ಎಲ್ಲಾ ಬೂತ್ ಗಳಲ್ಲಿ ಗಡ್ಕರಿಗೆ 559 ಮತ: ಕಾಂಗ್ರೆಸ್ ಅಭ್ಯರ್ಥಿಯ ಆರೋಪ

Update: 2019-05-23 17:36 GMT

ನಾಗ್‌ಪುರ, ಮೇ 23: ವಿದ್ಯುನ್ಮಾನ ಮತಯಂತ್ರಗಳ ಪರಿಶೀಲನೆಗೆ ತನ್ನ ಚುನಾವಣಾ ಏಜೆಂಟರಿಗೆ ಅವಕಾಶ ನಿರಾಕರಿಸಲಾಗಿದೆ ಎಂದು ನಾಗ್‌ಪುರ ಕ್ಷೇತ್ರದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಎದುರು ಸ್ಪರ್ಧಿಸಿ ಸೋತಿರುವ ಕಾಂಗ್ರೆಸ್ ಅಭ್ಯರ್ಥಿ ನಾನಾ ಪಟೋಲೆ ದೂರಿದ್ದಾರೆ.

ಮತ ಎಣಿಕೆ ಪ್ರಗತಿಯಲ್ಲಿರುವಂತೆಯೇ ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದ ಪಟೋಲೆ ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿಯವರನ್ನು ಭೇಟಿಯಾದರು. ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಇವಿಎಂಗಳಲ್ಲಿ ಎಣಿಕೆಯಾದ ಮತ ಹಾಗೂ ವಿವಿಪ್ಯಾಟ್ ರಶೀದಿಗಳ ಕುರಿತು ಚುನಾವಣಾಧಿಕಾರಿ ಮಾಹಿತಿ ನೀಡಬೇಕು ಎಂದರು. ಕೆಲವು ವ್ಯತ್ಯಾಸಗಳು ಕಂಡು ಬಂದ ಕಾರಣ ನಾವು ಇವಿಎಂ ಪರಿಶೀಲನೆಗೆ ಅವಕಾಶ ಕೋರಿದೆವು. ನಾಗ್‌ಪುರ ಪೂರ್ವ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬೂತ್‌ಗಳಲ್ಲಿ ಗಡ್ಕರಿ ಏಕರೀತಿಯ 559 ಮತಗಳನ್ನು ಪಡೆದಿದ್ದಾರೆ. ಎಲ್ಲಾ ಬೂತ್‌ಗಳಲ್ಲೂ ಏಕರೀತಿಯ ಮತ ಪಡೆಯಲು ಸಾಧ್ಯವಿಲ್ಲ. ಮತಯಂತ್ರಗಳಲ್ಲಿ ಸಮಸ್ಯೆ ಇರುವುದನ್ನು ಇದು ಸೂಚಿಸುತ್ತದೆ ಎಂದು ಪಟೋಲೆ ಹೇಳಿದರು. ನಮಗೆ ಮತಯಂತ್ರಗಳನ್ನು ಪರಿಶೀಲಿಸುವ ಅಧಿಕಾರವಿದೆ. ಆದರೆ ಅದನ್ನು ನಿರಾಕರಿಸಲಾಗಿದೆ. ಈ ಬಗ್ಗೆ ಚುನಾವಣಾಧಿಕಾರಿಗೆ ಲಿಖಿತ ಆಕ್ಷೇಪಣಾ ಪತ್ರ ನೀಡಿರುವುದಾಗಿ ಪಟೋಲೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News