ಸೋಲು ಒಪ್ಪಿಕೊಳ್ಳಲು ನಿರಾಕರಿಸಿದ ಆರ್‌ಜೆಡಿ ಅಭ್ಯರ್ಥಿ

Update: 2019-05-23 17:16 GMT

  ಪಾಟ್ನ, ಮೇ 23: ಬಿಹಾರದ ಸಿವಾನ್ ಕ್ಷೇತ್ರದ ಅಭ್ಯರ್ಥಿಯಾಗಿರುವ ಆರ್‌ಜೆಡಿ ಅಭ್ಯರ್ಥಿ, ಮಾಫಿಯಾ ಡಾನ್ ರಾಜಕಾರಣಿ ಮುಹಮ್ಮದ್ ಶಹಾಬುದ್ದೀನ್ ಪತ್ನಿ ಹೀನಾ ಶಹಾಬ್ ಸೋಲನ್ನು ಒಪ್ಪಿಕೊಳ್ಳಲು ನಿರಾಕರಿಸಿ ಚುನಾವಣೆಯನ್ನು ರದ್ದುಗೊಳಿಸಲು ಆಗ್ರಹಿಸಿದ ಘಟನೆ ನಡೆದಿದೆ.

ಈ ಸಂದರ್ಭ ಹೀನಾ ಅವರ ಬೆಂಬಲಿಗರು ಹಾಗೂ ಜೆಡಿಯು ಬೆಂಬಲಿಗರ ಮಧ್ಯೆ ಘರ್ಷಣೆ ನಡೆದಾಗ ಅವರನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿದರು. ಚುನಾವಣೆ ಸಂದರ್ಭ ಜನತೆಯ ಮನಸ್ಥಿತಿಗೂ ತನಗೆ ಚಲಾವಣೆಯಾಗಿರುವ ಮತಗಳ ಪ್ರಮಾಣದಲ್ಲೂ ಭಾರೀ ವ್ಯತ್ಯಾಸವಿದೆ ಎಂದು ಹೀನಾ ಚುನಾವಣಾಧಿಕಾರಿಗೆ ದೂರು ನೀಡಿದರು. ಈ ಕ್ಷೇತ್ರದಲ್ಲಿ ಹೀನಾ ಎನ್‌ಡಿಎ ಅಭ್ಯರ್ಥಿ ಕವಿತಾ ಸಿಂಗ್ ಎದುರು 1 ಲಕ್ಷಕ್ಕೂ ಅಧಿಕ ಮತಗಳ ಹಿನ್ನಡೆಯಲ್ಲಿದ್ದಾಗ ಈ ಘಟನೆ ನಡೆದಿದೆ.

ಇವಿಎಂಗಳಲ್ಲಿ ಅಕ್ರಮ ನಡೆದಿದ್ದು ನಾನು ಫಲಿತಾಂಶ ಒಪ್ಪಿಕೊಳ್ಳುವುದಿಲ್ಲ. ಎಣಿಕೆಯನ್ನು ನಿಲ್ಲಿಸಿ ಚುನಾವಣೆ ರದ್ದುಗೊಳಿಸಬೇಕು ಎಂದು ಹೀನಾ ಲಿಖಿತ ಮನವಿ ನೀಡಿದರು. ಈ ಸಂದರ್ಭ ಜೆಡಿಯು ಮತ್ತು ಆರ್‌ಜೆಡಿ ಬೆಂಬಲಿಗರ ಮಧ್ಯೆ ಘರ್ಷಣೆ ನಡೆಯಿತು. ಬಳಿಕ ಪೊಲೀಸರು ಲಾಠಿಚಾರ್ಜ್ ನಡೆಸಿದರು. ಕಾನೂನು ಸುವ್ಯವಸ್ಥೆಗಾಗಿ ಸ್ಥಳದಲ್ಲಿ ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News