ಪಂಜಾಬ್: ಕಾಂಗ್ರೆಸ್‌ಗೆ 8, ಬಿಜೆಪಿ-ಎಸ್‌ಎಡಿಗೆ ತಲಾ 2, ಆಪ್‌ಗೆ 1 ಸ್ಥಾನ

Update: 2019-05-23 18:07 GMT

ಚಂಡಿಗಡ,ಮೇ 23: ಗುರುವಾರ ಸಾರ್ವತ್ರಿಕ ಚುನಾವಣೆಗಳ ಫಲಿತಾಂಶದಲ್ಲಿ ಇಡೀ ದೇಶದಲ್ಲಿ ಹಿನ್ನಡೆ ಅನುಭವಿಸಿದ್ದರೂ ಪಂಜಾಬ್‌ನಲ್ಲಿ ಮಾತ್ರ ಕಾಂಗ್ರೆಸ್ ಪಕ್ಷವು ತನ್ನ ಸ್ಥಾನ ಗಳಿಕೆಯನ್ನು ಹೆಚ್ಚಿಸಿಕೊಂಡಿದೆ. ರಾಜ್ಯದಲ್ಲಿಯ ಒಟ್ಟು 13 ಸ್ಥಾನಗಳ ಪೈಕಿ ಅದು ಎಂಟು ಸ್ಥಾನಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದ್ದರೆ,ಶಿರೋಮಣಿ ಅಕಾಲಿ ದಳ(ಎಸ್‌ಎಡಿ)-ಬಿಜೆಪಿ ಮೈತ್ರಿಕೂಟ ನಾಲ್ಕು ಮತ್ತು ಆಪ್ ಒಂದು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿವೆ.

ಎಸ್‌ಎಡಿ ವರಿಷ್ಠ ಸುಖಬೀರ್ ಸಿಂಗ್ ಬಾದಲ್ ಅವರು ಫಿರೋಝ್‌ಪುರದಲ್ಲಿ ಕಾಂಗ್ರೆಸ್‌ನ ಶೇರ್‌ಸಿಂಗ್ ಘುಬಾಯಾರನ್ನು ಸೋಲಿಸಿದರೆ,ಕೇಂದ್ರ ಸಚಿವೆ ಹರ್ಸಿಮ್ರತ್ ಕೌರ್ ಬಾದಲ್ ಅವರು ಬಠಿಂಡಾದಲ್ಲಿ ಮೂರನೇ ಬಾರಿಗೆ ಪುನರಾಯ್ಕೆಯಾಗಿದ್ದಾರೆ. ಅವರು ಕಾಂಗ್ರೆಸ್‌ನ ಅಮರಿಂದರ್ ಸಿಂಗ್ ರಾಜಾ ವಾರಿಂಗ್‌ರನ್ನು ಪರಾಭವಗೊಳಿಸಿದ್ದಾರೆ.

 ಹೋಷಿಯಾರ್‌ಪುರ ಮತ್ತು ಗುರುದಾಸಪುರ ಕ್ಷೇತ್ರಗಳು ಬಿಜೆಪಿ ಪಾಲಾಗಿವೆ. ಹೋಷಿಯಾರ್‌ಪುರದಲ್ಲಿ ಸೋಮ ಪ್ರಕಾಶ ಅವರು ಗೆಲುವು ಸಾಧಿಸಿದರೆ,ಗುರುದಾಸಪುರದಲ್ಲಿ ನಟ-ರಾಜಕಾರಣಿ ಸನ್ನಿ ದೇವಲ್ ಅವರು ವಿಜಯಿಯಾಗಿದ್ದಾರೆ. ಅವರು ರಾಜ್ಯ ಕಾಂಗ್ರೆಸ್ ವರಿಷ್ಠ ಸುನಿಲ ಜಾಖಡ್‌ರನ್ನು ಪರಾಭವಗೊಳಿಸಿದ್ದಾರೆ.

ಸಂಗ್ರೂರು ಕ್ಷೇತ್ರದಲ್ಲಿ ಆಪ್‌ನ ರಾಜ್ಯ ಮುಖ್ಯಸ್ಥ ಭಗವಂತ ಮಾನ್ ಅವರು ಗೆದ್ದಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿಗಳ ಪೈಕಿ ಅಮೃತಸರದಲ್ಲಿ ಗುರ್ಜೀತ್ ಸಿಂಗ್ ಔಜ್ಲಾ,ಫರೀದಕೋಟ್‌ನಲ್ಲಿ ಮುಹಮ್ಮದ್ ಸಾದಿಕ್,ಆನಂದಪುರ ಸಾಹಿಬ್‌ನಲ್ಲಿ ಮನೀಷ್ ತಿವಾರಿ,ಜಲಂಧರ್‌ನಲ್ಲಿ ಸಂತೋಕಸಿಂಗ್ ಚೌಧರಿ, ಲುಧಿಯಾನಾದಲ್ಲಿ ರವನೀತ ಸಿಂಗ್ ಬಿಟ್ಟು,ಫತೇಗಡ ಸಾಹಿಬ್‌ನಲ್ಲಿ ಅಮರಸಿಂಗ್,ಖಡೂರ್‌ಸಾಹಿಬ್‌ನಲ್ಲಿ ಜಸ್ಬೀರ್ ಸಿಂಗ್ ಗಿಲ್ ಮತ್ತು ಪಟಿಯಾಳಾದಲ್ಲಿ ಪ್ರಣೀತ್ ಕೌರ್ ಅವರು ಗೆಲುವು ಸಾಧಿಸಿದ್ದಾರೆ.

ಕೇಂದ್ರ ಸಚಿವ ಹರ್ದೀಪ ಸಿಂಗ್ ಪುರಿ ಅವರು ಅಮೃತಸರ ಕ್ಷೇತ್ರದಲ್ಲಿ ಸೋಲನ್ನಪ್ಪಿದ್ದಾರೆ.

2014ರ ಲೋಕಸಭಾ ಚುನಾವಣೆಗಳಲ್ಲಿ ಎಸ್‌ಎಡಿ-ಬಿಜೆಪಿ ಮೈತಿಕೂಟ ಆರು,ಆಪ್ ಮತ್ತು ಕಾಂಗ್ರೆಸ್ ಅನುಕ್ರಮವಾಗಿ ಮೂರು ಮತ್ತು ನಾಲ್ಕು ಸ್ಥಾನಗಳನ್ನು ಗೆದ್ದಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News