ಮತ ಎಣಿಕೆ ಸಂದರ್ಭ ಹಿಂಸಾಚಾರ ಸಾಧ್ಯತೆ: ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರದಿಂದ ಎಚ್ಚರಿಕೆ

Update: 2019-05-22 16:28 GMT

ಹೊಸದಿಲ್ಲಿ, ಮೇ 22: ಮತ ಎಣಿಕೆ ಸಂಬಂಧಿಸಿ ದೇಶದ ವಿವಿಧ ಭಾಗಗಳಲ್ಲಿ ಹಿಂಸಾಚಾರ ಸಂಭವಿಸುವ ಸಾಧ್ಯತೆ ಇರುವುದರಿಂದ ಗೃಹ ಸಚಿವಾಲಯ ಬುಧವಾರ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಮುನ್ನೆಚ್ಚರಿಕೆ ನೀಡಿದೆ.

ಜನರ ಮತಗಳನ್ನು ಕಳವುಗೈಯುವ ಯಾವುದೇ ಪ್ರಯತ್ನ ನಡೆದರೆ, ಬಿಹಾರದಲ್ಲಿ ರಕ್ತಪಾತ ನಡೆಯಲಿದೆ ಎಂದು ಕೇಂದ್ರದ ಮಾಜಿ ಸಚಿವ ಉಪೇಂದ್ರ ಕುಶ್ವಾಹ ಬೆದರಿಕೆ ಒಡ್ಡಿದ ದಿನದ ಬಳಿಕ ಕೇಂದ್ರ ಸರಕಾರದ ಈ ಮುನ್ನೆಚ್ಚರಿಕೆ ಹೊರಬಿದ್ದಿದೆ. ಕುಶ್ವಾಹ ಅವರ ರಕ್ತಪಾತದ ಹೇಳಿಕೆಗೆ ಕೇಂದ್ರ ಸಚಿವ ಹಾಗೂ ಬಿಹಾರದಲ್ಲಿ ಬಿಜೆಪಿ ಮಿತ್ರರಾದ ರಾಮ್ ವಿಲಾಸ್ ಪಾಸ್ವಾನ್ ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಎನ್‌ಡಿಎ ಮಿತ್ರ ಪಕ್ಷಗಳಿಗೆ ಆಯೋಜಿಸಿದ್ದ ಔತಣಕೂಟದ ಬಳಿಕ ಮಾತನಾಡಿದ ಅವರು, ಏಟಿಗೆ ಎದುರೇಟು ನೀಡಲಾಗುವುದು ಎಂದು ಘೋಷಿಸಿದರು.

ಕಾನೂನು ಸುವ್ಯವಸ್ಥೆ, ಶಾಂತಿ ಕಾಪಾಡುವಂತೆ ಹಾಗೂ ಸ್ಟ್ರಾಂಗ್ ರೂಮ್ ಹಾಗೂ ಮತ ಎಣಿಕೆ ಕೇಂದ್ರಗಳ ಭದ್ರತೆಗೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಗೃಹ ಸಚಿವಾಲಯ ಸೂಚನೆ ನೀಡಿದೆ ಎಂದು ಗೃಹ ಸಚಿವಾಲಯದ ಹೇಳಿಕೆ ತಿಳಿಸಿದೆ. ಮತ ಎಣಿಕೆಯ ದಿನಗಳಿಗಿಂತ ಮುನ್ನ ನೀಡಲಾದ ಕೆರಳಿಸುವ ಹೇಳಿಕೆಯನ್ನು ಗೃಹ ಸಚಿವಾಲಯ ಉಲ್ಲೇಖಿಸಿಲ್ಲ. ಆದರೆ, ಕರೆ ನೀಡಿದ ಹಾಗೂ ವಿವಿಧೆಡೆ ನೀಡಲಾದ ಹೇಳಿಕೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿದೆ.

ಆಡಳಿತಾರೂಡ ಮೈತ್ರಿ ಪಕ್ಷದ ಪರವಾಗಿ ಕಾನೂನು ಹಾಗೂ ನಿಯಮವನ್ನು ಬಳಕೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಚುನಾವಣಾ ಆಯೋಗದ ವಿರುದ್ಧ ಪ್ರತಿಪಕ್ಷಗಳು ತೀವ್ರ ಅಭಿಯಾನ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರದ ಈ ಅಸಾಮಾನ್ಯ ಹೇಳಿಕೆ ಹೊರಬಿದ್ದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News