ರೋಷನ್ ಬೇಗ್ ಅವರಿಂದ ಶಿವಾಜಿನಗರಕ್ಕೆ ನ್ಯಾಯ ಸಿಕ್ಕಿದೆಯೇ ?

Update: 2019-05-22 16:14 GMT

ರೋಶನ್ ಬೇಗ್ ಅವರಿಗೆ ಈಗ ಸಮುದಾಯದ ನೆನಪು ಕಾಡುತ್ತಿದೆ. ಕಾಂಗ್ರೆಸ್ ಸಮುದಾಯಕ್ಕೆ ಏನೂ ಮಾಡಿಲ್ಲ ಎಂಬುದು ಈಗ ನೆನಪಾಗುತ್ತಿದೆ.  1985 ರಲ್ಲಿ ಅವರು ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದವರು. ಆ ಬಳಿಕ  ಒಟ್ಟು ಏಳು ಬಾರಿ ಶಾಸಕರಾಗಿ ಆಯ್ಕೆಯಾದಾಗ , ರಾಜ್ಯದ ಗೃಹ ಸಚಿವರಾಗಿದ್ದಾಗ , ಪ್ರವಾಸೋದ್ಯಮ ಸಚಿವರಾಗಿದ್ದಾಗ, ಮೂಲಭೂತ ಸೌಲಭ್ಯಗಳ ಸಚಿವರಾಗಿದ್ದಾಗ , ಹಜ್ ಮತ್ತು ವಕ್ಫ್ ಸಚಿವರಾಗಿದ್ದಾಗ , ವಾರ್ತಾ ಇಲಾಖೆ ಸಚಿವರಾಗಿದ್ದಾಗ, ಕೈಗಾರಿಕಾ ಸಚಿವರಾಗಿದ್ದಾಗ, ನಗರಾಭಿವೃದ್ಧಿ ಸಚಿವರಾಗಿದ್ದಾಗ , ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದಾಗ ಅಂದರೆ ಸುಮಾರು ಮೂರುವರೆ ದಶಕಗಳ ಕಾಲ ಒಂದಲ್ಲೊಂದು ಅಧಿಕಾರ ಅನುಭವಿಸುತ್ತಿರುವಾಗ ಅವರಿಗೆ ಅವರ ಸಮುದಾಯಕ್ಕೆ ಪಕ್ಷದಿಂದ ಆದ ಅನ್ಯಾಯ ಕಂಡಿರಲಿಕ್ಕಿಲ್ಲ . ಬಿಜೆಪಿ ಜೊತೆ ತನ್ನ ಸಮುದಾಯ ಅಡ್ಜಸ್ಟ್ ಮಾಡಿಕೊಳ್ಳಬೇಕು ಎಂಬ ಜ್ಞಾನೋದಯ ಅವರಿಗೆ ಆಗಿರಲಿಕ್ಕಿಲ್ಲ. ಈಗ ಆಗಿದೆ. ತಡವಾಗಿಯಾದರೂ ಆಗಿದೆಯಲ್ಲ ಅದಕ್ಕಾಗಿ ನಾವು ಸಮಾಧಾನ ಮಾಡಿಕೊಳ್ಳೋಣ.

ಆದರೆ ಇಲ್ಲೊಂದು ಮುಖ್ಯ ಪ್ರಶ್ನೆ ಏಳುತ್ತದೆ. ಈಗ ರೋಷನ್ ಬೇಗ್ ಪ್ರಕಾರ ಮುಸ್ಲಿಂ ಸಮುದಾಯಕ್ಕೆ ಕಾಂಗ್ರೆಸ್ ನ್ಯಾಯ ಒದಗಿಸಿಲ್ಲ. ಆದರೆ ಕಾಂಗ್ರೆಸ್ ಪಾಲಿಗೆ ತೀರಾ ಇತ್ತೀಚಿನವರೆಗೂ ಅಂದರೆ ಝಮೀರ್ ಅಹ್ಮದ್, ಖಾದರ್ ರಂತಹ ನಾಯಕರು ಪ್ರವರ್ಧಮಾನಕ್ಕೆ ಬರುವವರೆಗೂ ಮುಸ್ಲಿಮರು ಅಂದರೆ ರೋಷನ್ ಬೇಗ್ ಆಗಿದ್ದರು. ಹಾಗಾಗಿ ಇದೇ ಮುಸ್ಲಿಂ ಸಮುದಾಯದ ಕೋಟಾದಲ್ಲಿ ಅವರು ಶಾಸಕರಾದರು, ಸಚಿವರಾದರು, ಮೂರೂವರೆ ದಶಕ ಅಧಿಕಾರ ಅನುಭವಿಸಿದರು. ಇದಕ್ಕೆಲ್ಲ ಮೂಲ ಅವರು ಮುಸ್ಲಿಂ ಸಮುದಾಯದ ಕಾಂಗ್ರೆಸ್ ನಾಯಕರು ಎಂದು ಆ ಪಕ್ಷ ಪರಿಗಣಿಸಿದ್ದು.

