ಬಿಜೆಪಿ ಮತ ಗಳಿಕೆಯಲ್ಲೂ ಗಮನಾರ್ಹ ಏರಿಕೆ

Update: 2019-05-23 17:26 GMT

ಹೊಸದಿಲ್ಲಿ, ಮೇ.23: 2019ರ ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿರುವ ಬಿಜೆಪಿ ದೇಶದ 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತ ಗಳಿಕೆಯಲ್ಲೂ ಶೇ. 50ರಷ್ಟು ಏರಿಕೆ ದಾಖಲಿಸಿದೆ. ಇದೇ ವೇಳೆ ಕಾಂಗ್ರೆಸ್ ಕೇವಲ ಪುದುಚೆರಿಯಲ್ಲಿ ಈ ಸಾಧನೆ ಮಾಡಿದೆ.

ಚುನಾವಣಾ ಆಯೋಗದ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ ಮತ್ತು ಆಂಧ್ರ ಪ್ರದೇಶದಂತಹ ರಾಜಕೀಯವಾಗಿ ಪ್ರಮುಖ ರಾಜ್ಯಗಳಲ್ಲಿ ಕಾಂಗ್ರೆಸ್‌ನ ಮತ ಗಳಿಕೆ ಶೇಕಡಾವಾರು ಒಂದಂಕಿಯಲ್ಲೇ ಉಳಿದಿದೆ. 2019ರ ಲೋಕಸಭಾ ಚುನಾವಣೆಯ ರಾಜ್ಯವಾರು ಮತ ಗಳಿಕೆ ಗಮನಿಸಿದರೆ,ಬಿಜೆಪಿ ಉತ್ತರ ಪ್ರದೇಶದಲ್ಲಿ ಶೇ. 50 ಮತಗಳನ್ನು ಗಳಿಸಿದೆ. ಇನ್ನು ಹರ್ಯಾಣ, ಮಧ್ಯ ಪ್ರದೇಶ, ರಾಜಸ್ಥಾನ, ಛತ್ತೀಸ್‌ಗಡ, ಉತ್ತರಾಖಂಡ, ಗುಜರಾತ್, ಜಾರ್ಖಂಡ್, ಹಿಮಾಚಲ ಪ್ರದೇಶ, ಗೋವಾ, ಕರ್ನಾಟಕ, ದಿಲ್ಲಿ, ಚಂಡೀಗಡ ಮತ್ತು ಅರುಣಾಚಲ ಪ್ರದೇಶದಲ್ಲಿ ಶೇ.50ಕ್ಕಿಂತಲೂ ಅಧಿಕ ಮತ ಗಳಿಸಿದೆ.

ಕಾಂಗ್ರೆಸ್ ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಶೇ.6 ಮತ್ತು ಬಿಹಾರದಲ್ಲಿ ಶೇ.7 ಮತಗಳನ್ನು ಪಡೆದುಕೊಂಡಿದೆ. ಆಂಧ್ರ ಪ್ರದೇಶ ಮತ್ತು ಸಿಕ್ಕಿಂನಲ್ಲಿ ಕಾಂಗ್ರೆಸ್ ಕೇವಲ ಶೇ.1 ಮತವನ್ನಷ್ಟೇ ಪಡೆಯಲು ಶಕ್ತವಾಗಿದೆ. ಕಾಂಗ್ರೆಸ್ ಅತ್ಯುತ್ತಮ ಸಾಧನೆ ತೋರಿರುವ ಪಂಜಾಬ್‌ನಲ್ಲೂ ಪಕ್ಷದ ಮತ ಗಳಿಕೆ ಶೇ. 40 ಆಗಿದ್ದರೆ ಪುದುಚೆರಿಯಲ್ಲಿ ಮಾತ್ರ ಕಾಂಗ್ರೆಸ್ ಶೇ.57 ಮತಗಳನ್ನು ಗಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News