58 ಪಕ್ಷಾಂತರಿಗಳಲ್ಲಿ ಗೆದ್ದವರೆಷ್ಟು ಮಂದಿ?: ಇಲ್ಲಿದೆ ಮಾಹಿತಿ

Update: 2019-05-23 17:31 GMT

ಹೊಸದಿಲ್ಲಿ, ಮೇ 23: ಚುನಾವಣೆ ಬಂದಾಗ ಪಕ್ಷದಿಂದ ಪಕ್ಷಕ್ಕೆ ಜಿಗಿಯುವ ನಾಯಕರು ಈ ಬಾರಿಯ ಸಂಸದೀಯ ಚುನಾವಣೆಯಲ್ಲಿ ನಿರೀಕ್ಷಿತ ಸಾಧನೆ ತೋರಿಲ್ಲ. 58 ಪಕ್ಷಾಂತರಿಗಳಲ್ಲಿ ಗೆಲುವು ಸಾಧಿಸಿದವರು ಕೇವಲ 13 ಮಂದಿ ಮಾತ್ರ ಎಂದು ಚುನಾವಣಾ ಆಯೋಗದ ಅಂಕಿಅಂಶ ತಿಳಿಸಿದೆ.

ಲೋಕಸಭೆ ಚುನಾವಣೆ ಘೋಷಣೆಯಾದ ಬಳಿಕ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡ ಶತ್ರುಘ್ನ ಸಿನ್ಹ, ಬಿಹಾರದ ಪಾಟ್ನ ಸಾಹಿಬ್ ಕ್ಷೇತ್ರದಲ್ಲಿ ತನ್ನ ಸಮೀಪದ ಪ್ರತಿಸ್ಪರ್ಧಿ , ಬಿಜೆಪಿ ಮುಖಂಡ, ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಎದುರು ಸೋಲುಂಡಿದ್ದಾರೆ. ಮಾಧೇಪುರ ಕ್ಷೇತ್ರದಲ್ಲಿ ಮಾಜಿ ಜೆಡಿಯು ಮುಖಂಡ, ಚುನಾವಣೆ ಸಂದರ್ಭ ಆರ್‌ಜೆಡಿಗೆ ಸೇರ್ಪಡೆಗೊಂಡ ಶರದ್ ಪವಾರ್ ಜೆಡಿಯುನ ದಿನೇಶ್‌ಚಂದ್ರ ಯಾದವ್ ವಿರುದ್ಧ ಸೋತಿದ್ದಾರೆ. ಶರದ್ ಪವಾರ್‌ರ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ ತ್ಯಜಿಸಿ ಕಾಂಗ್ರೆಸ್ ಸೇರಿದ್ದ ತಾರಿಖ್ ಅನ್ವರ್ ಕಥಿಯಾರ್ ಕ್ಷೇತ್ರದಲ್ಲಿ ಸೋಲುಂಡಿದ್ದಾರೆ. ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿರುವ ಮಾಜಿ ಕ್ರಿಕೆಟಿಗ ಕೀರ್ತಿ ಆಝಾದ್ ಧನಬಾದ್ ಕ್ಷೇತ್ರದಲ್ಲಿ ಸೋತಿದ್ದಾರೆ.

