ಉಡುಪಿ-ಚಿಕ್ಕಮಗಳೂರು: ಶೋಭಾ ಕರಂದ್ಲಾಜೆಗೆ ದಾಖಲೆ ಮತಗಳ ಅಂತರದ ಗೆಲುವು

Update: 2019-05-23 15:51 GMT

ಉಡುಪಿ, ಮೇ 23: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವನ್ನು ಬಿಜೆಪಿ ಮತ್ತೊಮ್ಮೆ ತಮ್ಮ ಕೈವಶ ಮಾಡಿಕೊಳ್ಳುವಲ್ಲಿ ಯಶಸ್ವಿಯಾ ಗಿದೆ. ಬಿಜೆಪಿಯ ಶೋಭಾ ಕರಂದ್ಲಾಜೆ ಅವರು ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್ ಚಿಹ್ನೆಯಲ್ಲಿ ಸ್ಪರ್ಧಿಸಿದ ಕಾಂಗ್ರೆಸ್‌ನ ಮಾಜಿ ಸಚಿವ ಪ್ರಮೋದ್ ಮಧ್ವರಾಜ್‌ರನ್ನು ಯಾರೂ ಸಹ ನಿರೀಕ್ಷಿಸದ ರೀತಿಯಲ್ಲಿ 3,49,599 ಮತಗಳ ದಾಖಲೆಯ ಅಂತರದಿಂದ ಪರಾಭವಗೊಳಿಸಿ ಕರಾವಳಿಯಲ್ಲಿ ಬಿಜೆಪಿಯ ಪಾರಮ್ಯವನ್ನು ಮತ್ತೊಮ್ಮೆ ಸಾಬೀತು ಪಡಿಸಿದರು.

ಶೋಭಾ ಕರಂದ್ಲಾಜೆ ಅವರಿಗೆ ಮರು ಸ್ಪರ್ಧೆಗೆ ಟಿಕೇಟ್ ನೀಡುವ ಮುನ್ನ ಬಿಜೆಪಿಯ ಕಾರ್ಯಕರ್ತರಿಂದಲೇ ಸ್ಪರ್ಧೆಗೆ ತೀವ್ರ ಪ್ರತಿರೋಧವನ್ನು ಎದುರಿಸಿದ್ದ ಶೋಭಾ ಕಟ್ಟಾ ಬಿಜೆಪಿ ಬೆಂಬಲಿಗರೂ ನಿರೀಕ್ಷೆ ಮಾಡಿರದ ರೀತಿಯಲ್ಲಿ ಮೊದಲ ಸುತ್ತಿನಿಂದಲೇ ಮುನ್ನಡೆ ಸಾಧಿಸುತ್ತಾ ಪ್ರತಿ ಸುತ್ತಿನಲ್ಲೂ ಕನಿಷ್ಠ 20ರಿಂದ 23,000 ಮತಗಳಿಂದ ತನ್ನ ಮುನ್ನಡೆಯನ್ನು ಹೆಚ್ಚಿಸಿಕೊಳ್ಳುತ್ತಾ ಸಾಗಿ 5ನೇ ಸುತ್ತಿನಲ್ಲಿ ತನ್ನ ಮುನ್ನಡೆಯನ್ನು ಒಂದು ಲಕ್ಷದ ಗಡಿ ದಾಟಿಸಿಕೊಂಡರು. ಈ ಮುನ್ನಡೆ ಹತ್ತನೇ ಸುತ್ತಿನಲ್ಲಿ ಎರಡು ಲಕ್ಷ ಮತಗಳ ಅಂತರಕ್ಕೇರಿದರೆ, 15ನೇ ಸುತ್ತಿನಲ್ಲಿ ಅದು ಮೂರು ಲಕ್ಷದ ಗಡಿಯನ್ನೂ ದಾಟಿತು.

ಒಟ್ಟು 20 ಸುತ್ತುಗಳ ಮತ ಹಾಗೂ ಅಂಚೆ ಮತಗಳ ಎಣಿಕೆ ಪೂರ್ಣ ಗೊಂಡಾಗ ಅಂತಿಮವಾಗಿ ಶೋಭಾ ಕರಂದ್ಲಾಜೆ ಅವರ ವಿಜಯದ ಅಂತರ 3,49,599 ಲಕ್ಷಕ್ಕೇರಿತು. 2014ರಲ್ಲಿ ಶೋಭಾ ಕರಂದ್ಲಾಜೆ ಅವರು ತನ್ನ ಎದುರಾಳಿಯಾಗಿದ್ದ ಕೆ.ಜಯಪ್ರಕಾಶ್ ಹೆಗ್ಡೆ ಅವರನ್ನು 1,81,643 ಮತಗಳ ಅಂತರದಿಂದ ಪರಾಭವಗೊಳಿಸಿದ್ದು, ಉಡುಪಿ ಹಾಗೂ ಚಿಕ್ಕಮಗಳೂರು ಕ್ಷೇತ್ರದಲ್ಲಿ ಈವರೆಗಿನ ಗೆಲುವಿನ ಅಂತರದ ದಾಖಲೆಯಾಗಿತ್ತು.

