ಕೇರಳದಲ್ಲಿ 'ಕಮಲ' ಅರಳಲು ಶಬರಿಮಲೆಯೂ ನೆರವಾಗಲಿಲ್ಲ

Update: 2019-05-24 03:49 GMT

ತಿರುವನಂತಪುರ, ಮೇ 24: ಇಡೀ ದೇಶ ಮೋದಿ ಅಲೆಯಲ್ಲಿ ತೇಲುತ್ತಿದ್ದರೆ ಕೇರಳದಲ್ಲಿ ಮಾತ್ರ ರಿವರ್ಸ್ ಸ್ವೀಪ್! ಮೋದಿ ಅಲೆಗೆ ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ಈ ದಕ್ಷಿಣ ರಾಜ್ಯ ಗಟ್ಟಿಯಾಗಿ ಕಾಂಗ್ರೆಸ್ ಬೆಂಬಲಕ್ಕೆ ನಿಂತಿದೆ. ಯುಪಿಎಫ್ ಇಲ್ಲಿ ಅಭೂತಪೂರ್ವ ಜಯ ಸಾಧಿಸಿದ್ದು, 20 ಸ್ಥಾನಗಳ ಪೈಕಿ 19ನ್ನು ಬುಟ್ಟಿಗೆ ಹಾಕಿಕೊಂಡಿದೆ. ಭಾರತದಲ್ಲಿ ಎಡಪಕ್ಷಗಳ ಏಕೈಕ ಕೋಟೆ ಎನಿಸಿದ ಕೇರಳದಲ್ಲೂ ಕಮ್ಯುನಿಸ್ಟ್ ಪಾರ್ಟಿ ಹೀನಾಯ ಸೋಲು ಕಂಡಿದೆ.

ಸಹಜವಾಗಿಯೇ ಶಬರಿಮಲೆ ವಿವಾದವು ಫಲಿತಾಂಶದ ಮೇಲೆ ಪರಿಣಾಮ ಬೀರಿದೆ. ಆದರೆ ಅದು ಮಾತ್ರ ಅಂದಾಜಿಸಿದ್ದಕ್ಕಿಂತ ಭಿನ್ನ. ಎಡಪಕ್ಷಗಳ ಹೀನಾಯ ಸೋಲಿಗೆ ಶಬರಿಮಲೆ ವಿವಾದ ಕಾರಣವಾಗಿದೆ. ಆದರೆ ಇದರ ಲಾಭ ಪಡೆಯುವ ಬಿಜೆಪಿ ತಂತ್ರಗಾರಿಕೆ ಮಾತ್ರ ಫಲಿಸಲಿಲ್ಲ. ದೇವರ ನಾಡಿನಲ್ಲಿ ಖಾತೆ ತೆರೆಯುವ ಬಿಜೆಪಿ ಕನಸು ಇನ್ನೂ ನನಸಾಗಿಲ್ಲ. 1977ರ ಚುನಾವಣೆಯಲ್ಲಿ ಯುಪಿಎಫ್ ಎಲ್ಲ 20 ಸ್ಥಾನಗಳನ್ನು ಗೆದ್ದದ್ದು ಬಿಟ್ಟರೆ, ಯುಡಿಎಫ್‌ನ ಅತ್ಯುತ್ತಮ ಸಾಧನೆ ಇದಾಗಿದೆ.

ಎಡಪಕ್ಷಗಳ ಕಳಪೆ ಸಾಧನೆ ಬಗ್ಗೆ ಅದರಲ್ಲೂ ಮುಖ್ಯವಾಗಿ ಶಬರಿಮಲೆ ವಿವಾದದ ಬಗ್ಗೆ ಸಿಎಂ ಪಿಣರಾಯಿ ವಿಜಯನ್ ಏನು ಹೇಳುತ್ತಾರೆ ಎನ್ನುವ ಕುತೂಹಲ ಇದೆ.

ವಿರೋಧ ಪಕ್ಷದ ನಾಯಕ ರಮೇಶ್ ಚೆನ್ನಿತ್ತಲ ಮತ್ತು ಕೆಪಿಸಿಸಿ ಮುಖ್ಯಸ್ಥ ಮುಲ್ಲಪ್ಪಳ್ಳಿ ರಾಮಚಂದ್ರನ್ ಈಗಾಗಲೇ ಸಿಎಂ ರಾಜೀನಾಮೆಗೆ ಆಗ್ರಹಿಸಿದ್ದಾರೆ. ಪಿಣರಾಯಿ ವಿಜಯನ್ ಅವರ ಸೊಕ್ಕು ಹಾಗೂ ಎಡಪಕ್ಷಗಳ ಜನವಿರೋಧಿ ಧೋರಣೆಗಳಿಗೆ ಇದು ಜನತೆ ನೀಡಿದ ಉತ್ತರ ಎಂದು ಬಣ್ಣಿಸಿದ್ದಾರೆ. ಆಲಪ್ಪುಳ ಕ್ಷೇತ್ರ ಮಾತ್ರ ಎಡಪಕ್ಷಗಳಿಗೆ ಆಸರೆಯಾಗಿದೆ. ರಾಜ್ಯದ ಲೋಕಸಭಾ ಸ್ಥಾನಗಳಿಗೆ ಸ್ಪರ್ಧಿಸಿದ್ದ ಒಂಬತ್ತು ಶಾಸಕರ ಪೈಕಿ ನಾಲ್ವರು ಜಯ ಸಾಧಿಸಿದ್ದಾರೆ. ಎರಡು ಸ್ಥಾನಗಳನ್ನು ಗೆಲ್ಲುವ ಹುಮ್ಮಸ್ಸಿನಲ್ಲಿದ್ದ ಬಿಜೆಪಿ ತಿರುವನಂತಪುರದಲ್ಲಿ ಎರಡನೇ ಸ್ಥಾನ ಗಳಿಸಲಷ್ಟೇ ಸಾಧ್ಯವಾಗಿದೆ. ಪಟ್ಟಣಂತಿಟ್ಟ ಹಾಗೂ ತ್ರಿಶ್ಶೂರಿನಲ್ಲಿ 2.93 ಲಕ್ಷ ಮತಗಳನ್ನು ಬಿಜೆಪಿ ಪಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News