ಇವಿಎಂ ಅಕ್ರಮಗಳಲ್ಲಿ ಸುಪ್ರೀಂಕೋರ್ಟ್ ಕೂಡಾ ಶಾಮೀಲಾಗಿದೆಯೇ: ಉದಿತ್ ರಾಜ್ ವಿವಾದಾತ್ಮಕ ಹೇಳಿಕೆ

Update: 2019-05-22 16:58 GMT

ಹೊಸದಿಲ್ಲಿ, ಮೇ 22: ವಿದ್ಯುನ್ಮಾನ ಮತಯಂತ್ರಗಳ ವಿಶ್ವಾಸಾರ್ಹತೆಯ ಬಗ್ಗೆ ವಾದ ವಿವಾದ ಮುಂದುವರಿದಿರುವಂತೆಯೇ ಕಾಂಗ್ರೆಸ್ ಮುಖಂಡ ಉದಿತ್ ರಾಜ್ ನೀಡಿರುವ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದೆ.

ಇವಿಎಂ ಜೊತೆ ಎಲ್ಲಾ ವಿವಿಪ್ಯಾಟ್‌ಗಳ ಪರಿಶೀಲನೆ ನಡೆಸಬೇಕೆಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿರುವುದನ್ನು ಪ್ರಶ್ನಿಸಿರುವ ಕಾಂಗ್ರೆಸ್ ಮುಖಂಡ, ಮಾಜಿ ಸಂಸದ ಉದಿತ್ ರಾಜ್, ಸುಪ್ರೀಂಕೋರ್ಟ್ ಕೂಡಾ ಇವಿಎಂ ಅಕ್ರಮಗಳಲ್ಲಿ ಶಾಮೀಲಾಗಿದೆಯೇ ಎಂಬ ಪ್ರಶ್ನೆ ಮೂಡುತ್ತಿದೆ. ಚುನಾವಣಾ ಪ್ರಕ್ರಿಯೆಯಿಂದಾಗಿ ಈಗಾಗಲೇ ಸರಕಾರದ ಎಲ್ಲಾ ಕಾರ್ಯಗಳೂ ಬಹುತೇಕ 3 ತಿಂಗಳು ನಿಗ್ರಹಿಸಲ್ಪಟ್ಟಿವೆ. ವಿವಿಪ್ಯಾಟ್‌ಗಳ ಪರಿಶೀಲನೆಯಿಂದ ಫಲಿತಾಂಶ 2-3 ದಿನ ವಿಳಂಬವಾಗಬಹುದು ಅಷ್ಟೇ ಎಂದು ಟ್ವಿಟರ್‌ನಲ್ಲಿ ಬರೆದಿದ್ದಾರೆ.

ಈ ಹೇಳಿಕೆ ವಿವಾದಕ್ಕೆ ಕಾರಣವಾಗುತ್ತಿರುವಂತೆಯೇ ಬಳಿಕ ಸ್ಪಷ್ಟನೆ ನೀಡಿರುವ ಅವರು, ಎಲ್ಲಾ ವಿವಿಪ್ಯಾಟ್ ರಶೀದಿಗಳ ಪರಿಶೀಲನೆಯಿಂದ ಫಲಿತಾಂಶ ಘೋಷಣೆ ವಿಳಂಬವಾಗಬಹುದು ಎಂದು ಸುಪ್ರೀಂಕೋರ್ಟ್ ತಿಳಿಸಿದೆ. ಚುನಾವಣಾ ಪ್ರಕ್ರಿಯೆಯಿಂದ ಕಳೆದ ಸುಮಾರು 3 ತಿಂಗಳಿಂದ ಅಭಿವೃದ್ಧಿ ಕಾರ್ಯಕ್ಕೆ ತಡೆ ಬಿದ್ದಿದೆ. ಹೀಗಿರುವಾಗ ಒಂದೆರಡು ದಿನ ವಿಳಂಬವಾದರೆ ಅದರಿಂದ ಅಂತಹ ಸಮಸ್ಯೆ ಏನಾಗುತ್ತದೆ ಎಂದಷ್ಟೇ ತಾನು ಪ್ರಶ್ನಿಸಿದ್ದೇನೆ. ನನ್ನ ಆತಂಕವನ್ನಷ್ಟೇ ಹೇಳಿಕೊಂಡಿದ್ದೇನೆ. ಸುಪ್ರೀಂಕೋರ್ಟ್‌ನ ವಿರುದ್ಧ ಆರೋಪ ಹೊರಿಸುವ ಉದ್ದೇಶ ತನ್ನದಲ್ಲ ಎಂರು ಹೇಳಿದ್ದಾರೆ.

ಬಿಜೆಪಿಯಿಂದ ಟಿಕೆಟ್ ನಿರಾಕರಿಸಲ್ಪಟ್ಟ ಕಾರಣ ಉದಿತ್ ರಾಜ್ ಇತ್ತೀಚೆಗಷ್ಟೇ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಇವಿಎಂಗಳಲ್ಲಿ ಅಕ್ರಮ ನಡೆಸಲು ಬಿಜೆಪಿಗೆ ಅವಕಾಶ ಮಾಡಿಕೊಡುವ ಏಕೈಕ ಉದ್ದೇಶದಿಂದ ಈ ಬಾರಿ 7 ಹಂತಗಳಲ್ಲಿ ಚುನಾವಣೆ ನಡೆಸಲಾಗುತ್ತಿದೆ ಎಂದವರು ಮಂಗಳವಾರ ಆರೋಪಿಸಿದ್ದರು. ‘‘ಬಿಜೆಪಿ ಈಗಾಗಲೇ ಇವಿಎಂಗಳಲ್ಲಿ ತನ್ನ ಕೈಚಳಕ ತೋರಿಸಿಯಾಗಿದೆ. ಅದಕ್ಕಾಗಿಯೇ 7 ಹಂತದಲ್ಲಿ ಚುನಾವಣೆ ನಡೆಸಲಾಗಿದೆ. ನೀವು ಎಷ್ಟೇ ಬೊಬ್ಬೆ ಹೊಡೆದರೂ, ಎಷ್ಟೇ ಪತ್ರ ಬರೆದರೂ ನಿಮ್ಮನ್ನು ಯಾರೂ ಕೇಳುವವರಿಲ್ಲ. ನೀವು ರಸ್ತೆಗಿಳಿದು ಹೋರಾಡಬೇಕು. ಬ್ರಿಟಿಷರ ಗುಲಾಮರಾಗಿರುವ ಇವರಿಂದ ದೇಶವನ್ನು ರಕ್ಷಿಸಲು ಹೊಸ ಅಭಿಯಾನವೊಂದರ ಅಗತ್ಯವಿದೆ. ಚುನಾವಣಾ ಆಯೋಗವೂ ಬಿಕರಿಯಾಗಿದೆ’’ ಎಂದವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News