ಹಾಗಾದರೆ ಇಷ್ಟೆಲ್ಲವನ್ನೂ ಸಮುದಾಯದ ಹೆಸರಲ್ಲಿ ಪಕ್ಷದಿಂದ ಪಡೆದುಕೊಂಡ ರೋಷನ್ ಬೇಗ್ ಆ ಸಮುದಾಯಕ್ಕೆ ಏನು ನೀಡಿದರು ? ಎಷ್ಟು ನ್ಯಾಯ ಒದಗಿಸಿದರು ? ಕಾಂಗ್ರೆಸ್ ನ್ಯಾಯ ಒದಗಿಸುವುದು , ಕೊಡುಗೆ ನೀಡುವುದು ಅಂದರೆ ಏನು ? ಸೋನಿಯಾ ಗಾಂಧಿ, ರಾಹುಲ್ ಗಾಂಧಿಯೇ ಬಂದು ಮುಸ್ಲಿಂ ಸಮುದಾಯವನ್ನು ಉದ್ದಾರ ಮಾಡುವುದೇ ? ಅಥವಾ ಪಕ್ಷದಲ್ಲಿರುವ ಮುಸ್ಲಿಂ ನಾಯಕರಿಗೆ ಅಧಿಕಾರ ಕೊಟ್ಟು ಮುಸ್ಲಿಮರಿಗೆ , ಇತರರಿಗೆ ಉಪಕಾರ ಮಾಡಿ ಎಂದು ಅವಕಾಶ ಮಾಡಿಕೊಡುವುದೇ ? 

ರೋಷನ್ ಬೇಗ್ ಐದು ಬಾರಿ ಬೆಂಗಳೂರಿನ ಶಿವಾಜಿನಗರದ ಶಾಸಕರಾಗಿ ಆಯ್ಕೆಯಾದ ದಾಖಲೆ ಮಾಡಿದ್ದಾರೆ. ಈ ಅವಧಿಯಲ್ಲೇ ಅವರು ಹಲವು ಪ್ರಭಾವಿ ಸಚಿವ ಸ್ಥಾನಗಳನ್ನು ನಿಭಾಯಿಸಿದ್ದಾರೆ. ಆದರೆ ಅವರು ಪ್ರತಿನಿಧಿಸುತ್ತಿರುವ ಶಿವಾಜಿನಗರ ಇವತ್ತು ಹೇಗಿದೆ ? ಬೆಂಗಳೂರು ನಗರದಲ್ಲಿ ಆ ಪ್ರದೇಶದ ಇಮೇಜ್ ಹೇಗಿದೆ ಗೊತ್ತೇ ? ಒಂದು ಸ್ಲಮ್ ಗೆ ಇರುವ ಇಮೇಜ್ ಬೇಗ್ ಸಾಹೇಬರ ಕ್ಷೇತ್ರಕ್ಕೆ ಇವತ್ತು ಇದೆ. ಇನ್ನು ರಾಜ್ಯದ ಎಲ್ಲ ಮುಸ್ಲಿಮರ ಬಗ್ಗೆ ಇವತ್ತು ಮಾತಾಡುವ ಬೇಗ್ ಸಾಹೇಬರು ತನ್ನ ಸಮುದಾಯಕ್ಕೆ ಕೊಟ್ಟಿರುವ ಒಂದು ದೊಡ್ಡ ಕೊಡುಗೆ ಯಾವುದೆಂದು ಯಾರಾದರೂ ನೆನಪು ಮಾಡಿ ಹೇಳಬಹುದೇ ? ಮುಸ್ಲಿಮರಿಗೆ ಅನ್ಯಾಯ ಮಾಡಿರುವುದು ಪಕ್ಷ ಮಾತ್ರವೇ ಅಥವಾ ಮುಸ್ಲಿಮರ ಹೆಸರಲ್ಲಿ ಅಧಿಕಾರ ಅನುಭವಿಸಿದ ಬೇಗ್ ಅವರೂ ಇದರಲ್ಲಿ ಸಮಾನ ತಪ್ಪಿತಸ್ಥರೇ ? 

