ಅಮೆರಿಕದ ವಿದ್ಯಾರ್ಥಿ ವೀಸಾ ದುಬಾರಿ

Update: 2019-05-23 15:16 GMT

ವಾಶಿಂಗ್ಟನ್, ಮೇ 23: ಅಮೆರಿಕ ಬುಧವಾರ ವಿದ್ಯಾರ್ಥಿ ವೀಸಾ ಶುಲ್ಕವನ್ನು 150 ಡಾಲರ್ (ಸುಮಾರು 10,500 ರೂಪಾಯಿ)ನಷ್ಟು ಹೆಚ್ಚಿಸಿದೆ. ಅಂದರೆ, ಶುಲ್ಕವು ಈಗಿನ 200 ಡಾಲರ್ (ಸುಮಾರು 14,000 ರೂಪಾಯಿ)ನಿಂದ 350 ಡಾಲರ್ (ಸುಮಾರು 24,500 ರೂಪಾಯಿ)ಗೆ ಹೆಚ್ಚಿದೆ. ಶುಲ್ಕದಲ್ಲಿ ಒಟ್ಟಾರೆ 75 ಶೇಕಡ ಏರಿಕೆಯಾಗಿದ್ದು, ವಿದೇಶಿಯರ, ಅದರಲ್ಲೂ ಮುಖ್ಯವಾಗಿ ಭಾರತೀಯರ ಅಮೆರಿಕ ಶಿಕ್ಷಣ ದುಬಾರಿಯಾಗಲಿದೆ.

ವಿದ್ಯಾರ್ಥಿಗಳ ಎಫ್ (ಅಕಾಡಮಿಕ್) ಮತ್ತು ಎಂ (ನಾನ್-ಅಕಾಡಮಿಕ್, ವೃತ್ತಿಪರ) ವೀಸಾ ವಿಭಾಗಗಳಿಗೆ ಶುಲ್ಕ ಹೆಚ್ಚಳ ಅನ್ವಯವಾಗಲಿದ್ದು, ಜೂನ್ 24ರಿಂದ ಜಾರಿಗೆ ಬರಲಿದೆ ಎಂದು ಅಮೆರಿಕ ಪೌರತ್ವ ಮತ್ತು ವಲಸೆ ಸೇವೆಗಳ ಇಲಾಖೆ ತಿಳಿಸಿದೆ.

ವಿದ್ಯಾರ್ಥಿ ವಿನಿಮಯ ಸಂದರ್ಶಕ ಕಾರ್ಯಕ್ರಮದಡಿ ಬರುವ ಇತರ ಸೇವೆಗಳ ಶುಲ್ಕಗಳಲ್ಲು ಏರಿಕೆಯಾಗಿದೆ.

ಕೆಲವು ‘ಜೆ’ ವೀಸಾಗಳ ಶುಲ್ಕವು 180 ಡಾಲರ್ (ಸುಮಾರು 12,600 ರೂಪಾಯಿ)ನಿಂದ 220 ಡಾಲರ್ (ಸುಮಾರು 15,400 ರೂಪಾಯಿ)ಗೆ ಹೆಚ್ಚಿದೆ. ಎಸ್‌ಇವಿಪಿ ಸ್ಕೂಲ್ ಸರ್ಟಿಫಿಕೇಶನ್ ಪಿಟಿಶನ್ ಶುಲ್ಕವು 1,700 ಡಾಲರ್ (ಸುಮಾರು 1.19 ಲಕ್ಷ ರೂಪಾಯಿ)ನಿಂದ 3,000 ಡಾಲರ್ (ಸುಮಾರು 2.10 ಲಕ್ಷ ರೂಪಾಯಿ)ಗೆ ಹೆಚ್ಚಳವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News