‘ಚು. ಆಯುಕ್ತ ಅಶೋಕ್ ಲವಾಸಾರ ಭಿನ್ನಮತ ಬಹಿರಂಗಗೊಳಿಸದ ಕ್ರಮ ಸಂವಿಧಾನದ ಅಣಕ’

Update: 2019-05-22 15:12 GMT

ಹೊಸದಿಲ್ಲಿ,ಮೇ 22: ತನ್ನ ಅಂತಿಮ ಆದೇಶಗಳಲ್ಲಿ ಭಿನ್ನಮತದ ಟಿಪ್ಪಣಿಗಳನ್ನೂ ಸೇರಿಸಬೇಕೆಂಬ ಚುನಾವಣಾ ಆಯುಕ್ತ ಅಶೋಕ ಲವಾಸಾ ಅವರ ಬೇಡಿಕೆಯನ್ನು ತಿರಸ್ಕರಿಸಿರುವ ಚುನಾವಣಾ ಆಯೋಗದ ನಿರ್ಧಾರವು ಸಂವಿಧಾನದ ಅಣಕವಾಗಿದೆ ಎಂದು ಕಾಂಗ್ರೆಸ್ ಪಕ್ಷವು ಬುಧವಾರ ಟೀಕಿಸಿದೆ.

ಚುನಾವಣಾ ಆಯೋಗವು ತನ್ನ ಸಾಂವಿಧಾನಿಕ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ‘ಕರಾಳ ರಹಸ್ಯಗಳ’ ಮತ್ತು ‘ಪ್ರತ್ಯೇಕ ವಲಯಗಳ’ ನೂತನ ಪೂರ್ವ ನಿದರ್ಶನವೊಂದನ್ನು ಸ್ಥಾಪಿಸಲು ಬಯಸುತ್ತಿದೆ. ಮುಖ್ಯ ಚುನಾವಣಾ ಆಯುಕ್ತರು ಆಯೋಗದ ಕಾರ್ಯ ನಿರ್ವಹಣೆಯಲ್ಲಿ ನ್ಯಾಯಪರತೆಯನ್ನು ಪ್ರದರ್ಶಿಸದಿದ್ದರೆ ಅದು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯನ್ನು ನಡೆಸಲು ಹೇಗೆ ಸಾಧ್ಯ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ.

ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳಲ್ಲಿ ಭಿನ್ನಾಭಿಪ್ರಾಯಗಳನ್ನು ಬಹಿರಂಗಗೊಳಿಸದಿರಲು ಚುನಾವಣಾ ಆಯೋಗವು ಮಂಗಳವಾರ ನಿರ್ಧರಿಸಿತ್ತು. ಈಗಿನ ಪದ್ಧತಿಯಂತೆ ಭಿನ್ನಾಭಿಪ್ರಾಯದ ಟಿಪ್ಪಣಿಗಳನ್ನು ಆಂತರಿಕ ಕಡತಗಳಲ್ಲಿ ಮಾತ್ರ ಸೇರಿಸಲಾಗುತ್ತದೆ ಎಂದು ಅದು ಸ್ಪಷ್ಟಪಡಿಸಿತ್ತು.

ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪಗಳಿಂದ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಮುಕ್ತಗೊಳಿಸುವ ಚುನಾವಣಾ ಆಯೋಗದ ನಿರ್ಧಾರಕ್ಕೆ ತನ್ನ ಅಸಮ್ಮತಿಯನ್ನು ವ್ಯಕ್ತಪಡಿಸಿದ್ದ ಚುನಾವಣಾ ಆಯುಕ್ತ ಅಶೋಕ್  ಲವಾಸಾ ಅವರು ಮೇ 4ರ ನಂತರ ನೀತಿ ಸಹಿತೆ ಉಲ್ಲಂಘನೆಗಳಿಗೆ ಸಂಬಂಧಿಸಿದ ಸಭೆಗಳಲ್ಲಿ ಭಾಗಿಯಾಗಿರಲಿಲ್ಲ. ಆಯೋಗದ ಆದೇಶಗಳಲ್ಲಿ ತನ್ನ ಭಿನ್ನಾಭಿಪ್ರಾಯಗಳನ್ನು ದಾಖಲಿಸಲಾಗುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದರು. ಇದು ಮಾಧ್ಯಮಗಳಲ್ಲಿ ಬಹಿರಂಗಗೊಂಡ ಬಳಿಕ ಸಾಕಷ್ಟು ವಿವಾದವನ್ನು ಸೃಷ್ಟಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News