ರೋಷನ್ ಬೇಗ್ ಅವರ ಅಧಿಕೃತ ವೆಬ್ ಸೈಟ್ ಒಂದಿದೆ. ಅಲ್ಲಿ ಹೋಗಿ ನೋಡಿ. ಬೇಗ್ ಸಾಹೇಬರ ಫೋಟೋ ಜೊತೆಜೊತೆಗೆ ಅವರ ಸಮುದಾಯದ (ಪುತ್ರನ) ಫೋಟೋ ಕೂಡ ಇದೆ. ಅವರ ಕ್ಷೇತ್ರದಲ್ಲೂ ಅಲ್ಲಲ್ಲಿ ಕಾಣುವ ಕೊಳಚೆ ಜೊತೆಗೆ ಅವರ ಈ ಸಮುದಾಯದ ( ಮಗನದ್ದು ಸ್ವಾಮಿ ) ಫೋಟೋಗಳು ಬೇಕಾದಷ್ಟು ಕಾಣಸಿಗುತ್ತವೆ.  ಅಂದರೆ ಇವರಿಗೆ ಈವರೆಗೆ ಬೇಕಾದಷ್ಟು ಸಿಕ್ಕಿ ಇವರನ್ನು ವೃದ್ಧಾಪ್ಯಕ್ಕೆ ತಲುಪಿಸಿರುವ ಅಧಿಕಾರ ಇನ್ನು ಇವರ ಸಮುದಾಯಕ್ಕೆ ( ಪುತ್ರರತ್ನನಿಗೆ) ಸಿಗಬೇಕು. ಆತ ಶಾಸಕನಾಗಬೇಕು, ಸಚಿವನಾಗಬೇಕು. ಇದು ಬೇಗ್ ಅವರ ಸಮುದಾಯಕ್ಕೆ ನ್ಯಾಯ ಸಿಗುವ ಮಾನದಂಡ. ಇಷ್ಟಾದರೆ ಸಾಲದು. ಸಮುದಾಯಕ್ಕೆ ಇನ್ನಷ್ಟು ನ್ಯಾಯ ಸಿಗಬೇಕಾದರೆ ಈಗ ( ಮಗನಿಗಾಗಿ, ಆತನೂ ಸಮುದಾಯದ ಭಾಗವೇ ಅಲ್ಲವೇ ? ) ವಿಧಾನಸಭೆಯಿಂದ ನಿವೃತ್ತರಾಗುವ ಬೇಗ್ ಸಾಹೇಬರಿಗೆ ಸಂಸತ್ತಿನ ಆರಾಮ ಕುರ್ಚಿಯೇ ಬೇಕು ಕೂತು ನಿರಾಳವಾಗಿ ಉಸಿರಾಡಲು. ಇಷ್ಟಾಗಿದ್ದರೆ ಸಮುದಾಯ ಉದ್ದಾರವಾಗುತ್ತಿತ್ತು ಬೇಗ್ ಸಾಹೇಬರ ಪಾಲಿಗೆ. 

ಹೀಗಾಗಲಿಲ್ಲ ನೋಡಿ. ಹಾಗಾಗಿ ಈಗ ಸಮುದಾಯಕ್ಕೆ ಅನ್ಯಾಯವಾಗಿದೆ. ಈಗ ನೀವೇ ಹೇಳಿ , ಈ ಸಮುದಾಯಕ್ಕೆ ಬೇಗ್ ರಿಂದ ಆದ ಅನ್ಯಾಯಕ್ಕೆ ಯಾರು ಹೊಣೆ ? 

Writer - ಅಬ್ದುಲ್ ರಹಿಮಾನ್ , ತಲಪಾಡಿ

contributor

Editor - ಅಬ್ದುಲ್ ರಹಿಮಾನ್ , ತಲಪಾಡಿ

contributor

Similar News