ಅಫ್ಘಾನಿಸ್ತಾನದಲ್ಲಿ 300 ಲಷ್ಕರ್ ಉಗ್ರರು ಸಕ್ರಿಯ: ಅಮೆರಿಕ ವರದಿ

Update: 2019-05-23 15:10 GMT

ವಾಶಿಂಗ್ಟನ್, ಮೇ 23: ಅಫ್ಘಾನಿಸ್ತಾನದಲ್ಲಿರುವ ವಿದೇಶಿ ಪಡೆಗಳಿಗೆ ಅತ್ಯಂತ ಹೆಚ್ಚಿನ ಬೆದರಿಕೆಯನ್ನು ಒಡ್ಡುತ್ತಿರುವ ಮೂರು ಭಯೋತ್ಪಾದಕ ಸಂಘಟನೆಗಳ ಪೈಕಿ ಪಾಕಿಸ್ತಾನದ ಲಷ್ಕರೆ ತಯ್ಯಬ (ಎಲ್‌ಇಟಿ)ವೂ ಒಂದು ಎಂದು ಅಮೆರಿಕದ ರಕ್ಷಣಾ ಇಲಾಖೆಯ ವರದಿಯೊಂದು ತಿಳಿಸಿದೆ. ಈ ಸಂಘಟನೆಗೆ ಸೇರಿದ ಕನಿಷ್ಠ 300 ಭಯೋತ್ಪಾದಕರು ಅಫ್ಘಾನಿಸ್ತಾನದಲ್ಲಿದ್ದಾರೆ ಎಂದು ಅದು ಹೇಳಿದೆ.

ಜಾಗತಿಕ ಭಯೋತ್ಪಾದಕ ಸಂಘಟನೆ ಎಂಬುದಾಗಿ ಅಮೆರಿಕ ಮತ್ತು ವಿಶ್ವಸಂಸ್ಥೆಗಳು ಘೋಷಿಸಿರುವ ಈ ಉಗ್ರ ಸಂಘಟನೆಯು 2008ರಲ್ಲಿ ಮುಂಬೈಯಲ್ಲಿ ಉಗ್ರ ದಾಳಿಯನ್ನು ನಡೆಸಿತ್ತು ಹಾಗೂ ಈ ದಾಳಿಯಲ್ಲಿ 166 ಮಂದಿ ಪ್ರಾಣ ಕಳೆದುಕೊಂಡಿದ್ದರು.

ಲಷ್ಕರೆ ತಯ್ಯಬದ ಮುಖ್ಯಸ್ಥ ಹಫೀಝ್ ಸಯೀದ್‌ನ ತಲೆಗೆ ಅಮೆರಿಕ 10 ಮಿಲಿಯ ಡಾಲರ್ (ಸುಮಾರು 70 ಕೋಟಿ ರೂಪಾಯಿ) ಬಹುಮಾನ ಘೋಷಿಸಿದೆ.

ಅಫ್ಘಾನಿಸ್ತಾನದಲ್ಲಿ ಅಫ್ಘಾನ್ ತಾಲಿಬಾನ್ ಪರವಾಗಿ ಒಂದು ದಶಕಕ್ಕೂ ಅಧಿಕ ಅವಧಿಯಲ್ಲಿ ಲಷ್ಕರೆ ತಯ್ಯಬ ಭಯೋತ್ಪಾದಕರು ವಿದೇಶಿಯರ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ ಎನ್ನುವ ವರದಿಗಳು ಈಗಾಗಲೇ ಬಂದಿವೆ.

ಆದಾಗ್ಯೂ, ಈ ಗುಂಪು ಅಫ್ಘಾನಿಸ್ತಾನದಲ್ಲಿ ಒಡ್ಡಿರುವ ಬೆದರಿಕೆಯನ್ನು ಅಮೆರಿಕದ ರಕ್ಷಣಾ ಇಲಾಖೆಯ ಇನ್ಸ್‌ಪೆಕ್ಟರ್ ಜನರಲ್ ಕಚೇರಿ ಒಪ್ಪಿಕೊಂಡಿರುವುದು ಇದೇ ಮೊದಲ ಬಾರಿಯಾಗಿದೆ.

‘‘ಹಕ್ಕಾನಿ ನೆಟ್‌ವರ್ಕ್, ಈಸ್ಟರ್ನ್ ತುರ್ಕಿಸ್ತಾನ್ ಇಸ್ಲಾಮಿಕ್ ಮೂವ್‌ಮೆಂಟ್ ಮತ್ತು ಲಷ್ಕರೆ ತಯ್ಯಬ- ಈ ಗುಂಪುಗಳು ಅಫ್ಘಾನಿಸ್ತಾನದಲ್ಲಿರುವ ಅಮೆರಿಕ ಮತ್ತು ಮಿತ್ರಪಡೆಗಳಿಗೆ ಅತ್ಯಂತ ಹೆಚ್ಚಿನ ಬೆದರಿಕೆಯನ್ನು ಒಡ್ಡಿರುವ ಗುಂಪುಗಳು ಎಂಬುದಾಗಿ ಗುರುತಿಸಲಾಗಿದೆ’’ ಎಂದು ಅಮೆರಿಕ ರಕ್ಷಣಾ ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News