ಉದ್ದೇಶಪೂರ್ವಕವಾಗಿ ಕೋರ್ಟ್ ದಾರಿತಪ್ಪಿಸಿದ ಕೇಂದ್ರ ಸರಕಾರ: ಅರ್ಜಿದಾರರ ಹೇಳಿಕೆ

Update: 2019-05-22 16:54 GMT

ಹೊಸದಿಲ್ಲಿ, ಮೇ 22: ರಫೇಲ್ ಒಪ್ಪಂದದ ಕುರಿತು ಉದ್ದೇಶಪೂರ್ವಕವಾಗಿ ಸುಳ್ಳು ಮಾಹಿತಿ ನೀಡುವ ಮೂಲಕ ಕೇಂದ್ರ ಸರಕಾರ ಸುಪ್ರೀಂಕೋರ್ಟ್‌ನ ದಾರಿ ತಪ್ಪಿಸಿದೆ ಎಂದು ರಫೇಲ್ ಒಪ್ಪಂದದ ಬಗ್ಗೆ ಅರ್ಜಿ ಸಲ್ಲಿಸಿದವರು ಆರೋಪಿಸಿದ್ದಾರೆ.

 ಮಾಜಿ ಕೇಂದ್ರ ಸಚಿವರಾದ ಯಶವಂತ್ ಸಿನ್ಹಾ ಮತ್ತು ಅರುಣ್ ಸೌರಿ, ನ್ಯಾಯವಾದಿ ಪ್ರಶಾಂತ್ ಭೂಷಣ್ ಸಹಿತ ಅರ್ಜಿದಾರರು ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ 41 ಪುಟಗಳ ಲಿಖಿತ ಸಲ್ಲಿಕೆಯಲ್ಲಿ , ರಫೇಲ್ ಖರೀದಿಯ ಕುರಿತ ವಿಷಯಗಳನ್ನು ಮರೆಮಾಚಿ, ಸುಳ್ಳು ಮಾಹಿತಿ ನೀಡಿರುವ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆಯೂ ಕೋರಲಾಗಿದೆ.

ಫ್ರಾನ್ಸ್‌ನ ಡಸಾಲ್ಟ್ ಏವಿಯೇಷನ್ ಸಂಸ್ಥೆಯಿಂದ ಖರೀದಿಸುವ 36 ರಫೇಲ್ ಜೆಟ್ ವ್ಯವಹಾರದ ಸಂಪೂರ್ಣ ದಾಖಲೆಯನ್ನು ನ್ಯಾಯಾಲಯಕ್ಕೆ ಒಪ್ಪಿಸುವ ಬದಲು ಕೇಂದ್ರ ಸರಕಾರ ಸೀಲ್ ಮಾಡಲಾದ ಕವರ್‌ಗಳಲ್ಲಿ ಎರಡು ಟಿಪ್ಪಣಿಗಳನ್ನು ಮಾತ್ರ ಸಲ್ಲಿಸಿದೆ. ಮಹತ್ವದ ದಾಖಲೆಪತ್ರ ತನ್ನ ಬಳಿಯಿದ್ದರೂ ನ್ಯಾಯಾಲಯದಿಂದ ಅದನ್ನು ಸರಕಾರ ಮರೆಮಾಚಿದೆ. ಕೇವಲ ಒಂದು ದಾಖಲೆ ಪತ್ರವನ್ನಲ್ಲ, ಸರಣಿ ದಾಖಲೆಗಳನ್ನು ಸರಕಾರ ಮರೆಮಾಚಿದೆ. ಸರಕಾರದ ಮೇಲೆ ನ್ಯಾಯಾಲಯ ವಿಶ್ವಾಸವಿರಿಸಿ, ಸರಕಾರ ಸಲ್ಲಿಸಿದ ದಾಖಲೆಗಳ ಆಧಾರದಲ್ಲಿ ಸುಪ್ರೀಂಕೋರ್ಟ್ ನಿರ್ಧಾರಕ್ಕೆ ಬಂದಿದೆ. ಸುಳ್ಳು ಮಾಹಿತಿ ಹಾಗೂ ಸತ್ಯವಿಷಯಗಳನ್ನು ಮರೆಮಾಚಿರುವುದು ಸಗಟು (ಒಟ್ಟು) ವಂಚನೆಯಾಗಿದ್ದು, ವಂಚನೆಯ ಮೂಲಕ ಪಡೆದಿರುವ ಆದೇಶವು ಅದೇ ಕಾರಣಕ್ಕೆ ಅನೂರ್ಜಿತ ಮತ್ತು ಅಸ್ತಿತ್ವ ಕಳೆದುಕೊಳ್ಳುತ್ತದೆ ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ಸಲ್ಲಿಸಿರುವ ಹೇಳಿಕೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News