ದ.ಕ.ಲೋಕಸಭಾ ಕ್ಷೇತ್ರ: ನಳಿನ್ ಕುಮಾರ್ ಕಟೀಲ್‌ಗೆ ಭರ್ಜರಿ ಗೆಲುವು

Update: 2019-05-23 08:49 GMT

ಮಂಗಳೂರು, ಮೇ 23: ದ.ಕ. ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಭರ್ಜರಿ ಗೆಲುವು ಸಾಧಿಸಿದ್ದು, ಅಧಿಕೃತ ಫಲಿತಾಂಶ ಪ್ರಕಟಿಸಲು ಮಾತ್ರ ಬಾಕಿ ಇದೆ.

ಮೊದಲ ಸುತ್ತಿನಲ್ಲೇ ಭಾರೀ ಮುನ್ನಡೆ ಸಾಧಿಸಿಕೊಂಡು ಬಂದಿದ್ದ ನಳಿನ್ ಬಳಿಕ ಗೆಲುವಿನ ಅಂತರ ಹೆಚ್ಚಿಸಿಕೊಳ್ಳುವ ಮೂಲಕ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. ಇದರೊಂದಿಗೆ ಬಿಜೆಪಿ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿದ್ದರೆ, ಕಾಂಗ್ರೆಸ್ ನಾಯಕರು ಮೌನಕ್ಕೆ ಶರಣಾಗಿದ್ದಾರೆ.

ಈಗಾಗಲೆ ಎರಡು ಬಾರಿ ಜಯ ಗಳಿಸಿದ್ದ ನಳಿನ್‌ರನ್ನು ಸೋಲಿಸಲು ಕಾಂಗ್ರೆಸ್ ಸಮರ್ಥ ಅಭ್ಯರ್ಥಿಯನ್ನೇ ಕಣಕ್ಕಿಳಿಸಿದೆ ಎಂದು ಬಿಂಬಿಸಲಾಗಿತ್ತು. ಆದರೆ, ಫಲಿತಾಂಶ ಅನಿರೀಕ್ಷಿತ ತಿರುವು ಪಡೆದಿದೆ. ಕಳೆದ ಬಾರಿ 1,43,709 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದ ನಳಿನ್ ಈ ಬಾರಿ ತನ್ನ ಹಿಂದಿನ ದಾಖಲೆಯನ್ನು ಮುರಿದು ಹ್ಯಾಟ್ರಿಕ್ ಗೆಲುವಿನ ನಗೆ ಬೀರಿದ್ದಾರೆ.

ನಗರದ ಮಲ್ಲಿಕಟ್ಟೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯ ಮುಂದೆ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಮತ ಎಣಿಕೆಯ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಹೇರಲಾಗಿದ್ದರೂ ಕೂಡ ಬಿಜೆಪಿ ಕಾರ್ಯಕರ್ತರು ಸಂಭ್ರಮ ಆಚರಿಸಿ ಗಮನ ಸೆಳೆದರು.

ಸುನಾಮಿಯಾಗಿ ಹೊರ ಹೊಮ್ಮಿದ ಮೋದಿ ಅಲೆ: ನಳಿನ್ 

2014ರ ಲೋಕಸಭಾ ಚುನಾವಣೆಯಲ್ಲಿ ಇದ್ದ ಮೋದಿ ಅಲೆ ಈ ಬಾರಿ ಸುನಾಮಿಯಾಗಿ ಹೊರಹೊಮ್ಮಿದೆ ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಹೇಳಿದರು.

ಮತ ಎಣಿಕೆ ಕೇಂದ್ರದ ಹೊರಗೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಎನ್ ಡಿಎ ಮೈತ್ರಿಕೂಟಕ್ಕೆ ಭಾರಿ ಬಹುಮತ ದೊರಕಿದೆ. ಪ್ರಧಾನಿ ಮೋದಿಯವರ ಐದು ವರ್ಷಗಳ ಆಡಳಿತಕ್ಕೆ ಜನರ‌ ಬೆಂಬಲ‌ ದೊರಕಿದೆ. ದೇಶದ ಅಭಿವೃದ್ಧಿ, ರಕ್ಷಣೆ ಮತ್ತು ಆಡಳಿತ ನಿರ್ವಹಣೆಗೆ ಮೋದಿಯೇ ಸಮರ್ಥ ನಾಯಕ ಎಂಬುದನ್ನು ಜನರು ಒಪ್ಪಿದ್ದಾರೆ. ಈ ಕಾರಣದಿಂದಾಗಿಯೇ ಅಭೂತಪೂರ್ವ ಬೆಂಬಲ ನೀಡಿದ್ದಾರೆ ಎಂದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News