ಗೋವಾ ವಿಧಾನಸಭಾ ಉಪ ಚುನಾವಣೆ: ಪಾರಿಕ್ಕರ್ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಗೆಲುವು

Update: 2019-05-23 08:50 GMT

ಪಣಜಿ, ಮೇ 23: ಗೋವಾದ ಮಾಜಿ ಸಿಎಂ ಹಾಗೂ ಮಾಜಿ ರಕ್ಷಣಾ ಸಚಿವ ದಿವಂಗತ ಮನೋಹರ್ ಪರಿಕ್ಕರ್ ಅವರು 1994ರಿಂದ ಪ್ರತಿನಿಧಿಸಿದ್ದ ಪಣಜಿ ವಿಧಾನಸಭಾ ಕ್ಷೇತ್ರ ಈ ಉಪಚುನಾವಣೆಯಲ್ಲಿ ಬಿಜೆಪಿಯ ಕೈ ತಪ್ಪಿ ಕಾಂಗ್ರೆಸ್ ತೆಕ್ಕೆಗೆ ಸೇರಿದೆ.

ಕಾಂಗ್ರೆಸ್ ಪಕ್ಷದ ಅಟನಸಿಯೋ ಮೊನ್ಸೆರ್ರೇಟ್ ಅವರು ಬಿಜೆಪಿಯ ಸಿದ್ಧಾರ್ಥ್ ಕುನ್ಸಲಿಯೆಂಕರ್ ಅವರ ವಿರುದ್ಧ  ಇಲ್ಲಿ 1,758 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗೆ 8,758 ಮತಗಳು ಲಭಿಸಿದ್ದರೆ ಬಿಜೆಪಿ ಅಭ್ಯರ್ಥಿಗೆ 6,990 ಮತಗಳು ದೊರಕಿದ್ದವು. ಎಎಪಿಯ ವಾಲ್ಮೀಕಿ ನಾಯ್ಕ್ ಹಾಗೂ ಗೋವಾ ಸುರಕ್ಷಾ ಮಂಚ್ ಅಭ್ಯರ್ಥಿ ಸುಭಾಶ್ ವೆಲಿಂಗ್ಕರ್ ಕ್ರಮವಾಗಿ 236 ಹಾಗೂ 516 ಮತಗಳನ್ನು ಗಳಿಸಿದ್ದಾರೆ.

ಆದರೆ ಶಿರೋಡಾ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸುಭಾಶ್ ಶಿರೋಡ್ಕರ್ ಅವರು ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷದ ದೀಪಕ್ ಧವಳೀಕರ್ ಅವರ ವಿರುದ್ಧ 66 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.

ಪಣಜಿ ಕ್ಷೇತ್ರದ ಶಾಸಕ ಹಾಗೂ ಅಂದಿನ ಸಿಎಂ ಮನೋಹರ್ ಪರಿಕ್ಕರ್ ಅವರು ಮಾರ್ಚ್ ತಿಂಗಳಲ್ಲಿ ನಿಧನರಾದ ನಂತರ ಈ ಕ್ಷೇತ್ರ ತೆರವಾಗಿತ್ತು. 1994ರಲ್ಲಿ ಇಲ್ಲಿಂದ ಮೊದಲು ಗೆದ್ದಿದ್ದ ಪರಿಕ್ಕರ್ 2014ರ ತನಕ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ನಂತರ ಕೇಂದ್ರ ರಕ್ಷಣಾ ಸಚಿವರಾಗಿ ಅವರು ನೇಮಕಗೊಂಡಿದ್ದರು. 2018ರ ಚುನಾವಣೆಯಲ್ಲಿ ಅವರು ಮತ್ತೆ ಪಣಜಿ ಶಾಸಕರಾಗಿ ಆಯ್ಕೆಯಾಗಿದ್ದರು.

ಪಣಜಿಯಲ್ಲಿ ಸೋಲು ಬಿಜೆಪಿಗೆ ದೊಡ್ಡ ಹಿನ್ನಡೆಯೆಂದೇ ತಿಳಿಯಲಾಗಿದೆ. ಪರಿಕ್ಕರ್ ಅವರ ಪುತ್ರ ಉತ್ಪಲ್ ಇಲ್ಲಿಂದ ಸ್ಪರ್ಧಿಸಲು ಬಯಸಿದ್ದರೂ ಪಕ್ಷದ ನಾಯಕತ್ವ ಅವರಿಗೆ ಟಿಕೆಟ್ ನಿರಾಕರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News