ವಿದ್ವಾಂಸರು ಇನ್ನೊಬ್ಬರ ಬಗ್ಗೆ ಅಸಹನೆಯನ್ನು ಬಿಡಬೇಕು: ಡಾ.ಉಪ್ಪಂಗಳ ರಾಮ ಭಟ್ಟ

Update: 2019-05-22 17:02 GMT

ಉಡುಪಿ, ಮೇ 22: ವಿದ್ವಾಂಸರು ಇನ್ನೊಬ್ಬರ ಬಗ್ಗೆ ಇರುವ ತಮ್ಮ ಅಸಹನೆ ಯನ್ನು ಬಿಡಬೇಕು. ಇತರ ವಿದ್ವಾಂಸರನ್ನು ಅರ್ಥಮಾಡಿಕೊಳ್ಳುವ ಗುಣ ಬೆಳೆಸಿಕೊಳ್ಳಬೇಕು. ಅವರೊಂದಿಗೆ ಚರ್ಚಿಸಿ ತಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳ ಬೇಕು ಎಂದು ಹಿರಿಯ ಸಾಹಿತಿ ಪ್ರೊ. ಉಪ್ಪಂಗಳ ರಾಮ ಭಟ್ಟ ಹೇಳಿದ್ದಾರೆ.

ಇಲ್ಲಿನ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಬುಧವಾರ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಮಣಿಪಾಲದ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ (ಮಾಹೆ) ಇವುಗಳ ವತಿಯಿಂದ ನೀಡಲಾದ 2019ನೇ ಸಾಲಿನ ‘ಪ್ರೊ. ತಾಳ್ತಜೆ ಕೇಶವ ಭಟ್ಟ ಪ್ರಶಸ್ತಿ’ಯನ್ನು ಸ್ವೀಕರಿಸಿ ಅವರು ಮಾತನಾಡುತಿದ್ದರು.

ಇಂದು ಕೆಟ್ಟ ಜನರು ವಿಜೃಂಭಿಸುತಿದ್ದಾರೆ. ಉತ್ತಮ ವಿದ್ಯಾವಂತರು ಬೆಳಕಿಗೆ ಬರಲು ಸಾಧ್ಯವಾಗುತ್ತಿಲ್ಲ. ಅವರ ಸಾಧನೆಗಳೂ ಬೆಳಕಿಗೆ ಬರುತ್ತಿಲ್ಲ ಎಂದು ವಿಷಾಧಿಸಿದ ರಾಮ ಭಟ್ಟರು, ಇಂದು ಪುಸ್ತಕ ಓದುವ ಹವ್ಯಾಸವೇ ಮರೆಯಾ ಗುತ್ತಿದೆ. ಪುಸ್ತಕ ಜ್ಞಾನವನ್ನು ಪಸರಿಸುವ ಮಾಧ್ಯಮವಾಗಿ ಇಂದೂ ಉಳಿದು ಕೊಂಡಿದೆ. ಪುಸ್ತಕ ಸಂಸ್ಕೃತಿ ಅಳಿದರೆ ಮಾನವೀಯತೆಯೇ ಅಳಿದಂತೆ ಎಂದವರು ಅಭಿಪ್ರಾಯ ಪಟ್ಟರು.

ಸಾಕಷ್ಟು ಜ್ಞಾನವನ್ನು ಸಂಗ್ರಹಿಸಿ ಅದನ್ನು ಪ್ರಸಾರಿಸುವ ಕೆಲಸವಾಗಬೇಕು. ಜ್ಞಾನವನ್ನು ಎಂದಿಗೂ ಗೌರವಿಸಬೇಕು. ಅದನ್ನು ಹತ್ತಿಕ್ಕುವ ಕೆಲಸ ಮಾಡ ಬಾರದು. ಯಾವ ವಿದ್ವಾಂಸರು ಕೂಡ ತಾವು ಪೂರ್ಣರು ಎಂಬ ಅಹಂನ್ನು ಹೊಂದಬಾರದು. ಜ್ಞಾನಕ್ಕೆ ಸಮಾನಾದದ್ದು ಯಾವುದೂ ಇಲ್ಲವಾದ್ದರಿಂದ ಜ್ಞಾನ ಪ್ರಸರಣೆಯೇ ವಿದ್ವಜ್ಜನರ ಗುರಿಯಾಗಬೇಕು.ಸತ್ಯ ಸಂಶೋಧನೆಯೇ ಪ್ರತಿಯೊಬ್ಬ ವಿದ್ವಾಂಸರ ಕರ್ತವ್ಯ. ಆದುದರಿಂದ ತಮ್ಮ ನಡುವಿನ ಮೇಲು ಕೀಳುಭಾವವನ್ನು ಬಿಟ್ಟು ಒಬ್ಬರನೊಬ್ಬರು ಅರಿಯುವ ಕಾರ್ಯ ಆಗಬೇಕು ಎಂದರು.

