ಕಾಂಗ್ರೆಸ್ ನಾಯಕರ ವಿರುದ್ಧದ 5000 ಕೋ. ರೂ. ಮಾನನಷ್ಟ ಪ್ರಕರಣ ಹಿಂದೆಗೆದ ಅನಿಲ್ ಅಂಬಾನಿ

Update: 2019-05-22 16:23 GMT

ಹೊಸದಿಲ್ಲಿ, ಮೇ 22: ರಫೇಲ್ ಯುದ್ಧ ವಿಮಾನ ಒಪ್ಪಂದ ಕುರಿತ ಕಾಂಗ್ರೆಸ್ ನಾಯಕರ ಹೇಳಿಕೆ ಹಾಗೂ ನ್ಯಾಶನಲ್ ಹೆರಾಲ್ಡ್‌ನ ಲೇಖನದ ವಿರುದ್ಧ ಅಹ್ಮದಾಬಾದ್ ನ್ಯಾಯಾಲಯದಲ್ಲಿ ದಾಖಲಿಸಲಾದ 5,000 ಕೋಟಿ ರೂಪಾಯಿ ನಾಗರಿಕ ಮಾನನಷ್ಟ ಮೊಕದ್ದಮೆ ಹಿಂದೆ ತೆಗೆಯಲು ಅನಿಲ್ ಅಂಬಾನಿ ರಿಲಯನ್ಸ್ ಸಮೂಹ ನಿರ್ಧರಿಸಿದೆ.

ನಗರ ನಾಗರಿಕ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶ ಪಿ.ಜೆ. ತಾಮಕುವಲ ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ. ನ್ಯಾಯಾಲಯ ರಜೆಯ ಬಳಿಕ ತೆರೆದಾಗ ಪ್ರಕರಣವನ್ನು ಹಿಂದೆ ತೆಗೆಯುವ ಉದ್ದೇಶದ ಬಗ್ಗೆ ಪ್ರತಿವಾದಿ ವಕೀಲರಿಗೆ ತಿಳಿಸಲಾಗಿದೆ ಎಂದು ರಿಲಯನ್ಸ್ ಸಮೂಹದ ವಕೀಲ ರಸೀಶ್ ಪಾರಿಕ್ ಮಂಗಳವಾರ ಹೇಳಿದ್ದಾರೆ. ರಫೇಲ್ ಯುದ್ಧ ವಿಮಾನ ಒಪ್ಪಂದದ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಉದ್ದೇಶದಿಂದ ರಿಲಯನ್ಸ್ ಸಮೂಹ ಹಾಗೂ ಡಸ್ಸಾಲ್ಟ್ ಏವಿಯೇಷನ್ ನಡುವಿನ ಸ್ಥಳೀಯ ಪಾಲುದಾರಿಕೆ ಒಪ್ಪಂದಕ್ಕೆ ಸಂಬಂಧಿಸಿ ಕಾಂಗ್ರೆಸ್ ನಾಯಕರು ಹಾಗೂ ಕಾರ್ಪೊರೇಟ್ ಸಂಸ್ಥೆಯೊಂದು ಈ ಮಾನಹಾನಿಕರ ಹೇಳಿಕೆ ನೀಡಿತ್ತು ಎಂಬುದು ನಮ್ಮ ಭಾವನೆ. ರಫೇಲ್ ಒಪ್ಪಂದ ಕುರಿತ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ. ಆದುದರಿಂದ ಕಾಂಗ್ರೆಸ್ ನಾಯಕರು ಹಾಗೂ ಕಾರ್ಪೊರೇಟ್ ಸಂಸ್ಥೆ ವಿರುದ್ಧ ದಾಖಲಿಸಲಾಗಿದ್ದ ನಾಗರಿಕ ಮಾನನಷ್ಟ ಮೊಕದ್ದಮೆ ಹಿಂದೆ ತೆಗೆಯಲು ನಿರ್ಧರಿಸಲಾಯಿತು ರಿಲಯನ್ಸ್ ಸಮೂಹ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News