ಬಾರ್ಮರ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಕೇಂದ್ರ ಸಚಿವ ಜಸ್ವಂತ್ ಸಿನ್ಹರ ಪುತ್ರ ಮಾನವೇಂದ್ರ ಸಿಂಗ್ ಕೂಡಾ ಸೋತಿದ್ದಾರೆ. ಕಳೆದ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಭೋಜ್ ಪುರಿ ಸಿನೆಮ ನಟ ರವಿಕಿಶನ್ ಶುಕ್ಲ ಗೋರಖ್‌ಪುರ ಕ್ಷೇತ್ರದಿಂದ ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ದಾಖಲಿಸಿದ್ದಾರೆ. ಅದೇ ರೀತಿ ಕರ್ನಾಟಕದಲ್ಲಿ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಸೇರ್ಪಡೆಗೊಂಡಿರುವ ಮೂವರು ನಾಯಕರಲ್ಲಿ ಉಮೇಶ್ ಯಾದವ್ ಮತ್ತು ವೈ. ದೇವೇಂದ್ರಪ್ಪ ಕ್ರಮವಾಗಿ ಗುಲ್ಬರ್ಗ ಮತ್ತು ಬಳ್ಳಾರಿಯಲ್ಲಿ ಗೆಲುವು ದಾಖಲಿಸಿದ್ದರೆ ಎ ಮಂಜು ಹಾಸನ ಕ್ಷೇತ್ರದಲ್ಲಿ ಸೋಲುಂಡಿದ್ದಾರೆ. ಹಿರಿಯ ಕಾಂಗ್ರೆಸ್ ಮುಖಂಡ ರಾಧಾಕೃಷ್ಣ ವಿಖೆ ಪಾಟೀಲ್ ಪುತ್ರ ಸುಜಯ್ ವಿಖೆ ಪಾಟೀಲ್ ಬಿಜೆಪಿಗೆ ಸೇರ್ಪಡೆಗೊಂಡು ಮಹಾರಾಷ್ಟ್ರದ ಅಹ್ಮದ್‌ನಗರ ಸಂಸದೀಯ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.

ಶಿವಸೇನೆ ತ್ಯಜಿಸಿ ಕಾಂಗ್ರೆಸ್ ಸೇರ್ಪಡೆಗೊಂಡು ಮಹಾರಾಷ್ಟ್ರದ ಚಂದ್ರಾಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸುರೇಶ್ ಧನೋರ್ಕರ್ ಹಾಲಿ ಬಿಜೆಪಿ ಸಂಸದ ಹಂಸರಾಜ್ ಗಂಗಾರಾಮ್ ಆಹಿರ್ ಎದುರು ಗೆದ್ದಿದ್ದಾರೆ. ಶಿವಸೇನೆ ತ್ಯಜಿಸಿ ಬಿಜೆಪಿಗೆ ಸೇರ್ಪಡೆಗೊಂಡಿರುವ ಪ್ರತಾಪ್ ಚಿಖ್ಲೀಕರ್ ನಾಂದೇಡ್‌ನಲ್ಲಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಚೌಹಾಣ್ ಎದುರು ಗೆದ್ದಿದ್ದಾರೆ. ಬಿಜೆಡಿಯಿಂದ ಉಚ್ಛಾಟನೆಗೊಂಡು ಬಿಜೆಪಿ ಟಿಕೆಟ್ ಪಡೆದು ಕೇಂದ್ರಪಾರ ಕ್ಷೇತ್ರದಿಂದ ಸ್ಪರ್ಧಿಸಿರುವ ಬೈಜಯಂತ್ ಪಾಂಡ ಸೋಲುಂಡಿದ್ದಾರೆ. ಕಾಂಗ್ರೆಸ್ ಬಿಟ್ಟು ಟಿಡಿಪಿ ಸೇರ್ಪಡೆಗೊಂಡು ತಿರುಪತಿ ಸಂಸದೀಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಾಜಿ ಕೇಂದ್ರ ಸಚಿವೆ ಪಿ.ಲಕ್ಷ್ಮೀ ಸೋತಿದ್ದಾರೆ. ಅಲ್ಲದೆ ಪಟಿಯಾಲ ಕ್ಷೇತ್ರದ ಆಪ್ ಅಭ್ಯರ್ಥಿ ಧರ್ಮವೀರ ಗಾಂಧಿ, ಬಿಜ್ನೋರ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಸೀಮುದ್ದೀನ್ ಸಿದ್ದಿಖಿ, ಬಹರೈಚ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಾವಿತ್ರಿ ಬಾಯಿ ಫುಲೆ, ದಾಹೋಡ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಾಬು ಕತಾರಾ ಕೂಡಾ ಸೋಲುಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News