40 ವರ್ಷಗಳ ಬಳಿಕ ಕಾಡಿಗೆ ಮರಳಿದ ಹಕ್ಕಿ

Update: 2019-05-22 16:27 GMT

ಸಿಯೋಲ್ (ದಕ್ಷಿಣ ಕೊರಿಯ), ಮೇ 22: ಅಳಿವಿನಂಚಿನಲ್ಲಿರುವ ಪಕ್ಷಿಯೊಂದನ್ನು ದಕ್ಷಿಣ ಕೊರಿಯದ ಅಧಿಕಾರಿಗಳು ಬುಧವಾರ ಮತ್ತೆ ಕಾಡಿಗೆ ಬಿಟ್ಟಿದ್ದಾರೆ. ಕೊರಿಯ ಪರ್ಯಾಯ ದ್ವೀಪದಲ್ಲಿ ಈ ಪಕ್ಷಿಯು ನಾಲ್ಕು ದಶಕಗಳ ಹಿಂದೆ ಕಣ್ಮರೆಯಾಗಿತ್ತು.

‘ಕ್ರೆಸ್ಟಡ್ ಐಬಿಸ್’ ಎಂಬ ಹಕ್ಕಿಯನ್ನು ದಕ್ಷಿಣ ಕೊರಿಯದ ರಾಷ್ಟ್ರೀಯ ಸ್ಮಾರಕ ಸಂಖ್ಯೆ 198’ ಎಂಬುದಾಗಿ ಕರೆಯಲಾಗಿದೆ. ಅದು ಕಾಡಿನಲ್ಲಿ, ಅಂದರೆ ಪರ್ಯಾಯ ದ್ವೀಪವನ್ನು ಉತ್ತರ ಮತ್ತು ದಕ್ಷಿಣ ಕೊರಿಯಗಳಾಗಿ ವಿಭಜಿಸುವ ಸೇನಾರಹಿತ ವಲಯದಲ್ಲಿ 1979ರಲ್ಲಿ ಕೊನೆಯಾಗಿ ಪತ್ತೆಯಾಗಿತ್ತು.

ಚೀನಾ ಮತ್ತು ಜಪಾನ್ ದೇಶಗಳೂ ಈ ಹಕ್ಕಿಗಳ ನೈಸರ್ಗಿಕ ವಾಸಸ್ಥಾನಗಳಾಗಿವೆ. ಕೀಟನಾಶಕಗಳ ಬಳಕೆಯು ಅವುಗಳ ಆಹಾರ ಮೂಲಗಳನ್ನು ನಾಶಗೊಳಿಸಿದ ಹಿನ್ನೆಲೆಯಲ್ಲಿ ಅಳಿವಿನಂಚಿಗೆ ತಲುಪಿದ್ದವು.

ಬಳಿಕ ಅವುಗಳನ್ನು ಬಂಧನದಲ್ಲಿ ಬೆಳೆಸುವ ಕಾರ್ಯಕ್ರಮಗಳನ್ನು ದಕ್ಷಿಣ ಕೊರಿಯ ಆರಂಭಿಸಿತು. ಚೀನಾದಿಂದ ಪಡೆದ ಹಕ್ಕಿಗಳ ಮೂಲಕ ಅವುಗಳನ್ನು ಬಂಧನದಲ್ಲಿ ಬೆಳೆಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈಗ ಅವುಗಳ ಸಂಖ್ಯೆ 363 ತಲುಪಿದೆ.

ಅವುಗಳ ಪೈಕಿ 40ನ್ನು ಆರಿಸಿ ರಾಜಧಾನಿ ಸಿಯೋಲ್‌ನಿಂದ 350 ಕಿ.ಮೀ. ದೂರದಲ್ಲಿರುವ ಉಪೊ ಜೌಗುಭೂಮಿಯಲ್ಲಿ ಬಿಡಲಾಯಿತು ಎಂದು ದಕ್ಷಿಣ ಕೊರಿಯದ ಪರಿಸರ ಸಚಿವಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News