ದಾಖಲೆಯ ಎತ್ತರ ತಲುಪಿದ ಸೆನ್ಸೆಕ್ಸ್ ಸೂಚ್ಯಂಕ

Update: 2019-05-23 16:30 GMT

ಮುಂಬೈ, ಮೇ 23: ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭಾರೀ ಬಹುಮತದತ್ತ ಸಾಗುವ ಸೂಚನೆ ದೊರಕುತ್ತಿದ್ದಂತೆಯೇ ಶೇರು ಮಾರುಕಟ್ಟೆಯಲ್ಲಿ ಗುರುವಾರ ಬೆಳಗ್ಗಿನ ಅವಧಿಯಲ್ಲಿ ಸೆನ್ಸೆಕ್ಸ್ ಸೂಚ್ಯಂಕದಲ್ಲಿ 1 ಸಾವಿರ ಅಂಕದಷ್ಟು ಏರಿಕೆಯಾಗಿದ್ದು 40,124 ಅಂಕಕ್ಕೆ ತಲುಪಿದೆ.

ಇದೇ ವೇಳೆ ನಿಫ್ಟಿ ಸೂಚ್ಯಂಕವು ಇದೇ ಪ್ರಥಮ ಬಾರಿಗೆ 12 ಸಾವಿರ ಅಂಕದ ಗಡಿಯನ್ನು ತಲುಪಿದೆ. ಆದರೆ ಮಧ್ಯಾಹ್ನದ ಬಳಿಕ ಈ ಟ್ರೆಂಡ್ ಬದಲಾಗಿದ್ದು ಸೆನ್ಸೆಕ್ಸ್ 39,456.96 ಮತ್ತು ನಿಫ್ಟಿ 11,848.35 ಅಂಕಕ್ಕೆ ಕುಸಿದಿದೆ. ರಿಲಯನ್ಸ್ ಇಂಡಸ್ಟ್ರೀಸ್, ಇಂಡಸ್‌ಇಂಡ್ ಬ್ಯಾಂಕ್, ಯೆಸ್ ಬ್ಯಾಂಕ್, ಲಾರ್ಸೆನ್ ಆ್ಯಂಡ್ ಟೋಬ್ರೋ, ಎಸ್‌ಬಿಐ ಮತ್ತು ಐಸಿಐಸಿಐ ಬ್ಯಾಂಕ್ ಸೆನ್ಸೆಕ್ಸ್ ಅಂಕ ಏರಿಕೆಯಲ್ಲಿ ಹೆಚ್ಚಿನ ಲಾಭ ಪಡೆದಿವೆ. ಅದಾನಿ ಪೋರ್ಟ್ಸ್, ಇಂಡಸ್‌ಇಂಡ್ ಬ್ಯಾಂಕ್, ಝೀ ಎಂಟರ್‌ಟೈನ್‌ಮೆಂಟ್, ಯೆಸ್ ಬ್ಯಾಂಕ್ ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ನಿಫ್ಟಿ ಸೂಚ್ಯಂಕದ ಲಾಭ ಪಡೆದ ಸಂಸ್ಥೆಗಳು.

ಈ ಮಧ್ಯೆ ಐಟಿಸಿ, ವೇದಾಂತ, ಎಚ್‌ಡಿಎಫ್‌ಸಿ ಬ್ಯಾಂಕ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಮತ್ತು ಟಾಟಾ ಮೋಟರ್ಸ್‌ನ ಶೇರು ಬೆಲೆ ಸೆನ್ಸೆಕ್ಸ್‌ನಲ್ಲಿ ಇಳಿಕೆಯಾದರೆ, ನಿಫ್ಟಿ ಸೂಚ್ಯಂಕದಲ್ಲಿ ಐಟಿಸಿ, ಐಷರ್ ಮೋಟಾರ್ಸ್, ವೇದಾಂತ, ಹಿಂಡಾಲ್ಕೊ ಮತ್ತು ಬಜಾಜ್ ಫಿನ್‌ಸರ್ವ್ ಸಂಸ್ಥೆಗಳ ಶೇರು ಬೆಲೆ ಇಳಿಕೆಯಾಗಿದೆ. ಸೋಮವಾರ ಪ್ರಕಟವಾದ ಚುನಾವಣೋತ್ತರ ಸಮೀಕ್ಷೆಯು ಎನ್‌ಡಿಎ ಪೂರ್ಣ ಬಹುಮತದೊಂದಿಗೆ ಅಧಿಕಾರ ಉಳಿಸಿಕೊಳ್ಳಲಿದೆ ಎಂದು ಭವಿಷ್ಯ ನುಡಿದ ಹಿನ್ನೆಲೆಯಲ್ಲಿ ಶೇರು ಮಾರುಕಟ್ಟೆಯಲ್ಲಿ ಚೇತರಿಕೆ ಕಂಡುಬಂದಿತ್ತು. ಅಮೆರಿಕದ ಡಾಲರ್ ಎದುರು ಭಾರತದ ರೂಪಾಯಿ ವೌಲ್ಯ ಕುಸಿತ ಕಂಡು 69.67 ರೂ.ಗೆ ತಲುಪಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News