ಶೋಭಾ ಕರಂದ್ಲಾಜೆ ಅವರು ಕ್ಷೇತ್ರದಲ್ಲಿ ಅಂಚೆಮತಗಳು ಸೇರಿದಂತೆ ಚಲಾವಣೆಯಾದ ಒಟ್ಟು 11,51,623 ಮತಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚು ಅಂದರೆ ಒಟ್ಟು 7,18,916 ಮತಗಳನ್ನು ಬುಟ್ಟಿಗೆ ಹಾಕಿಕೊಂಡರೆ, ಕಾಂಗ್ರೆಸ್‌ನ ಪ್ರಮೋದ್ ಮಧ್ವರಾಜ್ ಅವರು 3,69,317 ಮತ ಗಳನ್ನು ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ಈ ಮೂಲಕ ಶೋಭಾ ಅವರು ತನ್ನ ಸಮೀಪದ ಪ್ರತಿಸ್ಪರ್ಧಿಯಾದ ಪ್ರಮೋದ್ ಮಧ್ವರಾಜ್‌ರನ್ನು 3,49,599 ಮತಗಳ ಅಂತರಗಿಂದ ಹಿಮ್ಮೆಟ್ಟಿಸಿ ಸತತ ಎರಡನೇ ಬಾರಿಗೆ ಕ್ಷೇತ್ರದ ಸಂಸದೆಯಾಗಿ ಚುನಾಯಿತರಾದರು.

 ಉಳಿದಂತೆ ಸ್ಪರ್ಧಾಕಣದಲ್ಲಿದ್ದ ಬಹುಜನ ಸಮಾಜ ಪಾರ್ಟಿಯ ಪಿ.ಪರಮೇಶ್ವರ್, ಶಿವಸೇನೆಯ ಪಿ.ಗೌತಮ ಪ್ರಭು, ಉತ್ತಮ ಪ್ರಜಾಕಿಯ ಪಾರ್ಟಿಯ ಸುರೇಸ್ ಕುಂದರ್ ಹಾಗೂ ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿಯಾಗಿ ಪಕ್ಷೇತರರಾಗಿ ಸ್ಪರ್ಧಿಸಿದ ಪಿ.ಅಮೃತ ಶೆಣೈ ಸೇರಿದಂತೆ 10 ಮಂದಿ ಅಭ್ಯರ್ಥಿಗಳು ಹೀನಾಯ ಸೋಲನನುಭವಿಸಿ ಠೇವಣಿಯನ್ನು ಕಳೆದುಕೊಂಡರು.

ನೋಟಾಗೆ 5ನೇ ಸ್ಥಾನ: ಬಿಎಸ್ಪಿಯಿಂದ ಸ್ಪರ್ಧಿಸಿದ ಪರಮೇಶ್ವರ ಅವರು 15,947 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದರೆ, 7981 ಮತಗಳನ್ನು ಪಡೆದ ಅಮೃತ ಶೆಣೈ ನಾಲ್ಕನೇ ಸ್ಥಾನವನ್ನಷ್ಟೇ ಪಡೆದರು. ನಂತರದ ಸ್ಥಾನ ಮತಯಂತ್ರದಲ್ಲಿದ್ದ ‘ನೋಟಾ’ಕ್ಕೆ ಲಭಿಸಿತು.

ಕ್ಷೇತ್ರದ ಒಟ್ಟು 7510 ಮಂದಿ ಸ್ಪರ್ಧಿಸಿದ 12 ಅಭ್ಯರ್ಥಿಗಳ ಕುರಿತು ತಮ್ಮ ಅಸಮ್ಮತಿಯನ್ನು ಸೂಚಿಸಿ ‘ನೋಟಾ’ಕ್ಕೆ ಮತ ಹಾಕಿದ್ದರು. ಪ್ರತಿ ಸುತ್ತಿನ ಮತಗಳ ಎಣಿಕೆಯ ವೇಳೆಯೂ ಕನಿಷ್ಠ 400ರಿಂದ 500 ಮತಗಳನ್ನು ಪಡೆಯುತ್ತಾ ಸಾಗಿದ ‘ನೋಟಾ’ ಎಣಿಕೆ ಕೊನೆಗೊಂಡಾಗ ಒಟ್ಟು 7510 ಜನರ ಸಹಮತವನ್ನು ಸಂಪಾದಿಸುವಲ್ಲಿ ಯಶಸ್ಸು ಕಂಡಿತ್ತು.

