ದಿಗ್ವಿಜಯ್ ಸಿಂಗ್ ವಿರುದ್ಧ ಭರ್ಜರಿ ಅಂತರದಿಂದ ಗೆದ್ದ ಪ್ರಜ್ಞಾ ಸಿಂಗ್

Update: 2019-05-23 15:53 GMT

  ಭೋಪಾಲ, ಮೇ 23: ಬಿಜೆಪಿ ನಾಯಕಿ, ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ ಪ್ರಜ್ಞಾ ಸಿಂಗ್ ಠಾಕೂರ್ ಗೆ ಪ್ರಥಮ ಪ್ರಯತ್ನದಲ್ಲೇ ಸಂಸತ್ ಪ್ರವೇಶಿಸುವ ಅವಕಾಶ ದೊರಕಿದ್ದು ಮಧ್ಯಪ್ರದೇಶದ ಭೋಪಾಲ್ ಸಂಸದೀಯ ಕ್ಷೇತ್ರದಲ್ಲಿ ತನ್ನ ಎದುರಾಳಿ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ವಿರುದ್ಧ 2.55 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

  2008ರ ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿಯಾಗಿರುವ ಪ್ರಜ್ಞಾ ಸಿಂಗ್ ಆರೋಗ್ಯದ ಕಾರಣದಿಂದ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ. ಭಯೋತ್ಪಾದಕ ಕೃತ್ಯದ ಆರೋಪಿಯಾಗಿರುವ ಪ್ರಜ್ಞಾ ಸಿಂಗ್‌ಗೆ ಲೋಕಸಭಾ ಚುನಾವಣೆಯ ಟಿಕೆಟ್ ನೀಡಿರುವ ಬಿಜೆಪಿ ಕ್ರಮ ಧಾರ್ಮಿಕ ಭಾವನೆಗಳ ಆಧಾರದಲ್ಲಿ ಮತ ಕ್ರೋಢೀಕರಣದ ಯತ್ನವಾಗಿದೆ ಎಂದು ಹಲವು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಸೂಚಿಸಿದ್ದರು. ಭೋಪಾಲ ಸಂಸದೀಯ ಕ್ಷೇತ್ರದಲ್ಲಿ ಸುಮಾರು 20.53 ಲಕ್ಷ ಮತದಾರರಿದ್ದು ಇದರಲ್ಲಿ 4.5 ಲಕ್ಷ ಮುಸ್ಲಿಂ ಸಮುದಾಯದವರು.

ಗೆಲುವು ಖಚಿತವಾಗುತ್ತಿರುವಂತೆಯೇ ಸುದ್ದಿಗಾರರ ಜೊತೆ ಮಾತನಾಡಿದ ಅವರು, ತನ್ನ ಗೆಲುವು ಸದಾಚಾರದ ಗೆಲುವಾಗಿದೆ ಮತ್ತು ಪಾಪಿತನದ ವಿನಾಶಕ್ಕೆ ಮುನ್ನುಡಿಯಾಗಿದೆ. ಈ ಗೆಲುವಿಗಾಗಿ ಭೋಪಾಲದ ಜನರಿಗೆ ಆಭಾರಿಯಾಗಿದ್ದೇನೆ. ಎಲ್ಲಕ್ಕಿಂತ ಮಿಗಿಲಾಗಿ, ಕಳೆದ ಐದು ವರ್ಷ ದೇಶಕ್ಕಾಗಿ ಕಾರ್ಯನಿರ್ವಹಿಸಿದ ಮೋದಿಯವರ ಮೇಲೆ ಜನತೆ ವಿಶ್ವಾಸ ಇರಿಸಿದ್ದಾರೆ. ನಾವೆಲ್ಲಾ ಕಾರ್ಮಿಕರ ಸೇನೆಯಂತೆ ಕಾರ್ಯ ನಿರ್ವಹಿಸುತ್ತೇವೆ ಎಂದು ಪ್ರಜ್ಞಾ ಹೇಳಿದ್ದಾರೆ. ಆದರೆ ಗೋಡ್ಸೆ ಕುರಿತ ತನ್ನ ಹೇಳಿಕೆಯನ್ನು ಪ್ರಧಾನಿ ಮೋದಿ ಕಟು ಮಾತುಗಳಲ್ಲಿ ಖಂಡಿಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News