ಕಾರ್ಯಕ್ರಮದಲ್ಲಿ ‘ಕಾಸರಗೋಡು ವಿದ್ವತ್ ಪರಂಪರೆ’ ಕುರಿತು ವಿಶೇಷ ಉಪನ್ಯಾಸ ನೀಡಿದ ಪ್ರಾಧ್ಯಾಪಕ ಡಾ.ವರದರಾಜ್ ಚಂದ್ರಗಿರಿ ಅವರು, ದ.ಕ.-ಕಾಸರಗೋಡು, ಕರ್ನಾಟಕ-ಕೇರಳ ಗಡಿ, ಆಡಳಿತ ಹಾಗೂ ರಾಜಕೀಯ ಕಾರಣಗಳಿಗಾಗಿ ಇರುವುದೇ ಹೊರತು ಅದು ಸಾಂಸ್ಕೃತಿಕ ಗಡಿ ಅಲ್ಲ. ಪ್ರತಿದಿನ ಓಡಾಡುವವರಿಗೆ ಈ ಗಡಿ ಕಾಣುವುದಿಲ್ಲ ಎಂದರು.

ಕಾಸರಗೋಡಿನ ಕನ್ನಡ-ಸಂಸ್ಕೃತ ವಿದ್ವತ್ ಪರಂಪರೆಗೆ 11ನೇ ಶತಮಾನದ ಜಯಸಿಂಹನ ತಳಂಗೆರೆ ಶಾಸನ ಮೊದಲ ಮೈಲಿಗಲ್ಲಾಗಿ ಕಾಣಿಸಿ ಕೊಳ್ಳುತ್ತದೆ. ಅನಂತರ ಈ ಭಾಗದಲ್ಲಿ ಸಂಸ್ಕೃತ-ಕನ್ನಡ ಪಂಡಿತ ಪರಂಪರೆ ಬೆಳೆದುಬಂದ ಕುರಿತು ಸೋದಾಹರಣವಾಗಿ ವಿವರಿಸಿದರು.

ಕೇಶವ ಪ್ರಶಸ್ತಿ ಆಯ್ಕೆ ಸಮಿತಿಯ ಡಾ.ತಾಳ್ತಜೆ ವಸಂತ ಕುಮಾರ್ ಅವರು ಪ್ರಶಸ್ತಿ ಪುರಸ್ಕೃತರ ಅಭಿನಂದನಾ ಭಾಷಣದಲ್ಲಿ ತಾಳ್ತಜೆ ಕೇಶವ ಭಟ್ಟರು ಮತ್ತು ಡಾ. ಉಪ್ಪಂಗಳ ರಾಮಟ್ಟರು ಜಾತಿ, ಭಾಷೆ ಮತ್ತು ಪಂಗಡವನ್ನು ಮೀರಿ ಯೋಚಿಸಿದ ವಿದ್ವಾಂಸರು ಎಂದು ಬಣ್ಣಿಸಿದರು.

ಮಾಹೆಯ ರಿಜಿಸ್ಟ್ರಾರ್ ಡಾ.ನಾರಾಯಣ ಸಭಾಹಿತ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಮಾಹೆ ಕಲೆ ಮತ್ತು ಸಾಹಿತ್ಯ ಅಧ್ಯಯನಕ್ಕೆ ಪೂರಕ ವಾದ ಎಲ್ಲಾ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಲು ಸಿದ್ಧವಿದೆ ಎಂದರು. ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್‌ನ ಆಡಳಿತಾಧಿಕಾರಿ ಡಾ.ಎಚ್.ಶಾಂತಾರಾಮ್ ಅಧ್ಯಕ್ಷತೆ ವಹಿಸಿದ್ದರು.

ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಸಂಯೋಜಕರಾದ ಪ್ರೊ. ವರದೇಶ ಹಿರೇಗಂಗೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಕೇಂದ್ರದ ಆಡಳಿತಾಧಿಕಾರಿ ಪ್ರೊ.ಎಂ.ಎಲ್. ಸಾಮಗ ವಂದಿಸಿ, ಭ್ರಮರಿ ಶಿವಪ್ರಕಾಶ್ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News