ಹಸಿರು ಭಾರತಕ್ಕೆ ಮುನ್ನುಡಿ: 2025ರ ಬಳಿಕ ಎಲೆಕ್ಟ್ರಿಕ್ ವಾಹನ ಯುಗ

Update: 2019-05-23 03:33 GMT

ಹೊಸದಿಲ್ಲಿ: ಹಸಿರು ಭಾರತ ನಿರ್ಮಾಣದ ನಿಟ್ಟಿನಲ್ಲಿ ಎಲೆಕ್ಟ್ರಿಕ್ ವಾಹನಗಳ ಅಳವಡಿಕೆಗೆ ಕಾರ್ಯತಂತ್ರ ರೂಪಿಸಿರುವ ಸರ್ಕಾರ 2023ರ ಎಪ್ರಿಲ್‍ನಿಂದ ದೇಶದಲ್ಲಿ ಕೇವಲ ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳ ಮಾರಾಟಕ್ಕಷ್ಟೇ ಅನುಮತಿ ನೀಡುವ ನಿರೀಕ್ಷೆ ಇದೆ. ಅಂತೆಯೇ 2025ರಿಂದ 150 ಸಿಸಿ ಎಂಜಿನ್ ಸಾಮಥ್ರ್ಯವರೆಗಿನ ದ್ವಿಚಕ್ರ ವಾಹನಗಳು ಕೂಡಾ ಎಲೆಕ್ಟ್ರಿಕ್ ವಾಹನಗಳಾಗಿರಬೇಕು ಎನ್ನುವುದನ್ನು ಕಡ್ಡಾಯಪಡಿಸುವ ಚಿಂತನೆ ನಡೆದಿದೆ.

ಈ ಎರಡು ವರ್ಗದ ವಾಹನಗಳಿಂದ ಆಗುವ ಮಾಲಿನ್ಯವನ್ನು ತಪ್ಪಿಸುವ ನಿಟ್ಟಿನಲ್ಲಿ ಉನ್ನತ ಮಟ್ಟದ ಸರ್ಕಾರಿ ಸಮಿತಿ ಈ ಕ್ರಾಂತಿಕಾರಕ ಶಿಫಾರಸ್ಸುಗಳನ್ನು ಮಾಡಿದೆ. ಈ ಎರಡು ವರ್ಗದ ವಾಹನಗಳ ಮಾರಾಟ ವರ್ಷಕ್ಕೆ ಎರಡು ಕೋಟಿಗೂ ಅಧಿಕವಿದ್ದು, ಭಾರತೀಯ ರಸ್ತೆಗಳ ಒಟ್ಟು ವಾಹನಗಳ ಶೇಕಡ 75ರಷ್ಟು ವಾಹನಗಳು ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳಾಗಿವೆ.

ಆದರೆ ಈ ದಿನಾಂಕದವರೆಗೂ ನೋಂದಣಿಯಾದ ವಾಹನಗಳಿಗೆ ಇದು ಅನ್ವಯಿಸುವುದಿಲ್ಲ. ಅಂಥ ಪೆಟ್ರೋಲ್ ವಾಹನಗಳು ಉಳಿದುಕೊಳ್ಳಲಿವೆ. ಮುಂದಿನ ವರ್ಷದ ಎಪ್ರಿಲ್‍ನಿಂದ ಬಿಎಸ್-6 ಗುಣಮಟ್ಟದ ವಾಹನಗಳ ತಯಾರಿಕೆಗೆ ದೊಡ್ಡ ಪ್ರಮಾಣದ ಹಣ ಹೂಡಿಕೆ ಮಾಡಿರುವ ವಾಹನ ಉದ್ಯಮಕ್ಕೆ ಎಲೆಕ್ಟ್ರಿಕ್ ವಾಹನಗಳಿಗೆ ಬದಲಾಯಿಸಿಕೊಳ್ಳಲು ನಾಲ್ಕರಿಂದ ಆರು ವರ್ಷ ಕಾಲಾವಕಾಶ ನೀಡಲಾಗುತ್ತಿದೆ ಎಂದು ಉನ್ನತ ಮೂಲಗಳು ಹೇಳಿವೆ.

ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್ ನೇತೃತ್ವದ ಅಂತರ ಸಚಿವಾಲಯ ಚಾಲನಾ ಸಮಿತಿ, ಸರಕು ಸಾಗಾಣಿಕೆ ವಾಹನಗಳು, ಶಾಲೆ ಮತ್ತು ಸಿಟಿ ಬಸ್ಸುಗಳಿಗೂ ಇಂಥದ್ದೇ ಗಡುವು ನೀಡುವ ಸಾಧ್ಯತೆ ಇದೆ. ಆದರೆ ಈ ಸಲಹೆಗಳು ವಾಹನ ಉದ್ಯಮಕ್ಕೆ ಪಥ್ಯವಾಗುವ ಸಾಧ್ಯತೆ ಕಡಿಮೆ. ಪೆಟ್ರೋಲ್ ಅಥವಾ ಡೀಸೆಲ್ ವಾಹನಗಳ ಬದಲಾಗಿ ಎಲೆಕ್ಟ್ರಿಕ್ ವಾಹನಗಳನ್ನು ಕೈಗೆಟುಕುವಂತೆ ಮಾಡುವ ನಿಟ್ಟಿನಲ್ಲಿ, ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳಿಗೆ ಪ್ರತಿ ಕಿಲೋವ್ಯಾಟ್ ಗಂಟೆಗೆ ನೀಡುವ ನೇರ ಸಬ್ಸಿಡಿಯನ್ನು 20 ಸಾವಿರ ರೂಪಾಯಿಗೆ ಹೆಚ್ಚಿಸುವ ಪ್ರಸ್ತಾಪವನ್ನೂ ಸಮಿತಿ ಮುಂದಿಟ್ಟಿದೆ. ಇದರ ಜತೆಗೆ ಪೆಟ್ರೋಲ್ ಹಾಗೂ ಡೀಸೆಲ್ ವಾಹನಗಳಿಗೆ ಕಟ್ಟುನಿಟ್ಟಿನ ಇಂಧನ ಕ್ಷಮತೆ ಮಾನದಂಡವನ್ನು ನಿಗದಿಪಡಿಸಲು ಕೂಡಾ ಸರ್ಕಾರ ಮುಂದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News