಕಾರದ ಮೀಸಲಾತಿ ಗೊಂದಲದಿಂದ ಈ ಸಮಸ್ಯೆ ಉದ್ಭವಿಸಿದ್ದು  ಕೋರ್ಟು ತಡೆಯಾಜ್ಞೆ ನೀಡಿದೆ. ಜನಪ್ರತಿನಿಧಿಗಳಾದವರು ಅಧಿಕಾರದಿಂದ  ವಂಚಿತರಾಗಿದ್ದಾರೆ. ಈ ವಿಚಾರವನ್ನು ಮತದಾರರು ಗಮನದಲ್ಲಿಟ್ಟುಕೊಂಡು ಜಾಗೃತರಾಗಿ ಮತ ಚಲಾಯಿಸಬೇಕು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಮಂಗಳವಾರ ಮೂಡುಬಿದಿರೆಯ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಮೂಡುಬಿದಿರೆ ನಗರವನ್ನು ವ್ಯವಸ್ಥಿತ ನಗರವನ್ನಾಗಿಸುವ ದೂರಗಾಮಿ ಯೋಜನೆಯನ್ನು ರೂಪಿಸುವಲ್ಲಿ ಇಲ್ಲಿನ ಪುರಸಭಾ ಆಡಳಿತ  ವಿಫಲವಾಗಿದೆ. ಕೇಂದ್ರ ರಾಜ್ಯದಿಂದ ಬರುವ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡದಿರುವುದರಿಂದ ಅಭಿವೃದ್ಧಿ ಕುಂಠಿತವಾಗಿದ್ದು ಜನ ಬದಲಾವಣೆ ಬಯಸಿದ್ದಾರೆ ಎಂದರು.

ಇಬ್ಬರು ಬಂಡಾಯ ಅಭ್ಯರ್ಥಿಗಳ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಪಾರದರ್ಶಕವಾದ ದೂರಗಾಮಿ ಯೋಜನೆಯುಳ್ಳ ಸುಂದರ ಸ್ವಚ್ಛ ನಗರವನ್ನಾಗಿ ರೂಪಿಸುವ ಪ್ರಣಾಳಿಕೆಯನ್ನು ರಚಿಸಿದೆ.  ಮೀಸಲಾತಿ  ಕಾರಣಗಳಿಂದ ಅಭ್ಯರ್ಥಿಗಳ ಆಯ್ಕೆಯಲ್ಲಿ ಸಣ್ಣಪುಟ್ಟ ಗೊಂದಲಗಳಾಗಿದ್ದು  ತೊಂದರೆಯನ್ನು ಮಾತುಕತೆಯ ಮೂಲಕ ಸರಿಪಡಿಸಿ 23 ಸ್ಥಾನಗಳ ಪೈಕಿ 15 ರಿಂದ 18 ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕ ಉಮಾನಾಥ ಕೋಟ್ಯಾನ್, ಮಂಡಲ ಅಧ್ಯಕ್ಷ ಈಶ್ವರ ಕಟೀಲು, ಪ್ರಧಾನ ಕಾರ್ಯದರ್ಶಿ ಸುಕೇಶ್ ಶೆಟ್ಟಿ, ಜಿಲ್ಲಾ ಸಮಿತಿ ಸದಸ್ಯರಾದ ಭುವನಾಭಿರಾಮ ಉಡುಪ, ಭೊಜರಾಜ ಶೆಟ್ಟಿ, ಜಿ.ಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News