ಮೇ 28ರ ವರೆಗೆ ಬಿಜೆಪಿ ಅಭ್ಯರ್ಥಿಗೆ ಬಂಧನದಿಂದ ರಕ್ಷಣೆ ನೀಡಿದ ಸುಪ್ರೀಂ

Update: 2019-05-22 17:33 GMT

ಹೊಸದಿಲ್ಲಿ, ಮೇ 22: ರಾಜ್ಯ ಪೊಲೀಸ್ ದಾಖಲಿಸಿದ ವಿವಿಧ ಕ್ರಿಮಿನಲ್ ಪ್ರಕರಣಗಳ ಹಿನ್ನೆಲೆಯಲ್ಲಿ ಪಶ್ಚಿಮಬಂಗಾಳದ ಬೈರಕ್‌ಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರ್ಜುನ್ ಸಿಂಗ್ ಅವರಿಗೆ ಮೇ 28ರ ವರೆಗೆ ಸುಪ್ರೀಂ ಕೋರ್ಟ್ ಬುಧವಾರ ಬಂಧನದಿಂದ ರಕ್ಷಣೆ ನೀಡಿದೆ.

 ಸುಮಾರು 20 ಕ್ರಿಮಿನಲ್ ಪ್ರಕರಣಗಳು ದಾಖಲಿಸಿರುವುದಕ್ಕೆ ಸಂಬಂಧಿಸಿ ಅರ್ಜುನ್ ಸಿಂಗ್ ಅವರನ್ನು ಮೇ 28ರ ವರೆಗೆ ರಾಜ್ಯ ಪೊಲೀಸರು ಬಂಧಿಸಲಾರರು ಎಂದು ನ್ಯಾಯಮೂರ್ತಿ ಅರುಣ್ ಮಿಶ್ರಾ ಹಾಗೂ ಎಂ.ಆರ್. ಶಾ ಅವರನ್ನು ಒಳಗೊಂಡ ರಜಾಕಾಲದ ಪೀಠ ಸ್ಪಷ್ಟಪಡಿಸಿದೆ. ಮೇ 23ರ ಮತ ಎಣಿಕೆಯಲ್ಲಿ ಅರ್ಜುನ್ ಸಿಂಗ್ ಅವರಿಗೆ ಪಾಲ್ಗೊಳ್ಳಲು ಅನುಮತಿ ನೀಡಿರುವ ಪೀಠ, ಅಂದು ಪಶ್ಚಿಮಬಂಗಾಳದಾದ್ಯಂತ ನಡೆಯಲಿರುವ ರಾಜ್ಯ ವ್ಯಾಪಿ ಅನಿರ್ಧಿಷ್ಟಾವದಿ ಮುಷ್ಕರನವನ್ನು ಉಲ್ಲೇಖಿಸಿತು. ಸಿಂಗ್‌ಗೆ ನೀಡಲಾದ ಬಂಧನದಿಂದ ರಕ್ಷಣೆ ಮೇ 28ರಂದು ಅಂತ್ಯಗೊಳ್ಳಲಿದೆ. ತರುವಾಯ ಅವರು ಸಂಬಂಧಿತ ನ್ಯಾಯಾಲಯದ ಮುಂದೆ ಜಾಮೀನಿಗೆ ಅರ್ಜಿ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ. ಸಿಂಗ್ ಅವರ ಮನವಿಯ ವಿಚಾರಣೆಗೆ ಪೂರ್ವಾಹ್ನ ಪೀಠ ಒಪ್ಪಿಕೊಂಡಿತು ಹಾಗೂ ಪಶ್ಚಿಮಬಂಗಾಳದಲ್ಲಿ ಲೋಕಸಭಾ ಚುನಾವಣೆ ಸಂದರ್ಭ ಸಂಭವಿಸಿದ ಹಿಂಸಾಚಾರವನ್ನು ಗಮನಕ್ಕೆ ತೆಗೆದುಕೊಂಡಿತು.

 ‘‘ಅಲ್ಲಿ ಹಿಂಸಾಚಾರ ನಡೆದಿದೆ. ನಿಮಗೆ (ಸಿಂಗ್ ಅವರ ವಕೀಲ) ಅದು ಚೆನ್ನಾಗಿ ಗೊತ್ತಿದೆ’’ ಎಂದು ಮನವಿಯ ವಿಚಾರಣೆಗೆ ಒಪ್ಪಿಕೊಂಡ ಪೀಠ ಹೇಳಿತು. ಮತ ಎಣಿಕೆಯಿಂದ ದೂರ ಇರಿಸಲು ಹಾಗೂ ರಾಜಕೀಯ ಉದ್ದೇಶದಿಂದ ಎಪ್ರಿಲ್ 4ರಿಂದ ಮೇ 20ರ ವರೆಗೆ ಅವರ ವಿರುದ್ಧ ಸುಮಾರು 20 ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಅರ್ಜುನ್ ಸಿಂಗ್ ಪರವಾಗಿ ಹಾಜರಾದ ಹಿರಿಯ ವಕೀಲ ರಂಜಿತ್ ಕುಮಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News