661 ಅಂಚೆಮತಗಳು ತಿರಸ್ಕೃತ: ಚಲಾವಣೆಗೊಂಡ ಒಟ್ಟು 2492 ಅಂಚೆ ಮತಗಳಲ್ಲಿ 661 ಮತಗಳು ತಿರಸ್ಕೃತಗೊಂಡು ಅಚ್ಚರಿ ಮೂಡಿಸಿದವು. 1881 ಸಿಂಧು ಅಂಚೆ ಮತಗಳಲ್ಲಿ ಶೋಭಾ ಕರಂದ್ಲಾಜೆ ಅವರು 1434 ಮತಗಳನ್ನು ಪಡೆದರೆ, ಪ್ರಮೋದ್ ಮಧ್ವರಾಜ್‌ಗೆ 385 ಅಂಚೆ ಮತಗಳು ಲಭಿಸಿದವು. ವಿಶೇಷವೆಂದರೆ 8 ಮಂದಿ ನೋಟಾಕ್ಕೆ ತಮ್ಮ ಮತ ನೀಡಿದ್ದರು. ಉಳಿದಂತೆ ಪರಮೇಶ್ವರ್‌ಗೆ 37, ಶೇಖರ್ ಹಾವಂಜೆಗೆ 8, ಕಾ.ವಿಜಯಕುವಾರ್‌ಗೆ 3 ಅಂಚೆಮತಗಳು ಬಿದ್ದವು.

ನೋಟಾಕ್ಕೆ 7510 ಮತ: ಮತಯಂತ್ರದಲ್ಲಿ ಎರಡನೇ ಬಾರಿಗೆ ಸ್ಥಾನ ಪಡೆದಿದ್ದ ನೋಟಾ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಗಮನ ಸೆಳೆಯುವಷ್ಟು ಮತಗಳನ್ನು ಪಡೆಯಲು ಯಶಸ್ವಿಯಾಗಿದೆ. ಎಂಟು ಕ್ಷೇತ್ರಗಳಲ್ಲಿ ಒಟ್ಟು 7510 ಮಂದಿ ನೋಟಾಕ್ಕೆ ತಮ್ಮ ಒಪ್ಪಿಗೆ ಸೂಚಿಸಿದ್ದರು.
ಇದರಲ್ಲಿ ಕ್ಷೇತ್ರವಾರು ಮತಗಳನ್ನು ಗಣನೆಗೆ ತೆಗೆದುಕೊಂಡಾಗ ಕುಂದಾಪುರ ವಿಧಾನಸಭಾ ಕ್ಷೇತ್ರ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಇಲ್ಲಿ 1258 ಮಂದಿ ನೋಟಾಕ್ಕೆ ತನ್ನ ಮುದ್ರೆ ಒತ್ತಿದ್ದಾರೆ. ಉಳಿದಂತೆ ಉಡುಪಿಯಲ್ಲಿ 930 ಮಂದಿ, ಕಾಪು 760, ಕಾರ್ಕಳದಲ್ಲಿ 873, ಶೃಂಗೇರಿಯಲ್ಲಿ 853, ಮೂಡಿಗೆರೆಯಲ್ಲಿ 1059, ಚಿಕ್ಕಮಗಳೂರಲ್ಲಿ 960 ಹಾಗೂ ತರೀಕೆರೆಯಲ್ಲಿ 809 ಮಂದಿ ನೋಟಾಕ್ಕೆ ತಮ್ಮ ಮುದ್ರೆ ಒತ್ತಿದ್ದಾರೆ.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದ 12 ಮಂದಿ ಅಭ್ಯರ್ಥಿಗಳು ಪಡೆದಿರುವ ಮತಗಳ ಅಂತಿಮ ವಿವರ ಹೀಗಿದೆ.

ಒಟ್ಟು ಮತಗಳು (ಅಂಚೆಮತಗಳು ಸೇರಿ):11,51,623
1.ಪಿ.ಪರಮೇಶ್ವರ (ಬಹುಜನ ಸಮಾಜ ಪಾರ್ಟಿ): 15,947
2.ಪ್ರಮೋದ್ ಮಧ್ವರಾಜ್ (ಜಾತ್ಯತೀತ ಜನತಾದಳ):3,69,317
3.ಶೋಭಾ ಕರಂದ್ಲಾಜೆ (ಬಿಜೆಪಿ): 7,18,916
4.ಪಿ.ಗೌತಮ್ ಪ್ರಭು (ಶಿವಸೇನೆ): 7,431
5.ಎಂ.ಕೆ.ದಯಾನಂದ (ಪ್ರೌಟಿಸ್ಟ್ ಸರ್ವ ಸಮಾಜ): 3,539
6.ಕಾ.ವಿಜಯಕುಮಾರ್ (ಸಿಪಿಐ(ಎಂಎಲ್) ರೆಡ್‌ಸ್ಟಾರ್): 2,216
7.ಶೇಖರ ಹಾವಂಜೆ (ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ): 1,581
8. ಸುರೇಶ್ ಕುಂದರ್ (ಉತ್ತಮ ಪ್ರಜಾಕೀಯ ಪಾರ್ಟಿ): 3,488
9.ಅಬ್ದುಲ್ ರೆಹಮಾನ್(ಪಕ್ಷೇತರ): 6017
10.ಅಮೃತ್ ಶೆಣೈ ಪಿ.(ಪಕ್ಷೇತರ): 7981
11.ಮಗ್ಗಲಮಕ್ಕಿ ಗಣೇಶ್(ಪಕ್ಷೇತರ): 3526
12.ಕೆ.ಸಿ.ಪ್ರಕಾಶ್ (ಪಕ್ಷೇತರ): 3543
13.ನೋಟಾ ಮತಗಳು: 7510
ತಿರಸ್ಕೃತ ಅಂಚೆ ಮತಗಳು: 611

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News