ಇಂಡೋನೇಶ್ಯ: ವಿಡೋಡೊ ಪುನರಾಯ್ಕೆ ವಿರುದ್ಧ ದೇಶವ್ಯಾಪಿ ಪ್ರತಿಭಟನೆ

Update: 2019-05-22 16:32 GMT

ಜಕಾರ್ತ (ಇಂಡೋನೇಶ್ಯ), ಮೇ 22: ಇಂಡೋನೇಶ್ಯದಲ್ಲಿ ಅಧ್ಯಕ್ಷ ಜೊಕೊ ವಿಡೋಡೊ ಪುನರಾಯ್ಕೆಯಾಗಿರುವುದನ್ನು ಪ್ರತಿಭಟಿಸುತ್ತಿರುವ ಪ್ರತಿಪಕ್ಷಗಳ ಕಾರ್ಯಕರ್ತರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಘರ್ಷಣೆಯಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ ಹಾಗೂ 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ವಿಡೋಡೊ 55.5 ಶೇಕಡ ಮತಗಳನ್ನು ಗಳಿಸಿ ತನ್ನ ಸಮೀಪದ ಪ್ರತಿಸ್ಪರ್ಧಿ ಪ್ರಬೊವೊ ಸುಬಿಯಾಂಟೊ ಅವರನ್ನು ಸೋಲಿಸಿದ್ದಾರೆ ಎನ್ನುವ ಚುನಾವಣಾ ಫಲಿತಾಂಶ ಮಂಗಳವಾರ ಪ್ರಕಟಗೊಂಡ ಬಳಿಕ ದೇಶಾದ್ಯಂತ ಭಾರೀ ಪ್ರತಿಭಟನಾ ಪ್ರದರ್ಶನಗಳು ನಡೆಯುತ್ತಿವೆ.

ಪ್ರತಿಭಟನೆಗಳು ಶಾಂತಿಯುತವಾಗಿಯೇ ಆರಂಭಗೊಂಡವಾದರೂ, ಬೇಗನೇ ಹಿಂಸಾತ್ಮಕ ತಿರುವನ್ನು ಪಡೆದುಕೊಂಡಿತು. ಪ್ರತಿಭಟನಕಾರರು ಕಾರುಗಳಿಗೆ ಬೆಂಕಿ ಹಚ್ಚಿದರು ಹಾಗೂ ಪೊಲೀಸರತ್ತ ಪಟಾಕಿಗಳನ್ನು ಎಸೆದರು.

ಫಲಿತಾಂಶವನ್ನು ಪ್ರಶ್ನಿಸಿ ಸಾಂವಿಧಾನಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಪರಾಜಿತ ಅಭ್ಯರ್ಥಿ ಪ್ರಬೊವೊ ಅವರಿಗೆ ಶುಕ್ರವಾರದವರೆಗೆ ಕಾಲಾವಕಾಶವಿದೆ. ಬಳಿಕ, ನ್ಯಾಯಾಲಯವು ತನ್ನ ನಿರ್ಧಾರವನ್ನು 14 ದಿನಗಳಲ್ಲಿ ತಿಳಿಸುತ್ತದೆ.

ಪೊಲೀಸರು ಬುಧವಾರ ಪತ್ರಿಕಾಗೋಷ್ಠಿಯೊಂದನ್ನು ಏರ್ಪಡಿಸಿದರು. ಆದರೆ, ಹಿಂಸಾಚಾರದಲ್ಲಿ ಸತ್ತ ಅಥವಾ ಗಾಯಗೊಂಡವರ ಸಂಖ್ಯೆಯನ್ನು ಅವರು ಖಚಿತಪಡಿಸಲಿಲ್ಲ. ‘‘ಕೆಲವು ಗಾಯಗೊಂಡಿದ್ದಾರೆ ಹಾಗೂ ಕೆಲವರು ಸತ್ತಿದ್ದಾರೆ’’ ಎಂದು ಪೊಲೀಸರು ತಿಳಿಸಿದರು ಹಾಗೂ ಸಾವಿಗೆ ಕಾರಣಗಳನ್ನು ಖಚಿತಪಡಿಸಲು ನಿರಾಕರಿಸಿದರು.

69 ಮಂದಿ ಪ್ರತಿಭಟನಕಾರರನ್ನು ಬಂಧಿಸಲಾಗಿದೆ ಎಂದು ರಾಷ್ಟ್ರೀಯ ಪೊಲೀಸ್ ವಕ್ತಾರ ಎಂ. ಇಕ್ಬಾಲ್ ಹೇಳಿದರು.

ಪ್ರತಿಭಟನೆಗಳು ಮಂಗಳವಾರ ರಾತ್ರಿಯಿಡೀ ನಡೆದವು ಎಂದು ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News